ನಟಿ ಶ್ರುತಿ ಪ್ರಕಾಶ್ (Shruti Prakash) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 5’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈಗ ಅವರ ಹೊಸ ಸಿನಿಮಾ ಸೆಟ್ಟೇರಿದೆ. ‘ಮೇಡ್ ಇನ್ ಬೆಂಗಳೂರು’ ಖ್ಯಾತಿಯ ಮಧುಸೂದನ್ ಗೋವಿಂದ್ ಜೊತೆ ಅವರು ಸಿನಿಮಾ ಮಾಡುತ್ತಿದ್ದು, ಆ ಚಿತ್ರಕ್ಕೆ ‘ಫ್ರೈಡೇ’ (Friday) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ಬೆಂಗಳೂರಿನ ಧರ್ಮಗಿರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಈ ಸಿನಿಮಾ ತಂಡ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
‘ಫ್ರೈಡೇ’ ಚಿತ್ರವನ್ನು ‘Dees Films’ ಮತ್ತು ‘Shoolin Media’ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಮೃತ್ಯುಂಜಯ ಶುಕ್ಲ ಮತ್ತು ಅಲೋಕ್ ಚೌರಾಸಿಯಾ ಅವರು ನಿರ್ಮಾಪಕರು. ‘ಹೊಸ ದಿನಚರಿ’ ಸಿನಿಮಾಗೆ ನಿರ್ದೇಶನ ಮಾಡಿದ್ದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಅವರು ಜಂಟಿಯಾಗಿ ‘ಫ್ರೈಡೇ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕ್ರಿಯೇಟಿವ್ ನಿರ್ಮಾಪಕರಾಗಿ ಗಂಗಾಧರ್ ಸಾಲಿಮಠ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೊಸ ಸಿನಿಮಾದಲ್ಲಿ ಜೋಡಿಯಾಗಿ ನಟಿಸಲಿರುವ ನಿವೇದಿತಾ ಗೌಡ, ಚಂದನ್ ಶೆಟ್ಟಿ
ಶುಕ್ರವಾರಕ್ಕೂ ಈ ಸಿನಿಮಾದ ಕಥೆಗೂ ನಂಟು ಇದೆ. ಆ ಕಾರಣದಿಂದಲೇ ‘ಫ್ರೈಡೇ’ ಎಂದು ಶಿರ್ಷಿಕೆ ಇಡಲಾಗಿದೆ. ‘ಶುಕ್ರವಾರ ಬಿಡುಗಡೆಯಾದ ಹೊಸ ಸಿನಿಮಾವನ್ನು ನೋಡಲು ಹೋದ ದಂಪತಿಯ ಬದುಕಿನಲ್ಲಿ ನಡೆಯಬಾರದ ಘಟನೆ ನಡೆಯುತ್ತದೆ. ಅದು ಈ ಚಿತ್ರದ ಕಥಾಹಂದರ’ ಎಂದು ಚಿತ್ರತಂಡದವರು ಕುತೂಹಲ ಮೂಡಿಸಿದ್ದಾರೆ. ಮಧುಸೂದನ್ ಗೋವಿಂದ್, ಶ್ರುತಿ ಪ್ರಕಾಶ್ ಜೊತೆ ಗೋಪಾಲಕೃಷ್ಣ ದೇಶಪಾಂಡೆ ಕೂಡ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಸಂಸ್ಕೃತಿ, ಜೀವನ ಪರಿಚಯಿಸುವ ‘ದೇಸಾಯಿ’
‘ಫ್ರೈಡೇ’ ಸಿನಿಮಾಗೆ ಜನವರಿ ಮೊದಲ ವಾರದಲ್ಲಿ ಶೂಟಿಂಗ್ ಆರಂಭ ಆಗಲಿದೆ. ಈ ಚಿತ್ರದಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಇರಲಿದೆ. ಸಿನಿಮಾದ ಮೂರು ಹಾಡುಗಳಿಗೆ ಅಶ್ವಿನ್ ಹೇಮಂತ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂದೀಪ್ ವಲ್ಲೂರಿ ಅವರು ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.