ಹಿರಿಯ ನಟ ಎಂ.ಎಸ್. ಉಮೇಶ್ ಇನ್ನಿಲ್ಲ: ಅನಾರೋಗ್ಯದಿಂದ ನಿಧನ
ಸ್ಯಾಂಡಲ್ವುಡ್ ಹಿರಿಯ ನಟ ಎಂ.ಎಸ್. ಉಮೇಶ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 80 ವರ್ಷ ವಯಸ್ಸಿನ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಎಂ.ಎಸ್. ಉಮೇಶ್ ಅವರು ಜನಪ್ರಿಯತೆ ಪಡೆದಿದ್ದರು.

ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್. ಉಮೇಶ್ (MS Umesh) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ಉಮೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅನೇಕ ಕಲಾವಿದರು ಹೋಗಿ ಮಾತನಾಡಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥನೆ ಫಲಿಸಿಲ್ಲ. ಚಿಕಿತ್ಸೆ ಫಲಕಾರಿ ಆಗದೇ ಎಂ.ಎಸ್. ಉಮೇಶ್ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಉಮೇಶ್ ಅವರು ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಿದ್ದ ವೈದ್ಯರು ರೋಗವನ್ನು ಖಚಿತಪಡಿಸಿಕೊಂಡು, ಕಿಮೊಥೆರಪಿ ಹಾಗೂ ಇಮ್ಯೂನೋಥೆರಪಿ ಮೂಲಕ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಈಗ ಉಮೇಶ್ ನಿಧನರಾಗಿರುವುದು ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ನೋವುಂಟು ಮಾಡಿದೆ.
ಉಮೇಶ್ ಅವರು 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಉಮೇಶ್ ಅವರು ಅಭಿನಯಿಸಿದ್ದ ‘ಕಮಲ್ ಶ್ರೀದೇವಿ’, ‘ಐ ಆ್ಯಮ್ ಗಾಡ್’ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿದ್ದವು. ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು.
ಇದನ್ನೂ ಓದಿ: ‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಉಮೇಶ್ ಅವರು ಅಭಿನಯಿಸಿದ್ದಾರೆ. 1945ರ ಏಪ್ರಿಲ್ 24ರಂದು ಮೈಸೂರಿನಲ್ಲಿ ಜನಿಸಿದ ಅವರು 1960ರಲ್ಲಿ ಬಿಆರ್ ಪಂಥುಲು ನಿರ್ದೇಶನದ ‘ಮಕ್ಕಳ ರಾಜ್ಯ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ‘ನಾಗರ ಹೊಳೆ’, ‘ಗುರು ಶಿಷ್ಯರು’, ‘ಅನುಪಮಾ’, ‘ಕಾಮನ ಬಿಲ್ಲು’, ‘ಅಪೂರ್ವ ಸಂಗಮ’, ‘ಶ್ರುತಿ ಸೇರಿದಾಗ’, ‘ಹಾಲು ಸಕ್ಕರೆ’, ‘ಗೋಲ್ಮಾಲ್ ರಾಧಾಕೃಷ್ಣ’, ‘ಮಲಯ ಮಾರುತು’, ‘ಗಜಪತಿ ಗರ್ಭಭಂಗ’ ಮುಂತಾದವು ಉಮೇಶ್ ನಟನೆಯ ಪ್ರಮುಖ ಸಿನಿಮಾಗಳು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:46 am, Sun, 30 November 25




