
ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್ (Aravind Bolar), ಶ್ರೀಹನ್ ದೀಪಕ್, ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಮುಂತಾದವರು ನಟಿಸಿರುವ ಹೊಸ ಸಿನಿಮಾಗೆ ‘ಕೆಂಪು ಹಳದಿ ಹಸಿರು’ (Kempu Haladi Hasiru) ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ಕಾರಣದಿಂದ ಈ ಸಿನಿಮಾ ಕೌತುಕ ಮೂಡಿಸಿದೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ರೇಣುಕಾಂಬಾ ಸ್ಟುಡಿಯೋದಲ್ಲಿ ಕಾರ್ಯಕ್ರಮ ಮಾಡಲಾಯಿತು. ‘ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಆ್ಯಂಡ್ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
ಪ್ರಸಾದ್ ಕುಮಾರ್ ನಾಯ್ಕ್ ಅವರು ‘ಕೆಂಪು ಹಳದಿ ಹಸಿರು’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ತುಳು ಸಿನಿಮಾ ನಿರ್ದೇಶನ ಮಾಡಿ ಅನುಭವ ಪಡೆದ ಮಣಿ ಎಜೆ ಕಾರ್ತಿಕೇಯನ್ ಅವರು ಮೊದಲ ಬಾರಿ ಕನ್ನಡ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ‘ಸ್ಟಾಪ್, ಥಿಂಕ್ ಆ್ಯಂಡ್ ಪ್ರೊಸೀಡ್ ಇನ್ ಲೈಫ್’ ಎಂಬ ಅರ್ಥಪೂರ್ಣ ಟ್ಯಾಗ್ ಲೈಗ್ ಈ ಸಿನಿಮಾದ ಶೀರ್ಷಿಕೆಗೆ ಇದೆ. ‘ಬಾಲಾಜಿ ಫಿಲ್ಮ್ ವರ್ಕ್ಸ್’ ಮೂಲಕ ಪ್ರಸಾದ್ ಈರ್ಲಾ ಹಾಗೂ ಹರೀಶ್ ಧಾಸ್ಮಾನ ಅವರು ಸಹ-ನಿರ್ಮಾಪಕರಾಗಿದ್ದಾರೆ.
‘ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲಿ ಅಭಿನಯಿಸಿದ್ದ ಶೈಲಾಶ್ರೀ ಮುಲ್ಕಿ ಕೂಡ ಈಗ ‘ಕೆಂಪು ಹಳದಿ ಹಸಿರು’ ಸಿನಿಮಾದಲ್ಲಿ ನಟಿಸಿದ್ದಾರೆ. ಉದ್ಯಮಿಯ ಮಗನಾಗಿ ಯಾವುದೋ ಒಂದು ಕಾರಣಕ್ಕಾಗಿ ಡಿಲಿವರಿ ಬಾಯ್ ಆಗುವ ಯುವಕನ ಪಾತ್ರದಲ್ಲಿ ಶ್ರೀಹನ್ ದೀಪಕ್ ಅಭಿನಯಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ.
ಚಿಂದೋಡಿ ವಿಜಯ್ ಕುಮಾರ್, ಮೀನಾಕ್ಷಿ ಹರ್ತಿ, ಶ್ರೀಜನ್, ಮಾನಸ್, ಉಮೇಶ್ ಹೆಗಡೆ ಕಡ್ತಲಾ ಮುಂತಾದ ಕಲಾವಿದರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಮಂಜುನಾಥ್ ನಾಯಕ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕರ ಜೊತೆ ಕಿಶೋರ್ ಮೂಡಬಿದ್ರೆ ಅವರು ಸಾಹಿತ್ಯ ಬರೆದಿದ್ದಾರೆ. ಮುಂಬೈ ಮೂಲದ ವಿಕಾಶ್ ವಿಶ್ವಕರ್ಮ ಅವರು ಸಂಗೀತ ನೀಡಿದ್ದಾರೆ. ಸತೀಶ್ ಈರ್ಲಾ ಅವರ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ತುಳು ಸಿನಿಮಾದಲ್ಲಿ ಕಾಮಿಡಿಯನ್ಸ್ ಫಸ್ಟ್, ಹೀರೋ ನೆಕ್ಸ್ಟ್; ಯಾಕೆ?
ಸುದ್ದಿಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ನಿರ್ದೇಶಕರು ಮಾಹಿತಿ ನೀಡಿದರು. ‘ಶೀರ್ಷಿಕೆಯೇ ಹೇಳುವಂತೆ ಕೆಂಪು, ಹಳದಿ, ಹಸಿರು ಎನ್ನುವಂತಹ ಮೂರು ಪಾತ್ರಗಳು ಇರುತ್ತದೆ. ತ್ರಿಕೋನ ಪ್ರೇಮಕಥೆಯು ಸೆಸ್ಪೆನ್ಸ್, ಥ್ರಿಲ್ಲರ್ ಕಾಮಿಡಿಯಾಗಿ ಸಿನಿಮಾ ಮೂಡಿಬಂದಿದೆ. ಮಂಗಳೂರು, ಉಡುಪಿಯ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.