ಸ್ಟಾರ್ ಸಿನಿಮಾ ರಿಲೀಸ್ ಆದರೆ ಥಿಯೇಟರ್ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಶಿವರಾಜ್ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ಇಂದು (ಅ.29) ಬಿಡುಗಡೆ ಆಗಿದ್ದು, ಎಲ್ಲೆಡೆ ಸಂಭ್ರಮ ಕಳೆಕಟ್ಟಿದೆ. ಬಹುತೇಕ ಎಲ್ಲ ಚಿತ್ರಮಂದಿರಗಳ ಎದುರು ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಆದರೆ ಹುಬ್ಬಳ್ಳಿಯಲ್ಲಿರುವ ಶಿವಣ್ಣನ ಫ್ಯಾನ್ಸ್ ಹೊಸ ಹಾದಿ ಹಿಡಿದಿದ್ದಾರೆ. ಬಡಮಕ್ಕಳಿಗೆ ಪಠ್ಯಪುಸ್ತಕ ವಿತರಿಸುವ ಮೂಲಕ ‘ಭಜರಂಗಿ 2’ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಅವರ ಈ ಕೆಲಸ ಎಲ್ಲರಿಗೂ ಮಾದರಿ ಆಗುವಂತಿದೆ.
‘ಜೈ ರಾಜವಂಶ’ ಅಭಿಮಾನಿಗಳಿಂದ ಈ ಮಹತ್ವದ ಕಾರ್ಯ ಆಗಿದೆ. ಒಳ್ಳೆಯ ಕೆಲಸದ ಮೂಲಕ ಅವರು ಅಭಿಮಾನ ಮೆರೆದಿದ್ದಾರೆ. ಹಾರ, ಪಟಾಕಿ, ಹಾಲಿನ ಅಭಿಷೇಕಕ್ಕೆ ದುಂದು ವೆಚ್ಚ ಮಾಡುವ ಬದಲು ಸಮಾಜಮುಖಿ ಕೆಲಸದ ಮೂಲಕ ‘ಹ್ಯಾಟ್ರಿಕ್ ಹೀರೋ’ಗೆ ಹೆಮ್ಮೆ ತರುವಂತೆ ಮಾಡಿದ್ದಾರೆ ಅವರ ಫ್ಯಾನ್ಸ್. ಕನಸು ಎಂಬ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರಕ್ಕೆ ಪುಸ್ತಕ ವಿತರಣೆ ಮಾಡಲಾಗಿದೆ. ಇದರಿಂದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿದೆ. ಈ ಪುಸ್ತಕಗಳು ಸಾವಿರಾರು ರೂಪಾಯಿ ಮೌಲ್ಯದ್ದಾಗಿವೆ. ವಿವಿಧ ಪಠ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ನೀಡಲಾಗಿದೆ.
ಹುಬ್ಬಳ್ಳಿಯ ಈ ಅಭಿಮಾನಿಗಳ ಕೆಲಸ ನಿಜಕ್ಕೂ ಶ್ಲಾಘನೀಯ. ಸಂಭ್ರಮದ ನೆಪದಲ್ಲಿ ಹಾಲಿನ ಅಭಿಷೇಕ, ಹಾರ, ಪಟಾಕಿ ಮುಂತಾದ ವಸ್ತುಗಳಿಗೆ ದುಡ್ಡು ಖರ್ಚು ಮಾಡಿದರೆ ಆ ಸಂಭ್ರಮ ಒಂದೇ ದಿನಕ್ಕೆ ಮುಗಿದುಹೋಗುತ್ತದೆ. ಆದರೆ ಅದೇ ದುಡ್ಡಿನಲ್ಲಿ ಶಿವಣ್ಣನ ಅಭಿಮಾನಕ್ಕಾಗಿ ಈ ರೀತಿ ಪಠ್ಯ ಪುಸ್ತಕಗಳನ್ನು ವಿತರಿಸಿದರೆ ಅದರಿಂದ ಎಷ್ಟೋ ಮಕ್ಕಳ ಭವಿಷ್ಯಕ್ಕೆ ಅನುಕೂಲ ಆಗುತ್ತದೆ. ಅಂಥ ಕೆಲಸ ಮಾಡಿರುವ ಹುಬ್ಬಳಿಯ ಶಿವರಾಜ್ಕುಮಾರ್ ಅಭಿಮಾನಿಗಳು ಎಲ್ಲರಿಗೂ ಮಾದರಿ ಆಗಿದ್ದಾರೆ. ಹೀಗೆ ಅರ್ಥಪೂರ್ಣವಾಗಿ ‘ಭಜರಂಗಿ 2’ ಚಿತ್ರವನ್ನು ಸ್ವಾಗತಿಸಲಾಗಿದೆ.
ಈ ಸಿನಿಮಾಗೆ ನಿರ್ದೇಶಕ ಎ. ಹರ್ಷ ಆ್ಯಕ್ಷನ್-ಕಟ್ ಹೇಳಿದ್ದಾರೆ. ಭಾವನಾ ಮೆನನ್, ಭಜರಂಗಿ ಲೋಕಿ, ಶ್ರುತಿ, ಚೆಲುವರಾಜು, ಕುರಿ ಪ್ರತಾಪ್ ಮುಂತಾದವರು ಅಭಿನಯಿಸಿದ್ದಾರೆ. ತಾಂತ್ರಿಕವಾಗಿ ‘ಭಜರಂಗಿ 2’ ಶ್ರೀಮಂತವಾಗಿ ಮೂಡಿಬಂದಿದೆ. ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಅಭಿಮಾನಿಗಳ ಜೊತೆ ಕುಳಿತು ಶಿವರಾಜ್ಕುಮಾರ್ ಫಸ್ಟ್ ಡೇ ಫಸ್ಟ್ ಶೋ ನೋಡಿದ್ದಾರೆ.
ಇದನ್ನೂ ಓದಿ:
Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್
Bhajarangi 2: ಫ್ಯಾನ್ಸ್ ಜತೆ ಕುಳಿತು ‘ಭಜರಂಗಿ 2’ ನೋಡಿದ ಶಿವಣ್ಣನ ಮೊದಲ ಪ್ರತಿಕ್ರಿಯೆ ಏನು?
Published On - 11:59 am, Fri, 29 October 21