ಬಿಡುಗಡೆಗೆ ಸಜ್ಜಾಯಿತು ಕಿಶೋರ್ ನಟನೆಯ ‘ಅನಾಮಧೇಯ ಅಶೋಕ್ ಕುಮಾರ್’ ಸಿನಿಮಾ

ಟೈಟಲ್ ಕಾರಣದಿಂದಲೇ ‘ಅನಾಮಧೇಯ ಅಶೋಕ್ ಕುಮಾರ್’ ಸಿನಿಮಾ ಕೌತುಕ ಮೂಡಿಸಿದೆ. ಈ ಚಿತ್ರದಲ್ಲಿ ಕಿಶೋರ್​ ಕುಮಾರ್​, ಹರ್ಷಿಲ್ ಕೌಶಿಕ್ ಮುಂತಾದವರು ನಟಿಸಿದ್ದಾರೆ. ಸಾಗರ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಿಶೋರ್​ ಅವರು ಈ ಚಿತ್ರದಲ್ಲಿ ಪತ್ರಕರ್ತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ‘ಅನಾಮಧೇಯ ಅಶೋಕ್ ಕುಮಾರ್’ ಬಿಡುಗಡೆ ಆಗಲಿದೆ.

ಬಿಡುಗಡೆಗೆ ಸಜ್ಜಾಯಿತು ಕಿಶೋರ್ ನಟನೆಯ ‘ಅನಾಮಧೇಯ ಅಶೋಕ್ ಕುಮಾರ್’ ಸಿನಿಮಾ
Kishore Kumar, Harshil Koushik

Updated on: Jan 23, 2025 | 9:36 PM

ಬಹುಭಾಷೆಯ ಸಿನಿಮಾಗಳ ಮೂಲಕ ದೇಶಾದ್ಯಂತ ಜನಪ್ರಿಯತೆ ಪಡೆದಿರುವ ಖ್ಯಾತ ಕಲಾವಿದ ಕಿಶೋರ್ ಕುಮಾರ್ ಮತ್ತು ‘ಆಚಾರ್ ಆ್ಯಂಡ್ ಕೋ’ ಸಿನಿಮಾದ ಮೂಲಕ ಗಮನ ಸೆಳೆದಿರುವ ಹರ್ಷಿಲ್ ಕೌಶಿಕ್ ಅವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ‘ಅನಾಮಧೇಯ ಅಶೋಕ್ ಕುಮಾರ್‌’ ಸಿನಿಮಾ ಬಗ್ಗೆ ಒಂದು ಅಪ್​ಡೇಟ್​ ಸಿಕ್ಕಿದೆ. ಸಾಗರ್ ಕುಮಾರ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾ ಶೂಟಿಂಗ್ ಮುಕ್ತಾಯ ಆಗಿದೆ. ಅಲ್ಲದೇ, ಪೋಸ್ಟ್ ಪ್ರೊಡಕ್ಷನ್​ ಚಟುವಟಿಕೆಗಳು ಕೂಡ ಪೂರ್ಣವಾಗಿವೆ. ‘ಅನಾಮಧೇಯ ಅಶೋಕ್ ಕುಮಾರ್‌’ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ.

ಈ ಸಿನಿಮಾದಲ್ಲಿ ವಿಭಿನ್ನ ಕಥಾಹಂದರ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೋಷನ್ ಪೋಸ್ಟರ್ ಮೂಲಕ ಮೋಡಿ ಮಾಡಿರುವ ಈ ಸಿನಿಮಾ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಡೈರೆಕ್ಟರ್ ಸಾಗರ್ ಕುಮಾರ್ ಅವರೇ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಬೆನ್ನಿ ಥಾಮಸ್ ಮತ್ತು ಸಾಗರ್ ಕುಮಾರ್ ಅವರು ಚಿತ್ರಕಥೆ ಬರೆದಿದ್ದಾರೆ. ಮೂಲತಃ ಐಟಿ ಉದ್ಯೋಗಿ ಆಗಿರುವ ಸಾಗರ್ ಕುಮಾರ್ ಅವರಿಗೆ‌ ನಿರ್ದೇಶನದಲ್ಲಿ ಇದು ಮೊದಲ ಸಿನಿಮಾ.

‘ಅನಾಮಧೇಯ ಅಶೋಕ್ ಕುಮಾರ್‌’ ಸಿನಿಮಾದಲ್ಲಿ ಪತ್ರಕರ್ತನ ಪಾತ್ರವನನ್ನು ಕಿಶೋರ್ ಅವರು ನಿಭಾಯಿಸಿದ್ದಾರೆ. ಹರ್ಷಿಲ್ ಕೌಶಿಕ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಧೀಂದ್ರನ್ ನಾಯರ್, ಕಾಂತರಾಜ್ ಕಡ್ಡಿಪುಡಿ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ. ಸುನೀಲ್ ಹೊನಳ್ಳಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಕೆ. ಯೇಸು ಅವರು ಸಂಕಲನ ಮಾಡಿದ್ದಾರೆ.

ಇದನ್ನೂ ಓದಿ: ‘ತಾಯವ್ವ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಹಾಡು ಬಿಡುಗಡೆ ಮಾಡಿದ ಸುದೀಪ್

ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಕಿಶೋರ್ ಕುಮಾರ್ ಅವರು ಮೆಚ್ಚುಗೆ ಸೂಚಿಸಿದ್ದಾರೆ‌. ‘ಈ ಸಿನಿಮಾ ನನ್ನ ಪಾತ್ರ ಕೂಡ ವಿಭಿನ್ನವಾಗಿದೆ’ ಎಂದು ನಟ ಹರ್ಷಿಲ್ ಕೌಶಿಕ್ ಹೇಳಿದ್ದಾರೆ. ಅವರು ನಟಿಸಿರುವ ಇನ್ನೆರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ‘ಅನಾಮಧೇಯ ಅಶೋಕ್ ಕುಮಾರ್‌’ ಸಿನಿಮಾವನ್ನು ಎಸ್‌.ಕೆ.ಎನ್. ಫಿಲ್ಮ್ಸ್ ಮೂಲಕ ನಿರ್ಮಲಾ ಕುಮಾರ್ ಮತ್ತು ರಮ್ಯಾ ಸಾಗರ್ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಕಿಶೋರ್ ಕುಮಾರ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿವೆ. ಆಜಾದ್ ಅವರು ಸಂಗೀತ ಸಂಯೋಜಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.