ಸಂಪೂರ್ಣ ಮಕ್ಕಳ ಸಿನಿಮಾ ಮಾಡಲು ಹೊರಟ ಆರ್ಯವರ್ಧನ್​; ‘ತುಂಟರು’ ಸಖತ್ ಪೋಲಿ

ಆರ್ಯವರ್ಧನ್ ಅವರು ‘ತುಂಟರು’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸುಮಾರು 45 ರಿಂದ 50 ಮಕ್ಕಳು ಅಭಿನಯಿಸುತ್ತಿದ್ದಾರೆ ಅನ್ನೋದು ವಿಶೇಷ.

ಸಂಪೂರ್ಣ ಮಕ್ಕಳ ಸಿನಿಮಾ ಮಾಡಲು ಹೊರಟ ಆರ್ಯವರ್ಧನ್​; ‘ತುಂಟರು’ ಸಖತ್ ಪೋಲಿ
ತುಂಟರು ಸಿನಿಮಾ ತಂಡ

Updated on: May 16, 2023 | 10:30 AM

ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳಿಗೇನೂ ಕೊರತೆ ಇಲ್ಲ. ಅನೇಕ ರೀತಿಯ ಪ್ರಯೋಗಾತ್ಮಕ ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಸಂಪೂರ್ಣ ಮಕ್ಕಳ ಚಿತ್ರಗಳೂ ಅಲ್ಲೊಂದು, ಇಲ್ಲೊಂದು ಸಿದ್ಧಗೊಳ್ಳುತ್ತವೆ. ಈಗಾಗಲೇ ಎರಡು ಸಿನಿಮಾಗಳನ್ನು ಮಾಡಿದ ಅನುಭವ ಇರುವ ನಿರ್ದೇಶಕ ಆರ್ಯವರ್ಧನ್ (Aryavardhan) ಅವರು ಈಗ ಮತ್ತೊಂದು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ರೆಡಿ ಆಗಿದ್ದಾರೆ. ಇದು ಸಂಪೂರ್ಣವಾಗಿ ಮಕ್ಕಳ ಸಿನಿಮಾ ಅನ್ನೋದು ವಿಶೇಷ. ಇಲ್ಲಿ ಹೀರೋ-ಹೀರೋಯಿನ್​ನಿಂದ ಹಿಡಿದು ಪೋಷಕ ಪಾತ್ರದವರೆಗೆ ಎಲ್ಲರೂ ಮಕ್ಕಳೇ ಅನ್ನೋದು ವಿಶೇಷ. ಈ ಚಿತ್ರಕ್ಕೆ ‘ತುಂಟರು’ ಎಂದು ಶೀರ್ಷಿಕೆ ಇಡಲಾಗಿದೆ.

ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಬಳಿಕ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಅನುರಾಗ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ‘ತುಂಟರು’ ಸಿನಿಮಾ ನಿರ್ಮಾಣ ಆಗುತ್ತಿದೆ. ಕೆಂಗೇರಿಯ ನವದುರ್ಗಿ ಶ್ರೀ ಗಂಗಮ್ಮ ಹಾಗೂ ಶ್ರೀ ಸೊಲ್ಲಾಪುರದಮ್ಮನವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆರ್ಯವರ್ಧನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರಿಗೆ ಮೂರನೇ ಸಿನಿಮಾ. ಈ ಚಿತ್ರದಲ್ಲಿ ಸುಮಾರು 45 ರಿಂದ 50 ಮಕ್ಕಳು ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕ, ನಾಯಕಿ, ಪೋಷಕಪಾತ್ರಗಳಲ್ಲಿ ಮಕ್ಕಳೇ ಕಾಣಿಸಿಕೊಳ್ಳುತ್ತಿದ್ದಾರೆ‌. ‘ತುಂಟರು’ ಚಿತ್ರಕ್ಕೆ ‘ಪೋಲಿ ಹುಡುಗರು’ ಎಂಬ ಅಡಿಬರಹವಿದೆ.

ಇದನ್ನೂ ಓದಿ: ಈ ಸ್ಟಾರ್​​ ನಟರ ಮಕ್ಕಳಿಗೆ ಚಿತ್ರರಂಗದಲ್ಲಿ ಸಿಗಲೇ ಇಲ್ಲ ಯಶಸ್ಸು; ಮಾಡಿದ ಸಿನಿಮಾಗಳೆಲ್ಲ ಫ್ಲಾಪ್

ಮಕ್ಕಳ ಸಿನಿಮಾ ಎಂದ ಮಾತ್ರಕ್ಕೆ ಚಿತ್ರದ ಕಥೆಯೂ ಅದೇ ರೀತಿ ಇಲ್ಲ. ಇದೊಂದು ಲವ್ ಜಾನರ್​ ಸಿನಿಮಾ! ಮೇ 15ರಂದು ಕೆಂಗೇರಿಯ ಕಾಲೋನಿಯೊಂದರಲ್ಲಿ ಚಿತ್ರೀಕರಣ ಆರಂಭ ಆಗಿದೆ. ಮೊದಲ ಹಂತದಲ್ಲಿ 15 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಜೂನ್​ನಲ್ಲಿ ಮಕ್ಕಳಿಗೆ ಶಾಲೆ ಆರಂಭ ಆಗುತ್ತದೆ. ಆ ಬಳಿಕ ಶನಿವಾರ ಹಾಗೂ ಭಾನುವಾರ ಚಿತ್ರೀಕರಣ ಮಾಡಲು ನಿರ್ದೇಶಕ ಆರ್ಯವರ್ಧನ್ ನಿರ್ಧರಿಸಿದ್ದಾರೆ.

ಹರ್ಷ ಕಾಗೋಡ್ ಸಂಗೀತ ನಿರ್ದೇಶನ ಹಾಗೂ ಸೂರ್ಯ ಛಾಯಾಗ್ರಹಣ ‘ತುಂಟರು’ ಚಿತ್ರಕ್ಕಿದೆ. ಸಿನಿಮಾ ಚಿತ್ರೀಕರಣ ಮುಗಿಸಿ, ಬಳಿಕ ಬಹುಬೇಗ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ಚಿತ್ರತಂಡದ್ದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:02 am, Tue, 16 May 23