ಹೃದಯಾಘಾತದಿಂದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿಧನ; ಸಂತಾಪ ಸೂಚಿಸಿದ ಕನ್ನಡ ಚಿತ್ರರಂಗ
Jolly Bastian: ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು.
ಇತ್ತೀಚೆಗೆ ಚಿತ್ರರಂಗಕ್ಕೆ ಒಂದಾದರ ಮೇಲೆ ಒಂದರಂತೆ ಶಾಕ್ಗಳು ಎದುರಾಗುತ್ತಲೇ ಇವೆ. ಹೃದಯಾಘಾತದಿಂದ ಹಲವರು ಮೃತಪಟ್ಟಿದ್ದಾರೆ. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಬಾಸ್ಟಿನ್ ಹಠಾತ್ ಹೃದಯಘಾತದಿಂದ ಮಂಗಳವಾರ (ಡಿಸೆಂಬರ್ 26) ನಿಧನ ಹೊಂದಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಅವರ ನಿಧನ ವಾರ್ತೆ ಅನೇಕರಿಗೆ ದುಃಖ ತಂದಿದೆ. ‘ಪ್ರೇಮಲೋಕ’ (Premaloka Movie), ‘ಮಾಸ್ಟರ್ ಪೀಸ್’ ಸೇರಿ ನೂರಾರು ಸಿನಿಮಾಗಳಿಗೆ ಅವರು ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.
ಜಾಲಿ ಅವರು ಹುಟ್ಟಿದ್ದು 1966ರಲ್ಲಿ. ಕೇರಳದ ಅಲೆಪ್ಪೆಯಲ್ಲಿ ಅವರು ಜನನ ಆಯಿತು. ಆದರೆ, ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ಬೆಂಗಳೂರಿನಲ್ಲೇ ಶಿಕ್ಷಣ ಪಡೆದರು. ಬೈಕ್ ಮೆಕಾನಿಕ್ ಆಗಿ ಜಾಲಿ ಬಾಸ್ಟಿನ್ ವೃತ್ತಿ ಆರಂಭಿಸಿದರು. ಅವರನ್ನು ಗುರುತಿಸಿದ ಕೆಲವರು ಸ್ಟಂಟ್ಮನ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದರು. ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದರು. ಆಗ ಅವರಿಗೆ 17 ವರ್ಷ ವಯಸ್ಸು.
ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯೋ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಅವರಿಗೆ ಇತ್ತು. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಜಾಲಿ ಬಾಸ್ಟಿನ್ ಹೆಸರು ಮಾಡಿದ್ದರು.
ಇದನ್ನೂ ಓದಿ: ತ್ರಿವಿಕ್ರಮ’ನ ಸಾಹಸಕ್ಕೆ ಫೈಟ್ ಮಾಸ್ಟರ್ಸ್ ಯಾರ್ ಯಾರ್ ಗೊತ್ತಾ..?
‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿ’ ಸೇರಿದಂತೆ ರವಿಚಂದ್ರನ್ ನಟನೆಯ ಹಲವಾರು ಸಿನಿಮಾಗಳಲ್ಲಿ ಜಾಲಿ ಕೆಲಸ ಮಾಡಿದ್ದಾರೆ. ರಿಸ್ಕಿ ಸ್ಟಂಟ್ ಮಾಡೋ ವೇಳೆ ಸಾಕಷ್ಟು ಬಾರಿ ಜಾಲಿ ಬಾಸ್ಟಿನ್ ಪೆಟ್ಟು ಮಾಡಿಕೊಂಡಿದ್ದರು. ‘ಭಲೇ ಚತುರ’ ಸಿನಿಮಾದ ಬಾಂಬ್ ಬ್ಲಾಸ್ಟ್ ದೃಶ್ಯದ ವೇಳೆ ಜಾಲಿ ದೇಹಕ್ಕೆ ಸಾಕಷ್ಟು ಹಾನಿ ಆಗಿತ್ತು. ‘ಪುಟ್ನಂಜ’ ಸಿನಿಮಾ ಶೂಟ್ ವೇಳೆ ಬೈಕ್ನಿಂದ ಬಿದ್ದು ಅವರ ಮುಖ ಹಾಗೂ ಕಾಲಿಗೆ ಪೆಟ್ಟಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Wed, 27 December 23