ಭಾರಿ ಕುತೂಹಲ ಮೂಡಿಸಿರುವ ‘ಅವತಾರ ಪುರುಷ 2’ (Avatara Purusha Part 2) ಸಿನಿಮಾದ ಟ್ರೇಲರ್ ಇತ್ತೀಚಿಗೆ ಬಿಡುಗಡೆ ಆಗಿದೆ. ಈ ಸಿನಿಮಾಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkara Mallikarjunaiah) ಅವರು ಬಂಡವಾಳ ಹೂಡಿದ್ದಾರೆ. ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಇರುವ ಸಿಂಪಲ್ ಸುನಿ ಅವರು ‘ಅವತಾರ ಪುರುಷ 2’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶರಣ್ (Sharan) ಅವರು ನಾಯಕನಾಗಿ ನಟಿಸಿದ್ದು, ಅವರಿಗೆ ಆಶಿಕಾ ರಂಗನಾಥ್ ಜೋಡಿ ಆಗಿದ್ದಾರೆ. ‘ಆನಂದ್ ಆಡಿಯೋ’ ಮೂಲಕ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ‘ಲವ್ಲಿ ಸ್ಟಾರ್’ ಪ್ರೇಮ್, ವಿಕ್ಕಿ ವರುಣ್, ರಿಷಿ, ಪ್ರವೀಣ್ ತೇಜ್, ಹರಿ ಸಂತು ಅವರು ಅತಿಥಿಗಳಾಗಿ ಬಂದು ಟ್ರೇಲರ್ ಅನಾವರಣ ಮಾಡಿ ಹಾರೈಸಿದರು.
2022ರಲ್ಲಿ ಬಂದ ‘ಅವತಾರ ಪುರುಷ 1’ ಸಿನಿಮಾವನ್ನು ಚಿತ್ರಮಂದಿರ, ಕಿರುತೆರೆ ಹಾಗೂ ಓಟಿಟಿಯಲ್ಲಿ ನೋಡಿ ಜನರು ಎಂಜಾಯ್ ಮಾಡಿದ್ದರು. ಆದರೆ ಆ ಸಿನಿಮಾದಲ್ಲಿ ಹೇಳಿರುವುದು ಅರ್ಥ ಕಥೆ ಮಾತ್ರ. ಹಾರರ್ ಕಥಾಹಂದರದ ರಹಸ್ಯ ಇನ್ನೂ ಬಾಕಿ ಇದೆ. ಆ ರಹಸ್ಯ ‘ಅವತಾರ ಪುರುಷ 2’ ಸಿನಿಮಾದಲ್ಲಿ ಬಯಲಾಗಲಿದೆ. ‘ಈ ಸಿನಿಮಾದ 2ನೇ ಭಾಗವನ್ನು ನೋಡಿ ಯಶಸ್ವಿಗೊಳಿಸಿ. ಮೊದಲ ಭಾಗವನ್ನು ನೋಡಿದವರಿಗೆ ಹಾಗೂ ನೋಡದ ಇರುವವರಿಗೂ ಪಾರ್ಟ್ 2 ಅರ್ಥ ಆಗುತ್ತದೆ. ಸಿನಿಮಾ ಉತ್ತಮವಾಗಿ ಮೂಡಿಬರಲು ಕಾರಣರಾದ ಇಡೀ ಟೀಮ್ಗೆ ಧನ್ಯವಾದಗಳು’ ಎಂದು ನಿರ್ದೇಶಕ ಸಿಂಪಲ್ ಸುನಿ ಹೇಳಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತನಾಡಿದರು. ‘ಕನ್ನಡ ಸಿನಿಮಾಗಳಲ್ಲಿ ಕ್ವಾಲಿಟಿ ಕಡಿಮೆ ಅಂತ ಕೆಲವರು ಹೇಳುತ್ತಾರೆ. ಆದರೆ ನಮ್ಮ ಸಿನಿಮಾ ಟ್ರೇಲರ್ ನೋಡಿದರೆ ಗುಣಮಟ್ಟ ಹೇಗೆ ಇರಬಹುದು ಎಂಬುದು ಎಲ್ಲರಿಗೂ ತಿಳಿಯುತ್ತದೆ. ಯಾವುದೇ ಕೊರತೆಯಿಲ್ಲದಂತೆ ಬಹಳ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಏ.5ರಂದು ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್ ರಿಲೀಸ್ ಮಾಡಿದ ಎಲ್ಲರಿಗೂ ಧನ್ಯವಾದ’ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.
ಪುಷ್ಕರ್ ಮತ್ತು ಸುನಿ ಜೊತೆ ಕೆಲಸ ಮಾಡಿದ್ದು ನಟ ಶರಣ್ ಅವರಿಗೆ ಖುಷಿ ನೀಡಿದೆ. ‘ಸುನಿ ಅವರು ಸಿನಿಮಾ ಕಥೆ ಹೇಳುತ್ತೇನೆ ಎಂದಾಗ ಕಾಮಿಡಿ ಕಥೆ ಇರಬಹುದು ಎಂದುಕೊಂಡಿದ್ದೆ. ಆದರೆ ಇದೊಂದು ಡಿಫರೆಂಟ್ ಕಥೆ. ಇದರಲ್ಲಿ ಕಾಮಿಡಿಯೂ ಇರುತ್ತದೆ ಅಂತ ಹೇಳಿದರು. ನನಗೂ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆ. ಆದ್ದರಿಂದ ಈ ಸಿನಿಮಾದ ಪಾತ್ರ ಇಷ್ಟವಾಯ್ತು’ ಎಂದು ಶರಣ್ ಹೇಳಿದ್ದಾರೆ.
ಇದನ್ನೂ ಓದಿ: ‘ಕಿರಿಕ್ ಪಾರ್ಟಿ’, ‘ಗೋಧಿಬಣ್ಣ..’ ರೀತಿ ‘ಅವತಾರ ಪುರುಷ 2’ ಬಿಡುಗಡೆ ಪ್ಲ್ಯಾನ್: ಪುಷ್ಕರ್
ಶರಣ್ ಹಾಗೂ ಆಶಿಕಾ ರಂಗನಾಥ್ ಜೊತೆ ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಸಾಧುಕೋಕಿಲ, ಭವ್ಯ, ಸುಧಾರಾಣಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ನಾನು ಪರಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾಗ ಅವತಾರ ಪುರುಷ 2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಎಲ್ಲರೂ ಕೇಳುತ್ತಿದ್ರು. ಪ್ರೇಕ್ಷಕರಿಗೆ ಈ ಚಿತ್ರದ ಬಗ್ಗೆ ಆ ಪರಿ ಕುತೂಹಲ ಇದೆ. ಸಿನಿಮಾ ಭರ್ಜರಿಯಾಗಿ ಯಶಸ್ಸು ಕಾಣಲಿದೆ’ ಎಂದು ಆಶಿಕಾ ರಂಗನಾಥ್ ಭರವಸೆ ವ್ಯಕ್ತಪಡಿಸಿದರು. ವಿತರಕ ಮೋಹನ್ ಕೂಡ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.