ಸ್ವ-ಪರಿಶ್ರಮದಿಂದ ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲುಗಳನ್ನು ಹತ್ತುತ್ತಾ ಸಾಗುತ್ತಿರುವ ನಟ ಸೌರವ್ ಲೋಕೇಶ್ (Sourav Lokesh) ಅಲಿಯಾಸ್ ಭಜರಂಗಿ ಲೋಕಿ. ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದು ಬಳಿಕ ಸೈಡ್ ವಿಲನ್, ಮುಖ್ಯ ವಿಲನ್ ಹೀಗೆ ಬಡ್ತಿ ಪಡೆಯುತ್ತಾ ಸಾಗುತ್ತಿದ್ದಾರೆ. ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿಯೂ ನಟಿಸಿ ಅಲ್ಲಿಯೂ ಗಮನ ಸೆಳೆದು ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ ಭಜರಂಗಿ ಲೋಕಿ.
ಇತ್ತೀಚೆಗೆ ಬಿಡುಗಡೆ ಆಗಿರುವ ‘ಸಲಾರ್’ ಸಿನಿಮಾದಲ್ಲಿ ‘ಗುರುಂಗ್’ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ ಲೋಕಿ. ಇದೀಗ ಮತ್ತೊಂದು ಬಿಗ್ಬಜೆಟ್, ಸ್ಟಾರ್ ನಟರ ತೆಲುಗು ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ. ನಟ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಭಜರಂಗಿ ಲೋಕಿಗೆ ಪ್ರಮುಖ ಪಾತ್ರ ದೊರೆತಿದೆ.
ಚಿರಂಜೀವಿ ಜೊತೆಗೆ ಲೋಕಿ ತೆರೆ ಹಂಚಿಕೊಳ್ಳುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ‘ಆಚಾರ್ಯ’ ಸಿನಿಮಾನಲ್ಲಿಯೂ ಭಜರಂಗಿ ಲೋಕಿ ನಟಿಸಿದ್ದರು. ಇದೀಗ ಮೆಗಾಸ್ಟಾರ್ ನಟನೆಯ 156ನೇ ಸಿನಿಮಾ ‘ವಿಶ್ವಾಂಭರ’ ಸಿನಿಮಾದಲ್ಲಿ ನಟಿಸುತ್ತಿದ್ದು, ಪೌರಾಣಿಕ ಕತೆಯುಳ್ಳ ಈ ಸಿನಿಮಾದಲ್ಲಿ ಭಜರಂಗಿ ಲೋಕಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪೌರಾಣಿಕ ಅಥವಾ ಅತಿಮಾನುಷ ಕತೆಯುಳ್ಳ ಸಿನಿಮಾಗಳಲ್ಲಿ ಲೋಕಿಗೆ ನಟಿಸಿ ಅನುಭವವಿದೆ. ಅವರಿಗೆ ಹೆಸರು ತಂದುಕೊಟ್ಟಿದ್ದೇ ಅತಿಮಾನುಷ ಕತೆಯುಳ್ಳ ‘ಭಜರಂಗಿ’ ಸಿನಿಮಾ. ಇದೀಗ ಅದೇ ಮಾದರಿಯ ಕತೆಗೆ ಲೋಕಿ ಆಯ್ಕೆ ಆಗಿದ್ದು, ಅಲ್ಲಿಯೂ ಗಮನ ಸೆಳೆವ ವಿಶ್ವಾಸವಿದೆ. ಕೋವಿಡ್ ಸಮಯದಲ್ಲಿ ಗಾಯಗೊಂಡು ಆ ಬಳಿಕ ಸಿನಿಮಾಕ್ಕಾಗಿ ಮತ್ತೆ ಸತತ ಪರಿಶ್ರಮ ಹಾಕಿ ಫಿಟ್ ಆದ ಲೋಕಿ, ಈಗ ಮತ್ತೆ ಸಿನಿಮಾಗಳಲ್ಲಿ ಮಿಂಚುತ್ತಿರುವುದು ಅವರ ಅಭಿಮಾನಿಗಳಿಗೆ ಸಖತ್ ಖುಷಿಯ ವಿಚಾರ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ