ಬೆಂಗಳೂರು ಚಲನಚಿತ್ರೋತ್ಸವ 2025: ಈ ಬಾರಿಯ ವಿಶೇಷತೆಗಳ ಪಟ್ಟಿ

|

Updated on: Feb 12, 2025 | 6:27 PM

Bengaluru Film Festival: 16ನೇ ಬೆಂಗಳೂರು ಚಲನಚಿತ್ರೋತ್ಸವವು ಮಾರ್ಚ್ 1 ರಿಂದ 8ರ ವರೆಗೆ ಒರಾಯಿನ್ ಮಾಲ್​ನಲ್ಲಿ ನಡೆಯಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಇಂದು ಸುದ್ದಿಗೋಷ್ಠಿ ನಡೆಸಿ ಚಲನಚಿತ್ರೋತ್ಸವದ ಬಗ್ಗೆ ಮಾಹಿತಿ ನೀಡಿದರು. ಈ ಬಾರಿ ಚಲನಚಿತ್ರೋತ್ಸವದಲ್ಲಿನ ವಿಶೇಷತೆಗಳ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರು ಚಲನಚಿತ್ರೋತ್ಸವ 2025: ಈ ಬಾರಿಯ ವಿಶೇಷತೆಗಳ ಪಟ್ಟಿ
Biffs
Follow us on

ವಿಶ್ವ ವಿಖ್ಯಾತ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ಮಾರ್ಚ್ 1 ರಿಂದ 8ನೇ ತಾರೀಖಿನ ವರೆಗೆ ನಡೆಯಲಿದೆ. 16ನೇ ಚಲನಚಿತ್ರೋತ್ಸವ ಇದಾಗಿದ್ದು, ಈ ಬಾರಿ ಹಲವು ವಿಶೇಷತೆಗಳನ್ನು ಚಿತ್ರೋತ್ಸವ ಒಳಗೊಂಡಿರಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಅವರು ಇಂದು (ಫೆಬ್ರವರಿ 12) ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಾರಿಯ ಚಲನಚಿತ್ರೋತ್ಸವದ ವಿಶೇಷತೆಗಳು ಇನ್ನಿತರೆ ಮಾಹಿತಿಗಳನ್ನು ಹಂಚಿಕೊಂಡರು.

ಈ ಬಾರಿ ಟೆಂಟ್ ಮಾದರಿಯಲ್ಲಿ ಆಯ್ದ ಕೆಲ ಸಿನಿಮಾಗಳನ್ನು ತೋರಿಸಲಾಗುತ್ತದೆ. ಮುಂಚೆ ಹೇಗೆ ಟೆಂಟ್​ಗಳಲ್ಲಿ ಪ್ರೊಜೆಕ್ಟರ್​ಗಳನ್ನು ಬಳಸಿ ಸಿನಿಮಾ ತೋರಿಸಲಾಗುತ್ತಿತ್ತೊ ಅದೇ ರೀತಿ ತೆರೆದ ಮೈದಾನದಲ್ಲಿ ಈ ಬಾರಿ ಕೆಲ ಆಯ್ದ ಸಿನಿಮಾಗಳನ್ನು ಅದೇ ಹಳೆ ಪ್ರೊಜೆಕ್ಟರ್​ಗಳನ್ನು ಬಳಸಿ ಸಿನಿಮಾ ತೋರಿಸಲಾಗುತ್ತದೆ. ‘ಭೂತಯ್ಯನ ಮಗ ಅಯ್ಯು’, ‘ಬಂಗಾರದ ಮನುಷ್ಯ’, ‘ಗಂಧದ ಗುಡಿ’ ಸೇರಿದಂತೆ ಇನ್ನು ಕೆಲವು ಸಿನಿಮಾಗಳು ಟೆಂಟ್ ಮಾದರಿಯಲ್ಲಿ ಪ್ರದರ್ಶನಗೊಳ್ಳಲಿವೆ.

ಈ ಬಾರಿ ಸಿನಿಮಾಗಳಲ್ಲಿ ಎಐ ಬಳಕೆ ಬಗ್ಗೆ ಕಾರ್ಯಗಾರವನ್ನು ಚಿತ್ರೋತ್ಸವದ ಭಾಗವಾಗಿ ಆಯೋಜಿಸಲಾಗಿದೆ. ಅದರ ಜೊತೆಗೆ ಸಮಕಾಲಿನ ಹೆಸರಾಂತ ನಿರ್ದೇಶಕರುಗಳು, ಸಿನಿಮಾಟೊಗ್ರಾಫರ್​ಗಳನ್ನು ಕರೆಸಿ ಸಂವಾದ ಏರ್ಪಡಿಸಲಾಗುತ್ತಿದೆ.

‘ಅಮರನ್’, ‘ಮಂಜುಮೆಲ್ ಬಾಯ್ಸ್’ ಸೇರಿದಂತೆ ಇತ್ತೀಚೆಗೆ ಹೆಸರು ಮಾಡಿದ ಹಲವು ಸಿನಿಮಾಗಳ ನಿರ್ದೇಶಕರನ್ನು ಈ ಬಾರಿ ಚಿತ್ರೋತ್ಸವಕ್ಕೆ ಸಂವಾದ, ಕಾರ್ಯಗಾರಗಳಿಗೆ ಕರೆಸಲಾಗುತ್ತಿದೆ. ಸಿನಿಮಾಟೊಗ್ರಾಫರ್​ಗಳಾದ ರವಿವರ್ಮನ್, ಸಂತೋಶ್ ಶಿವನ್ ಇನ್ನಿತರೆ ಪ್ರಮುಖರು ಸಹ ಆಗಮಿಸಲಿದ್ದಾರೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಹ ಬರಲಿದ್ದಾರೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಗಣ್ಯರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ

‘ಸರ್ವಜನಾಂಗದ ಶಾಂತಿಯ ತೋಟ’ ಥೀಮ್​ನ ಅಡಿ ಭ್ರಾತೃತ್ವ ಸಾರುವ ಕೆಲವು ಸಿನಿಮಾಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ. ಕೆಲವು ಹಳೆಯ ಸಿನಿಮಾಗಳನ್ನು ಡಿಜಿಟಲೈಜ್ ಮಾಡಿ ಅವುಗಳನ್ನು ಸಹ ಸಿನಿಮೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ಅಧ್ಯಕ್ಷ ಸಾಧು ಕೋಕಿಲ ನೀಡಿರುವ ಮಾಹಿತಿಯಂತೆ ಸಿನಿಮೋತ್ಸವದಲ್ಲಿ ಪ್ರದರ್ಶಿಸಲಾಗುವ ಸಿನಿಮಾಗಳ ಆಯ್ಕೆ ಈಗಾಗಲೇ ಆಗಿದೆ. ಕಾರ್ಯಗಾರ, ಸಂವಾದಗಳಲ್ಲಿ ಭಾಗವಹಿಸುವ ಅತಿಥಿಗಳ ಆಯ್ಕೆಯೂ ಆಗಿದೆ. ಮುಖ್ಯ ಕಾರ್ಯಕ್ರಮಗಳಲ್ಲಿ ಭಾಗಿ ಆಗಬೇಕಿರುವ ಅತಿಥಿಗಳ ಆಯ್ಕೆ ಆಗಬೇಕಿದೆ. 16ನೇ ಬೆಂಗಳೂರು ಚಲನಚಿತ್ರೋತ್ಸವವು ಮಾರ್ಚ್ 1 ರಿಂದ 8ರ ವರೆಗೆ ಒರಾಯಿನ್ ಮಾಲ್​ನಲ್ಲಿ ನಡೆಯಲಿದೆ. ಪಾಸ್​ಗಳು ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ಸಿಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ