
ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ಮೊದಲ ಆದ್ಯತೆ ಇರುತ್ತದೆ. ಈಗ ಅವರ ‘ಮೈ ಬೇಬಿ’ ಸಿನಿಮಾ ಕೂಡ ಹಾಡುಗಳ ಮೂಲಕ ಸದ್ದು ಮಾಡಲು ಸಜ್ಜಾಗಿದೆ. ಈ ಚಿತ್ರತಂಡದಿಂದ ಒಂದು ಅಪ್‌ಡೇಟ್ ನೀಡಲಾಗಿದೆ. ಈ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಏನೆಂದರೆ, ಜನಪ್ರಿಯ ಸಂಗೀತ ನಿರ್ದೇಶಕ, ಗಾಯಕ ಎ.ಆರ್. ರೆಹಮಾನ್ ಅವರು ಈ ಹಾಡನ್ನು ಲಾಂಚ್ ಮಾಡಿದ್ದಾರೆ.
‘ಮಾತು ನೀನೇ..’ ಎಂಬ ಹಾಡನ್ನು ಇಂದು (ನವೆಂಬರ್ 11) ಅನಾವರಣ ಮಾಡಲಾಗಿದೆ. ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಅವರು ಸೋಶಿಯಲ್ ಮೀಡಿಯಾ ಮೂಲಕ ಈ ಹಾಡನ್ನು ರಿಲೀಸ್ ಮಾಡಿರುವುದು ಚಿತ್ರತಂಡದ ಬಲವನ್ನು ಹೆಚ್ಚಿಸಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ರೆಹಮಾನ್ ಅವರು ಕನ್ನಡ ಸಿನಿಮಾದ ಗೀತೆಯನ್ನು ರಿಲೀಸ್ ಮಾಡಿರುವುದು ‘ಮೈ ಬೇಬಿ’ ತಂಡದ ಖುಷಿಗೆ ಕಾರಣ ಆಗಿದೆ.
ಈ ಹಾಡಿಗೆ ನಕುಲ್ ಅಭ್ಯಂಕರ್ ಅವರು ಸಂಗೀತ ನೀಡಿದ್ದಾರೆ. ಸುಂದರವಾದ ಪರಿಸರದ ನಡುವೆ ಈ ಹಾಡನ್ನು ಚಿತ್ರಿಸಲಾಗಿದೆ. ಸುಮಧುರವಾದ ಈ ಹಾಡಿಗೆ ನಾಗಾರ್ಜುನ್ ಶರ್ಮಾ ಅವರು ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಅವರು ಧ್ವನಿ ನೀಡಿದ್ದಾರೆ. ‘ಆನಂದ್ ಆಡಿಯೋ’ ಮೂಲಕ ಬಿಡುಗಡೆ ಆಗಿರುವ ಈ ಹಾಡಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ಮೈ ಬೇಬಿ’ ಸಿನಿಮಾದ ಈ ಗೀತೆಯಲ್ಲಿ ಪ್ರೇಮಿಗಳಾಗಿ ನಟ ಸುಮುಖ್ ಮತ್ತು ನಟಿ ಇಶಾ ಲಂಕೇಶ್ ಅವರು ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಹೊಸ ಜೋಡಿಯ ಕೆಮಿಸ್ಟ್ರಿ ಸಖತ್ ಕ್ಯೂಟ್ ಆಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಛಾಯಾಗ್ರಾಹಕ ಅಭಿಲಾಷ್ ಕಳತ್ತಿ ಅವರು ಈ ಹಾಡಿನ ದೃಶ್ಯಗಳನ್ನು ಸುಂದರವಾಗಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾದ ಹಾಡುಗಳನ್ನು ಟ್ರೋಲ್ ಮಾಡಿದವರಿಗೆ ಎಆರ್ ರೆಹಮಾನ್ ತಿರುಗೇಟು
ರಂಗನಾಥ್ ಕೆಂಪನಹಳ್ಳಿ (ಆರ್.ಕೆ) ಅವರು ‘ನಿಧಿ ಫಿಲ್ಮ್ಸ್ ಪ್ರೊಡಕ್ಷನ್ಸ್’ ಅಡಿಯಲ್ಲಿ ‘ಮೈ ಬೇಬಿ’ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಕೆ.ಎಂ. ಪ್ರಕಾಶ್ ಅವರು ಈ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ. ಮೊದಲ ಹಾಡಿನ ಮೂಲಕ ಚಿತ್ರತಂಡವು ಯುವ ಪ್ರೇಕ್ಷಕರಲ್ಲಿ ಹಾಗೂ ಸಂಗೀತ ಪ್ರೇಮಿಗಳಲ್ಲಿ ಸಿನಿಮಾ ಬಗ್ಗೆ ಕೌತುಕ ಹೆಚ್ಚುವಂತೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.