
ನಟ ಕಿಚ್ಚ ಸುದೀಪ್ (Kichcha Sudeep) ಅವರು ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಅನೇಕ ವರ್ಷಗಳ ಹಿಂದೆಯೇ ಅವರು ಪರಭಾಷೆಯಲ್ಲಿ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಅವರು ನಟಿಸಿರುವ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಏಕಕಾಲಕ್ಕೆ ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿನಲ್ಲಿ ಜುಲೈ 28ರಂದು ರಿಲೀಸ್ ಆಗಲಿರುವ ಈ ಸಿನಿಮಾಗೆ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಸಾಥ್ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೇಲರ್ ಹಂಚಿಕೊಳ್ಳುವ ಮೂಲಕ ‘ಬಿಗ್ ಬಿಗ್’ ಬೆಂಬಲ ನೀಡಿದ್ದಾರೆ. ಇದರಿಂದಾಗಿ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ.
ಈ ಹಿಂದೆ ‘ರಣ್’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಿಚ್ಚ ಸುದೀಪ್ ಅವರು ಜೊತೆಯಾಗಿ ನಟಿಸಿದ್ದರು. ಆ ದಿನಗಳಿಂದಲೂ ಅವರ ನಡುವೆ ಬಾಂಧವ್ಯ ಇದೆ. ಈಗ ಕಿಚ್ಚನ ಸಿನಿಮಾ ಬಗ್ಗೆ ಅವರು ಟ್ವೀಟ್ ಮಾಡಿರುವುದರಿಂದ ಹಿಂದಿ ಪ್ರೇಕ್ಷಕರ ವಲಯದಲ್ಲಿ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಬಹಳ ಅದ್ದೂರಿಯಾಗಿ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗಿದೆ.
ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ನಟಿಸಿದ್ದಾರೆ. ‘ರಾರಾ ರಕ್ಕಮ್ಮ..’ ಹಾಡಿನ ಜೊತೆಗೆ ಒಂದು ದೃಶ್ಯದಲ್ಲೂ ಅವರು ಅಭಿನಯಿಸಿದ್ದಾರೆ ಎಂಬುದು ವಿಶೇಷ. ಈ ಹಾಡು ಈಗಾಗಲೇ ಧೂಳೆಬ್ಬಿಸಿದೆ. ಕೆಲವೇ ದಿನಗಳ ಹಿಂದೆ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರು ಈ ಗೀತೆಗೆ ರೀಲ್ಸ್ ಮಾಡಿದ್ದರು. ಆ ಮೂಲಕ ಅವರು ತಮ್ಮ ಗೆಳೆಯ ಸುದೀಪ್ಗೆ ವಿಶ್ ಮಾಡಿದ್ದರು. ಈ ಎಲ್ಲ ಕಾರಣದಿಂದಾಗಿ ರಿಲೀಸ್ಗೂ ಮುನ್ನವೇ ‘ವಿಕ್ರಾಂತ್ ರೋಣ’ ಸಿನಿಮಾ ಬಾಲಿವುಡ್ ಮಂದಿಯ ಗಮನ ಸೆಳೆದಿದೆ.
ನಿರ್ಮಾಪಕ ಜಾಕ್ ಮಂಜು ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರಿಗೆ ಅಲಂಕಾರ್ ಪಾಂಡಿಯನ್ ಸಾಥ್ ನೀಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. 3ಡಿ ಟ್ರೇಲರ್ ನೋಡಿದ ಅನೇಕ ಸೆಲೆಬ್ರಿಟಿಗಳು ‘ವಿಕ್ರಾಂತ್ ರೋಣ’ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಕಾತರದಿಂದ ಕಾದಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Sudeep: ‘ನಾನು-ಶಿವಣ್ಣ ಕೆಲವು ಸಮಯ ಮಾತಾಡ್ತಾ ಇರಲಿಲ್ಲ, ಕಾರಣ ಹುಡುಕ್ತಾ ಹೋದ್ರೆ..’; ಸುದೀಪ್ ನೇರ ಮಾತು
Kichcha Sudeep: ಕೇರಳದಲ್ಲಿ ‘ವಿಕ್ರಾಂತ್ ರೋಣ’: ಕೊಚ್ಚಿಗೆ ತೆರಳಿದ ಕಿಚ್ಚ ಸುದೀಪ್ಗೆ ಅಭಿಮಾನಿಗಳ ಆತ್ಮೀಯ ಸ್ವಾಗತ
Published On - 12:46 pm, Mon, 27 June 22