
ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತವಾಗಿತ್ತು. ಸಿನಿಮಾ ಸಹ ಉತ್ತಮ ಗಳಿಕೆಯನ್ನು ಬಾಕ್ಸ್ ಆಫೀಸ್ನಲ್ಲಿ ಮಾಡುತ್ತಿದೆ. ಆದರೆ ಇದೀಗ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ. ಈ ವಾರ ಪರಭಾಷೆಯ ಕೆಲ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಉತ್ತಮ ಪ್ರದರ್ಶನ ಕಾಣುತ್ತಿರುವ ‘ಯುದ್ಧಕಾಂಡ’ ಸಿನಿಮಾ ಮಂಡಿಯೂರುವ ಪರಿಸ್ಥಿತಿ ಬಂದಿದೆ. ಇದೀಗ ಸಿನಿಮಾದ ನಿರ್ಮಾಪಕ ಹಾಗೂ ನಟರೂ ಆಗಿರುವ ಅಜಯ್ ರಾವ್ ಅವರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅಜಯ್ ರಾವ್, ಮಲ್ಟಿಪ್ಲೆಕ್ಸ್ಗಳ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಕನ್ನಡ ಸಿನಿಮಾಗಳಿಗೆ ಎದುರಾಗಿದೆ. ಮಲ್ಟಿಪ್ಲೆಕ್ಸ್ಗಳು ಕನ್ನಡ ಸಿನಿಮಾಗಳಿಗೆ ಅನುಕೂಲಕರವಲ್ಲದ ಶೋ ಟೈಂಗಳನ್ನು ನೀಡುತ್ತಿವೆ. ಒಳ್ಳೆಯ ಶೋ ಟೈಂ ಕೊಡಿ ಎಂದು ನಾವು ಭಿಕ್ಷೆ ಬೇಡಬೇಕಾಗಿದೆ. ನಮ್ಮ ಸಿನಿಮಾಕ್ಕೆ ಈ ಮುಂಚೆಯೂ ಅನಾನುಕೂಲಕರವಾದ ಶೋ ಟೈಂ ಕೊಟ್ಟಿದ್ದರು. ಆದರೆ ಜನ ಬಂದು ಸಿನಿಮಾ ನೋಡಿ ಯಶಸ್ಸು ತಂದುಕೊಟ್ಟರು’ ಎಂದಿದ್ದಾರೆ ಅಜಯ್ ರಾವ್.
‘ಈಗ ಮಲ್ಟಿಪ್ಲೆಕ್ಸ್ನವರು ನಮಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ಈ ಗುರುವಾರ ಕೆಲ ಪರಭಾಷೆಯ ಸಿನಿಮಾಗಳು ಬಿಡುಗಡೆ ಆಗಲಿದ್ದು, ನಮ್ಮ ಸಿನಿಮಾದ ಶೋಗಳ ಸಂಖ್ಯೆ ಕಡಿಮೆ ಮಾಡುತ್ತಿರುವ ಜೊತೆಗೆ ಶೋನ ಸಮಯವನ್ನು ಬದಲಾಯಿಸುತ್ತಿದ್ದಾರೆ. ಒಳ್ಳೆಯ ಶೋ ಟೈಮ್ ಕೊಡಿ ಎಂದು ಬೇಡಿಕೊಂಡರೂ ನಮ್ಮ ಮನವಿ ತಿರಸ್ಕರಿಸಿ, ಪರಭಾಷೆ ಸಿನಿಮಾಗಳಿಗೆ ಮಣೆ ಹಾಕಲಾಗುತ್ತಿದೆ’ ಎಂದಿದ್ದಾರೆ ಅಜಯ್ ರಾವ್.
ಇದನ್ನೂ ಓದಿ:ಸೆಂಟಿಮೆಂಟ್ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
‘ಈ ಕುರಿತು ಫಿಲಂ ಚೇಂಬರ್, ಕನ್ನಡಪರ ಸಂಘಟನೆಗಳು, ಕಲಾವಿದರ ಸಂಘಗಳು ಪ್ರಶ್ನೆ ಮಾಡಬೇಕಿದೆ. ನಾನು ಈ ಬಗ್ಗೆ ಮಲ್ಟಿಪ್ಲೆಕ್ಸ್ಗಳನ್ನು ಪ್ರಶ್ನೆ ಮಾಡುತ್ತಿದ್ದು, ನಾನು ಮಲ್ಟಿಪ್ಲೆಕ್ಸ್ಗಳ ಈ ನಡೆಯನ್ನು ಖಂಡಿಸುತ್ತಿದ್ದು, ಸಂಘಟನೆಗಳು ನನ್ನ ಪ್ರಯತ್ನಕ್ಕೆ ಕೈಜೋಡಿಸಿ. ಕನ್ನಡ ಸಿನಿಮಾಗಳ ಜೊತೆಗೆ, ಕನ್ನಡ ಸಂಸ್ಕೃತಿ ಮತ್ತು ಭಾಷೆಯ ಉಳಿವಿನ ಪ್ರಯತ್ನವೂ ಸಹ ಇದಾಗಿದೆ’ ಎಂದಿದ್ದಾರೆ ಅಜಯ್ ರಾವ್.
ಅಜಯ್ ರಾವ್ ನಟಿಸಿರುವ ‘ಯುದ್ಧಕಾಂಡ’ ಸಿನಿಮಾ ಕೋರ್ಟ್ ಡ್ರಾಮಾ ಆಗಿದ್ದು, ಕಳೆದ ವಾರ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಜಯ್ ರಾವ್ ಜೊತೆಗೆ ಪ್ರಕಾಶ್ ಬೆಳವಾಡಿ ಸಹ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಲ ಮಾಡಿ ಸಿನಿಮಾ ಮಾಡಿದ್ದಾಗಿ ಅಜಯ್ ರಾವ್ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಅವರೇ ಈಗ ಹೇಳಿಕೊಂಡಿರುವಂತೆ ಸಿನಿಮಾ ಯಶಸ್ವಿಯಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ