‘ಬಿಗ್ ಬಾಸ್’ ಶೋ ಗೆದ್ದು ಬಂದ ಸ್ಪರ್ಧಿಗಳಿಗೆ ಚಿತ್ರರಂಗದಲ್ಲಿ ಅವಕಾಶ ಹೆಚ್ಚುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್ (BBK 9 Winner) ರೂಪೇಶ್ ಶೆಟ್ಟಿ ಅವರು ಕೂಡ ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಂಡಿದ್ದಾರೆ. ಈಗಾಗಲೇ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು ಸ್ಯಾಂಡಲ್ವುಡ್ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರು ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾ ಘೋಷಣೆ ಆಗಿದೆ. ಅಂದಹಾಗೆ, ರೂಪೇಶ್ ಶೆಟ್ಟಿ (Roopesh Shetty) ಅವರಿಗೆ ಇಂದು (ಆಗಸ್ಟ್ 14) ಹುಟ್ಟುಹಬ್ಬದ ಸಂಭ್ರಮ. ಆ ಪ್ರಯುಕ್ತ ನೂತನ ಸಿನಿಮಾ ಅನೌನ್ಸ್ ಆಗಿರುವುದು ವಿಶೇಷ. ಈ ಚಿತ್ರಕ್ಕೆ ‘ಅಧಿಪತ್ರ’ (Adhipathra Movie) ಎಂದು ಶೀರ್ಷಿಕೆ ಇಡಲಾಗಿದೆ. ಶೀರ್ಷಿಕೆ ವಿನ್ಯಾಸ ಗಮನ ಸೆಳೆಯುತ್ತಿದೆ. ಎಲ್ಲರೂ ರೂಪೇಶ್ ಶೆಟ್ಟಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಕೌತುಕ ಮೂಡಿದೆ.
ಕಿರುತೆರೆ ಪ್ರೇಕ್ಷಕರಿಗೆ ರೂಪೇಶ್ ಶೆಟ್ಟಿ ಅವರು ಪರಿಚಿತರಾಗಿದ್ದು ‘ಬಿಗ್ ಬಾಸ್’ ರಿಯಾಲಿಟಿ ಶೋ ಮೂಲಕ. ಆ ಟ್ರೋಫಿ ಗೆದ್ದ ಬಳಿಕ ರೂಪೇಶ್ ಶೆಟ್ಟಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಪ್ರಶ್ನೆ ಎದುರಾಗಿತ್ತು. ಕನ್ನಡ ಚಿತ್ರದ ತಯಾರಿಯಲ್ಲಿ ಇರುವಾಗಲೇ ಅವರು ತುಳು ಸಿನಿಮಾವೊಂದಕ್ಕೆ ನಿರ್ದೇಶನ ಮಾಡುವಲ್ಲಿ ಬ್ಯುಸಿಯಾದರು. ಹಾಗಾಗಿ ಕನ್ನಡ ಸಿನಿಮಾ ಸೆಟ್ಟೇರುವುದು ತಡವಾಯಿತು. ಈಗ ‘ಅಧಿಪತ್ರ’ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಸೆಪ್ಟೆಂಬರ್ ವೇಳೆಗೆ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ.
ರೂಪೇಶ್ ಶೆಟ್ಟಿ ಹೀರೋ ಆಗಿ ನಟಿಸುತ್ತಿರುವ ‘ಅಧಿಪತ್ರ’ ಸಿನಿಮಾದ ಅರ್ಥ ಏನು ಎಂಬ ಕುತೂಹಲ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಜೊತೆ ಬೇರೆ ಯಾರೆಲ್ಲ ನಟಿಸುತ್ತಾರೆ ಎಂಬುದು ಕೂಡ ಇನ್ನೂ ಬಹಿರಂಗ ಆಗಿಲ್ಲ. ಕೆ.ಆರ್. ಸಿನಿ ಕಂಬೈನ್ಸ್ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಚಯನ್ ಶೆಟ್ಟಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಹಂತಹಂತವಾಗಿ ಬಿಟ್ಟುಕೊಡಲು ಚಿತ್ರತಂಡ ನಿರ್ಧರಿಸಿದೆ.
ಇದನ್ನೂ ಓದಿ: Roopesh Shetty: ‘ನಾನು ಕೊರಗಜ್ಜನ ಆರಾಧನೆ ಮಾಡ್ತೀನಿ, ಬಿಗ್ ಬಾಸ್ನಲ್ಲಿ ಅವರೇ ನನ್ನ ಗೆಲ್ಲಿಸಿದ್ದಾರೆ’: ರೂಪೇಶ್ ಶೆಟ್ಟಿ
ತುಳು ಸಿನಿಮಾರಂಗದಲ್ಲಿ ರೂಪೇಶ್ ಶೆಟ್ಟಿ ಅವರಿಗೆ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಬಿಗ್ ಬಾಸ್ ವಿನ್ ಆದ ಬಳಿಕ ಅವರು ತುಳು ಭಾಷೆಯ ‘ಸರ್ಕಸ್’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದು ಒಳ್ಳೆಯ ಕಥೆಯ ಮೂಲಕ, ಡಿಫರೆಂಟ್ ಆದಂತಹ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಬೇಕು ಎಂಬುದು ರೂಪೇಶ್ ಶೆಟ್ಟಿ ಅವರ ಉದ್ದೇಶ ಆಗಿತ್ತು. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅವರು ‘ಅಧಿಪತ್ರ’ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.