
ನಟಿ ಭಾವನಾ ರಾಮಣ್ಣ (Bhavana Ramanna) ಅವರು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಅವರು ಐವಿಎಫ್ ತಂತ್ರಜ್ಞಾನದಿಂದ ತಾಯಿ ಆಗಿದ್ದಾರೆ. ಅವರಿಗೆ ಅವಳಿ ಮಕ್ಕಳು ಜನಿಸಬೇಕಿತ್ತು. ಆದರೆ, ಒಂದು ಮಗು ಹುಟ್ಟುವ ಮೊದಲೇ ನಿಧನ ಹೊಂದಿತ್ತು. ಈಗ ಭಾವನಾ ಅವರು ಮಗಳಿಗೆ ರುಕ್ಮಿಣಿ ಎಂದು ಹೆಸರು ಇಟ್ಟಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಭಾವನಾ ರಾಮಣ್ಣ ಗೆಳತಿ ಭಾವನಾ ಬೆಳಗೆರೆ ಅವರು ವಿವರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾವನಾ ರಾಮಣ್ಣ ಹಾಗೂ ಭಾವನ ಬೆಳಗೆರೆ ಮಧ್ಯೆ ಒಳ್ಳೆಯ ಗೆಳೆತನ ಇದೆ. ಹೀಗಾಗಿ, ಭಾವನಾ ಅವರು ತಮ್ಮ ಎರಡೂವರೆ ತಿಂಗಳ ಮಗುವಿನೊಂದಿಗೆ ಇತ್ತೀಚೆಗೆ ಭಾವನಾ ಬೆಳಗೆರೆ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಪ್ರೀತಿಯಿಂದ ಮಾತನಾಡಿದ್ದಾರೆ. ಜೊತೆಗೆ ಮಗಳಿಗೆ ರುಕ್ಮಿಣಿ ಹೆಸರು ಇಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ಭಾವನಾ ರಾಮಣ್ಣಗೆ ಆಘಾತ
‘ಜನ ಯಾರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನನ್ನನ್ನು ಇಷ್ಟಪಟ್ಟವರು ನನಗೆ ಆಶೀರ್ವಾದ ಮಾಡಿದ್ದಾರೆ. ಮಗುವಿಗೆ ತಿಳುವಳಿಕೆ ಬಂದಾಗ ಮಗುವಿಗೆ ಬೋಲ್ಡ್ ಆಗಿ ಹೇಳ್ತೀನಿ. ಐವಿಎಫ್ ಬೇಬಿ ನೀನು ಎಂದು ಅವಳಿಗೆ ಕನ್ವಿನ್ಸ್ ಮಾಡ್ತೀನಿ. ಆ ಧೈರ್ಯ ನನ್ನಲ್ಲಿದೆ. ಅದು ನನ್ನ ಮಗೂನೇ. ನನ್ನ ಅರ್ಧ ರಕ್ತ ಇದೆ. ನಾನು ಹೊಟ್ಟೆಯಲ್ಲಿ ಇಟ್ಟುಕೊಂಡು ಬೆಳೆಸಿದ್ದೇನೆ’ ಎಂದು ಭಾವನಾ ರಾಮಣ್ಣ ಅವರು ಭಾವನಾ ಬೆಳಗೆರೆ ಬಳಿ ಹೇಳಿದ್ದರಂತೆ.
‘ಏನು ಹೆಸರಿಡುತ್ತೀಯಾ? ಎಂದಿದ್ದಕ್ಕೆ ರುಕ್ಕಿಣಿ ಅಂದಳು. ಅದ್ಯಾಕೆ ಬೇರೆ ಹೊಸ ಹೆಸರು ಇಡಬಹುದಿತ್ತಲ್ಲಾ ಅಂದರೆ ಇಲ್ಲ, ರುಕ್ಮಿಣಿ ಅನ್ನೋದು ನನ್ನ ಅಜ್ಜಿ ಹೆಸರು. ಅವರು ತುಂಬ ರೆಬೆಲ್ ಆಗಿ, ಬೋಲ್ಡ್ ಆಗಿ ಬೆಳೆದವರು. ನಾನು ಅದೇ ಥರಾ ಅಂತ ನನ್ನನ್ನು ಗೇಲಿ ಮಾಡುತ್ತಿದ್ದರು. ಹಾಗಾಗಿ ನನ್ನ ಮಗಳೂ ಕೂಡ ಅಜ್ಜಿ ಥರ ಧೈರ್ಯವಂತೆ, ಬುದ್ಧಿವಂತೆ ಆಗಲಿ ಅಂತ ಆ ಹೆಸರು ಆಯ್ಕೆ ಮಾಡಿದ್ದಾಳಂತೆ. ಮನೆ ಕೆಲಸಕ್ಕೆ ಜನ ಇಟ್ಟುಕೊಂಡರೂ ಅವಳೇ ಮಗುವಿಗೆ ಮಸಾಜ್ ಮಾಡಿ, ಸ್ನಾನ ಮಾಡಿಸಿ ಆರೈಕೆ ಮಾಡುತ್ತಾಳೆ’ ಎಂದು ಭಾವನಾ ಬೆಳಗೆರೆ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.