AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan Thoogudeepa: ಸಿದ್ಧಾರೂಢ ದರ್ಶನ್ ಭೇಟಿಯಾಗಿದ್ದು ಸುಳ್ಳಾ? ನೊಟೀಸ್ ಕೊಟ್ಟ ಪೊಲೀಸರು

Darshan Thoogudeepa: ರೇಣುಕಾ ಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅನ್ನು ಭೇಟಿಯಾಗಿ ಅವರಿಗೆ ಧ್ಯಾನ ಹೇಳಿಕೊಟ್ಟಿದ್ದಾಗಿ ಹೇಳಿದ್ದ ಮಾಜಿ ಕೈದಿ ಸಿದ್ಧಾರೂಢನಿಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿದೆ.

Darshan Thoogudeepa: ಸಿದ್ಧಾರೂಢ ದರ್ಶನ್ ಭೇಟಿಯಾಗಿದ್ದು ಸುಳ್ಳಾ? ನೊಟೀಸ್ ಕೊಟ್ಟ ಪೊಲೀಸರು
ಮಂಜುನಾಥ ಸಿ.
|

Updated on:Jul 28, 2024 | 10:30 AM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಪರಪ್ಪನ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ದಿನ ದೂಡುತ್ತಿದ್ದಾರೆ. ದರ್ಶನ್ ಭೇಟಿಯಾಗಲು ಪ್ರತಿನಿತ್ಯ ಹಲವು ಸಿನಿಮಾ ಸೆಲೆಬ್ರಿಟಿಗಳು, ಕೆಲ ರಾಜಕಾರಣಿಗಳು, ಆತ್ಮೀಯರು ಬಂದು ಹೋಗುತ್ತಿದ್ದಾರೆ. ಎಲ್ಲರಿಗೂ ದರ್ಶನ್ ಅನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆಯ್ದ ಕೆಲವರನ್ನಷ್ಟೆ ದರ್ಶನ್ ಭೇಟಿ ಆಗುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ಸಹ ವಿಶೇಷ ಸೆಲ್​ನಲ್ಲಿರುವ ದರ್ಶನ್​ಗೆ ಯಾರನ್ನೂ ಭೇಟಿ ಆಗುವ ಅವಕಾಶವಿಲ್ಲ. ಆದರೆ ಸಿದ್ಧಾರೂಢ ಎಂಬ ಮಾಜಿ ಕೈದಿ ತಾವು ದರ್ಶನ್ ಅನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದ, ಈತನಿಗೆ ಈಗ ಪೊಲೀಸ್ ಇಲಾಖೆ ನೋಟೀಸ್ ನೀಡಿದೆ.

ಸಿದ್ಧಾರೂಢ ಎಂಬಾತ, ಮಾಧ್ಯಮಗಳಿಗೆ, ಯೂಟ್ಯೂಬ್ ಚಾನೆಲ್​ಗಳಿಗೆ ಸಂದರ್ಶನ ನೀಡಿ, ತಾವು ದರ್ಶನ್ ಅನ್ನು ಜೈಲಿನಲ್ಲಿ ಭೇಟಿಯಾಗಿದ್ದು, ದರ್ಶನ್​ಗೆ ಯೋಗ ಹೇಳಿಕೊಟ್ಟೆ, ಧ್ಯಾನ ಹೇಳಿಕೊಟ್ಟೆ, ದರ್ಶನ್ ಜೊತೆಗೆ ಹಲವು ಸಮಯ ಮಾತನಾಡಿದೆ ಎಂದೆಲ್ಲ ಹೇಳಿಕೊಂಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಅನ್ನು ಸಿದ್ಧಾರೂಡ ಭೇಟಿ ಆಗಿಲ್ಲ ಎಂದಿದ್ದಾರೆ. ಇದೀಗ ಪೊಲೀಸ್ ಇಲಾಖೆಯು ಸಿದ್ಧಾರೂಢಗೆ ನೊಟೀಸ್ ಜಾರಿ ಮಾಡಿದೆ.

ಸಿದ್ಧಾರೂಢನ ಸಂದರ್ಶನಗಳನ್ನು ಗಮನಿಸಿದ್ದ ಮೇಲಾಧಿಕಾರಿಗಳು, ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ವಿಐಪಿ ಸೆಲ್​ನೊಳಗಿದ್ದ ದರ್ಶನ್ ಅನ್ನು ಭೇಟಿ ಆಗಲು ಇತರೆ ಕೈದಿಗೆ ಅವಕಾಶ ನೀಡಲಾಗಿದೆಯೇ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಸಿದ್ದ ಜೈಲು ಅಧಿಕಾರಿಗಳು, ದರ್ಶನ್ ಭೇಟಿಗೆ ಯಾವುದೇ ಬೇರೆ ಕೈದಿಗಳಿಗೆ ವಿಶೇಷವಾಗಿ ಜೈಲು ಸೆಲ್​ನೊಳಗೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಉತ್ತರಿಸಿದ್ದಾರೆ. ಹಾಗಾಗಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿರುವ ಸಿದ್ಧಾರೂಢನಿಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದೆ.

ಇದನ್ನೂ ಓದಿ:‘ದರ್ಶನ್​ಗೆ ಡಯಟ್ ಬಗ್ಗೆ ಗೊತ್ತು, ಅವರು ಆರೋಗ್ಯ ಕಾಪಾಡಿಕೊಳ್ಳುತ್ತಾರೆ’; ಜಿಮ್ ರವಿ

ಇದೇ ತಿಂಗಳ ಎಂಟನೇ ತಾರೀಖು ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಸಿದ್ಧಾರೂಢ ಬಂದಿದ್ದ. ಆತನನ್ನು ಒಂಬತ್ತನೇ ತಾರೀಖು ಬಿಡುಗಡೆ ಮಾಡಿದ್ದೆವು. ಆತ ಇಲ್ಲಿ ದರ್ಶನ್ ಅನ್ನು ಭೇಟಿ ಆಗಿಲ್ಲ. ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲಧಿಕಾರಿಗಳು ಹೇಳಿದ್ದಾರೆ.

ಮಾಧ್ಯಮಗಳ ಬಳಿ ಮಾತನಾಡಿದ್ದ ಸಿದ್ಧಾರೂಢ, ತಾನು ಜೈಲಿನಲ್ಲಿ ದರ್ಶನ್ ಅನ್ನು ಭೇಟಿ ಆಗಿದ್ದೆ, ಅವರಿಗೆ ಧ್ಯಾನ ಹೇಳಿಕೊಟ್ಟೆ, ಅವರು ಪುಸ್ತಕಗಳನ್ನು ಓದುತ್ತಿದ್ದಾರೆ. ನನ್ನ ಬಳಿ ಮಾತನಾಡುತ್ತಾ ರೇಣುಕಾ ಸ್ವಾಮಿ ಕುಟುಂಬದ ಬಗ್ಗೆ ಬೇಸರದಿಂದ ಮಾತನಾಡಿದರು. ಆಗಿರುವ ಘಟನೆ ಬಗ್ಗೆ ಅವರು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದೆಲ್ಲ ಹೇಳಿದರು. ತನ್ನನ್ನು ಬಿಗಿಯಾಗಿ ತಬ್ಬಿಕೊಂಡು ದರ್ಶನ್ ಮಾತನಾಡಿದರು ಎಂದೆಲ್ಲ ಸಿದ್ದಾರೂಢ ಹೇಳಿದ್ದರು. ಆದರೆ ಇದೆಲ್ಲ ಸುಳ್ಳು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:28 am, Sun, 28 July 24