ದೊಡ್ಮನೆ ಎಂದೇ ಕರೆಯಲ್ಪಡುವ ಡಾ. ರಾಜ್ಕುಮಾರ್ ಅವರ ಕುಟುಂಬಕ್ಕೆ ಸಿನಿಮಾಗಳ ನಿರ್ಮಾಣ ಹೊಸದೇನೂ ಅಲ್ಲ. ಆ ಕುಟುಂಬದ ಕುಡಿ ನಿವೇದಿತಾ ಶಿವರಾಜ್ಕುಮಾರ್ ಕೂಡ ಸಿನಿಮಾಗಳ ನಿರ್ಮಣದಲ್ಲಿ ತೊಡಗಿಕೊಂಡಿದ್ದಾರೆ. ಅವರು ಬಂಡವಾಳ ಹೂಡಿರುವ ಮೊದಲ ಸಿನಿಮಾ ‘ಫೈರ್ ಫ್ಲೈ’ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಸಿನಿಮಾದ ಆಡಿಯೋ ಸೇಲ್ ಬಗ್ಗೆ ಸುದ್ದಿ ಸಿಕ್ಕಿದೆ. ದೊಡ್ಡ ಮೊತ್ತಕ್ಕೆ ‘ಫೈರ್ ಫ್ಲೈ’ ಸಿನಿಮಾದ ಹಾಡುಗಳ ಪ್ರಸಾರದ ಹಕ್ಕನ್ನು ‘ಆನಂದ್ ಆಡಿಯೋ’ ಸಂಸ್ಥೆ ಖರೀದಿಸಿದೆ. ಈ ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಒಂದಷ್ಟು ಕಾರಣಗಳಿಂದಾಗಿ ‘ಫೈರ್ ಫ್ಲೈ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಚರಣ್ ರಾಜ್ ಅವರು ಈ ಹಿಂದಿನ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ಫೈರ್ ಫ್ಲೈ’ ಸಿನಿಮಾದ ಹಾಡುಗಳನ್ನು ಕೇಳಲು ಅಭಿಮಾನಿಗಳು ಕಾದಿದ್ದಾರೆ. ಶೀಘ್ರದಲ್ಲೇ ‘ಆನಂದ್ ಆಡಿಯೋ’ ಮೂಲಕ ಹಾಡುಗಳು ಬಿಡುಗಡೆ ಆಗಲಿವೆ.
ಶಿವರಾಜ್ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣ ಮಾಡಿದ ಸಿನಿಮಾ ಎಂಬ ಕಾರಣದಿಂದಲೂ ಈ ಚಿತ್ರ ಹೈಪ್ ಪಡೆದುಕೊಂಡಿದೆ. ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಚ್ಯುತ್ ಕುಮಾರ್ ಮತ್ತು ಸುಧಾರಾಣಿ ಅವರಿಗೆ ಈ ಸಿನಿಮಾದಲ್ಲಿ ಪ್ರಮುಖವಾದ ಪಾತ್ರಗಳು ಇವೆ. ನಿರ್ದೇಶಕ ವಂಶಿ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮುಖ್ಯಭೂಮಿಕೆಯಲ್ಲೂ ಅವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: ವಿನಯ್ ರಾಜ್ಕುಮಾರ್ ನಟನೆಯ ಪೆಪೆ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಶನ್
ಈ ಸಿನಿಮಾದ ಮೂಲಕ ವಂಶಿ ಅವರು ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ, ಜೊತೆಗೆ ಪೂರ್ಣಪ್ರಮಾಣದ ನಾಯಕ ನಟನಾಗಿ ಜನರ ಎದುರು ಬರಲು ಸಜ್ಜಾಗುತ್ತಿದ್ದಾರೆ. ಜಯ್ ರಾಮ್ ಅವರು ಈ ಸಿನಿಮಾಗೆ ಸಹ-ನಿರ್ದೇಶನ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಅವರ ಸಂಗೀತ ಎಂಬ ಕಾರಣದಿಂದಲೂ ನಿರೀಕ್ಷೆ ಹೆಚ್ಚಿದೆ. ರಘು ನಿಡುವಳ್ಳಿ ಅವರು ‘ಫೈರ್ ಫ್ಲೈ’ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.