ಪ್ರೀತಿಸಿ ಮದುವೆಯಾದ ಪತ್ನಿಗಾಗಿ 80ನೇ ವಯಸ್ಸಲ್ಲೂ ದುಡಿಯುತ್ತಿದ್ದ ಉಮೇಶ್
ನಟ ಎಂ.ಎಸ್. ಉಮೇಶ್ ಅವರು ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸು ಆಗಿತ್ತು. ಈ ನೋವಿನಲ್ಲಿ ಉಮೇಶ್ ಪತ್ನಿ ಸುಧಾ ಅವರು ಟಿವಿ9 ಜೊತೆ ಮಾತನಾಡಿ ಕಣ್ಣೀರು ಹಾಕಿದ್ದಾರೆ. ಉಮೇಶ್ ಮತ್ತು ಸುಧಾ ಅವರದ್ದು ಲವ್ ಮ್ಯಾರೇಜ್. ಪತಿಯ ಬಗ್ಗೆ ಭಾವುಕವಾಗಿ ಸುಧಾ ಮಾತಾಡಿದ್ದಾರೆ.

1960ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟ ಎಂಎಸ್ ಉಮೇಶ್ (MS Umesh) ಅವರು ವಿಧಿವಶರಾಗಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಉಮೇಶ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಈ ವಯಸ್ಸಿನಲ್ಲಿ ಕೂಡ ಅವರು ಕುಟುಂಬಕ್ಕೆ ಆಧಾರ ಆಗಿದ್ದರು. ಅನಾರೋಗ್ಯಕ್ಕೆ ಒಳಗಾಗುವುದಕ್ಕೂ ಮುನ್ನ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ಅವರು ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಿದ್ದರು. ಇಂದು ಉಮೇಶ್ ಅವರ ನಿಧನದಿಂದ ಕುಟುಂಬಕ್ಕೆ ಆಘಾತ ಆಗಿದೆ. ಎಂ.ಎಸ್. ಉಮೇಶ್ ಪತ್ನಿ ಸುಧಾ (MS Umesh wife Sudha) ಅವರು ಟಿವಿ9 ಜೊತೆ ಮಾತನಾಡಿದ್ದಾರೆ.
‘ನಮ್ಮ ದಾಂಪತ್ಯ ಜೀವನಕ್ಕೆ 57 ವರ್ಷ ಆಯಿತು. ನಮ್ಮದು ಲವ್ ಮ್ಯಾರೇಜ್. ನಾವಿಬ್ಬರೂ ಕಲಾವಿದರು. ಒಂದು ದಿನ ಕೂಡ ನಾವು ಜಗಳ ಆಡಿಲ್ಲ. ಅಷ್ಟು ಚೆನ್ನಾಗಿ ಹೊಂದಿಕೊಂಡು ಇದ್ದೆವು. ಅವರು ಹೋಗಿರುವುದರಿಂದ ನನಗೆ ಇರುವುದು ಕಷ್ಟ ಆಗಿಬಿಟ್ಟಿದೆ. ಮನಸ್ಸೇ ಇಲ್ಲದಂತೆ ಆಗಿದೆ. ಯಾರ ಬಳಿ ಹೇಳಿಕೊಳ್ಳೋದು? ಮಗ ಸತ್ತು ಹೋದ. ಇರುವುದು ಒಬ್ಬಳು ಮಗಳು. ನಮಗೆ ಆಧಾರ ಯಾರೂ ಇಲ್ಲ’ ಎಂದು ಸುಧಾ ಅವರು ಕಣ್ಣೀರು ಹಾಕಿದ್ದಾರೆ.
‘ಸಂಬಂಧಿಕರು ಅವರವರ ಪಾಡಿಗೆ ಇರುತ್ತಾರೆ. ನಮ್ಮವರು ಅಂತ ಒಬ್ಬರು ಬೇಕಲ್ಲವಾ? ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ದಿನ ಕುಳಿತುಕೊಂಡು ಅಳುತ್ತಿದ್ದೆ. ನನಗೆ ಲೋ ಬಿಪಿ. ಎಲ್ಲಿಯೂ ಹೋಗಲ್ಲ. ಮನೆಯಲ್ಲೇ ಇರುತ್ತೇನೆ. ಯಾರ ಬಳಿಯೂ ನಾವು ಕಷ್ಟ ಹೇಳಿಕೊಳ್ಳುತ್ತಿರಲಿಲ್ಲ. ಬೇರೆಯವರ ಬಗ್ಗೆ ನಾವು ಹೊಟ್ಟೆಕಿಚ್ಚು ಪಟ್ಟಿಲ್ಲ. ಮಗಳು ದಿಕ್ಕಾಪಾಲಾಗಿ ಹೋಗುತ್ತಾಳೆ ಎಂಬ ಚಿಂತೆ ಇದೆ’ ಎಂದಿದ್ದಾರೆ ಸುಧಾ.
‘ಮುಂದೆ ಹೇಗೆ ಜೀವನ ಮಾಡೋದು ಎಂಬ ಚಿಂತೆ ಅವರಿಗೆ ಇತ್ತು. ವಯಸ್ಸು ಆದಂತೆಲ್ಲಾ ಶಕ್ತಿ ಕುಂದಿತು. ಕೊನೆಗೂ ಸೀರಿಯಲ್ ಒಪ್ಪಿಕೊಂಡಿದ್ದರು. ಕಾಯಿಲೆ ಬಂತು ಅಂತ ಕ್ಯಾನ್ಸಲ್ ಮಾಡಿದೆವು. ಈಗಲೂ ನಾನು ದುಡಿಬೇಕು ಕಣೆ ಸುಧಾ ಅಂತ ಹೇಳುತ್ತಿದ್ದರು. ಕಾಲು ಜಾರಿ ಬಿದ್ದಿದ್ದೇ ಒಂದು ನೆಪ ಆಯಿತು. ಹುಷಾರಾಗುತ್ತೇನೆ ಎಂಬ ಭರವಸೆ ಅವರಿಗೆ ಇತ್ತು. ಆದರೆ ದೇಹಕ್ಕೆಲ್ಲ ಕ್ಯಾನ್ಸರ್ ಹರಡಿತ್ತು. ಅವರು ಹುಷಾರಾಗಲ್ಲ ಎಂಬುದು ನಮಗೆ ಗೊತ್ತಿತ್ತು. ಮೊದಲೇ ತಿಳಿದಿದ್ದರೆ ಏನಾದರೂ ಮಾಡಬಹುದಿತ್ತು’ ಎಂದು ಸುಧಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ನಿಧನಕ್ಕೂ ಮುನ್ನ ಹೇಗಿತ್ತು ಉಮೇಶ್ ಪರಿಸ್ಥಿತಿ: ವಿವರಿಸಿದ ಮಗಳು
‘ಮುಂದೆ ನಮ್ಮ ಜೀವನ ಹೇಗೆ ಅಂತ ನಾನು ಮತ್ತು ನನ್ನ ಮಗಳು ಯೋಚನೆ ಮಾಡುತ್ತಿದ್ದೇವೆ. ಬೇರೆಯವರು ಒಂದಿನ, ಎರಡು ದಿನ ಕೊಡಬಹುದು. ಪ್ರತಿ ದಿನ ಯಾರು ಕೊಡುತ್ತಾರೆ ಹೇಳಿ. ಮುಂದೆ ಗತಿ ಏನು ಅಂತ ಅಳುತ್ತಾ ಕೂತಿದ್ದೇನೆ’ ಎಂದು ಸುಧಾ ಅವರು ಕಣ್ಣೀರು ಹಾಕಿದ್ದಾರೆ. ಚಿತ್ರರಂಗದ ಅನೇಕರು ಬಂದು ಉಮೇಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



