‘ಬಾ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ’; ಸೂರಪ್ಪ ಬಾಬು ವಿರುದ್ಧ ಏಕವಚನದಲ್ಲಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್

ನಿರ್ಮಾಪಕ ಎಂಎನ್ ಕುಮಾರ್ ಹಾಗೂ ಸೂರಪ್ಪ ಬಾಬು ಮಧ್ಯೆ ಆರಂಭ ಆಗಿರುವ ಜಟಾಪಟಿ ಕೊನೆಯ ಹಂತ ತಲುಪಿದೆ. ಈ ಪ್ರಕರಣ ಕೊನೆಗೊಳ್ಳಬಾರದು ಎಂಬ ಉದ್ದೇಶ ಸೂರಪ್ಪ ಬಾಬುಗೆ ಇದೆಯಂತೆ.

‘ಬಾ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ’; ಸೂರಪ್ಪ ಬಾಬು ವಿರುದ್ಧ ಏಕವಚನದಲ್ಲಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್
ಚಕ್ರವರ್ತಿ-ಸೂರಪ್ಪ ಬಾಬು

Updated on: Jul 24, 2023 | 2:21 PM

ಒಂದು ಕಡೆ ಸುದೀಪ್ (Sudeep) ಹಾಗೂ ಎಂಎನ್​ ಕುಮಾರ್ ಮಧ್ಯೆ ಜಟಾಪಟಿ ನಡೆಯುತ್ತಿದೆ. ಮತ್ತೊಂದು ಕಡೆಯಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಮಧ್ಯೆ ಕಿತ್ತಾಟ ಶುರುವಾಗಿದೆ. ‘ಸುದೀಪ್ ವಿರುದ್ಧದ ಷಡ್ಯಂತ್ರದ ಹಿಂದೆ ಸೂರಪ್ಪ ಬಾಬು ಕೈವಾಡ ಇದೆ’ ಎಂದು ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದರು. ಈ ಸಂಬಂಧ ಸುದ್ದಿಗೋಷ್ಠಿ ಕರೆದು ಸೂರಪ್ಪ ಬಾಬು ಸಿಟ್ಟಾಗಿದ್ದರು. ಇದಕ್ಕೆ ಈಗ ಚಕ್ರವರ್ತಿ ಚಂದ್ರಚೂಡ್ ಅವರು ತಿರುಗೇಟು ನೀಡಿದ್ದಾರೆ.

ಇಂದು (ಜುಲೈ 23) ಸುದ್ದಿಗೋಷ್ಠಿ ಕರೆದು ಚಕ್ರವರ್ತಿ ಅವರು ಮಾತನಾಡಿದ್ದಾರೆ. ಈ ಮೊದಲು ಚಕ್ರವರ್ತಿ ಅವರು ಸೂರಪ್ಪ ಬಾಬುನ ಶಿಖಂಡಿ ಎಂದು ಕರೆದಿದ್ದರು. ಇದಕ್ಕೆ ಉತ್ತರಿಸಿದ್ದ ಸೂರಪ್ಪ ಬಾಬು, ನನಗೂ ಹೆಂಡತಿ, ಮಕ್ಕಳು ಇದ್ದಾರೆ ಎಂದಿದ್ದರು. ಇದಕ್ಕೆ ಚಕ್ರವರ್ತಿ ಉತ್ತರಿಸಿದ್ದಾರೆ. ‘ಹೆಂಡತಿ, ಮಕ್ಕಳು ಇದ್ರೆ ಗಂಡಸ್ತನ ಬರುವುದಿಲ್ಲ, ಗಂಡಸಿನ ರೀತಿ ಬದುಕಬೇಕು’ ಎಂದಿದ್ದಾರೆ.

ನಿರ್ಮಾಪಕ ಎಂಎನ್ ಕುಮಾರ್ ಹಾಗೂ ಸೂರಪ್ಪ ಬಾಬು ಮಧ್ಯೆ ಆರಂಭ ಆಗಿರುವ ಜಟಾಪಟಿ ಕೊನೆಯ ಹಂತ ತಲುಪಿದೆ. ಈ ಪ್ರಕರಣ ಕೊನೆಗೊಳ್ಳಬಾರದು ಎಂಬ ಉದ್ದೇಶ ಸೂರಪ್ಪ ಬಾಬು ಹೊಂದಿದ್ದಾರೆ ಎಂಬುದಾಗಿ ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದಾರೆ. ‘ಈ ವ್ಯಕ್ತಿಗೆ ಎಲ್ಲವನ್ನೂ ಕೆದಕಬೇಕು. ಆತ ಸ್ಯಾಡಿಸ್ಟ್​. ಈತ ಜೊತೆಯಲ್ಲಿದ್ದವರಿಗೇ ಈ ರೀತಿ ಮಾಡೊದು. ಸೂರಪ್ಪ ಬಾಬು ಪ್ರೆಸ್​ಮೀಟ್​ಗೆ ಕುಮಾರ್ ಅವರ ಮಗ ಏಕೆ ಬರಬೇಕಿತ್ತು’ ಎಂದು ಚಕ್ರವರ್ತಿ ಚಂದ್ರಚೂಡ್ ಪ್ರಶ್ನೆ ಮಾಡಿದ್ದಾರೆ.

‘ಸೂರಪ್ಪ ಬಾಬು ನಿನಗೆ ಗೌರವ ನೀಡುತ್ತೇನೆ. ನಾನು ನಿನಗೆ ಕೆಲಸ ಕೊಡುತ್ತೇನೆ. ನನಗೆ ಸೆಕ್ಯೂರಿಟಿ ಗಾರ್ಡ್​ಬೇಕು. ಬಾ ನಿನಗೆ ಕೆಲಸ ಕೊಡುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದೀಯಾ. ನನಗೆ ಎರಡು ಡಿವೋರ್ಸ್​ ಆಗಿದೆ. ಅದು ಎಲ್ಲರಿಗೂ ಗೊತ್ತಿದೆ. ಪತ್ರಕರ್ತರಿಗೆ ಸೂರಪ್ಪ ಬಾಬು ಆಮಿಷಡವೊಡ್ಡಿದ್ದಾನೆ. ಅದರ ದಾಖಲೆಗಳನ್ನು ನೀಡುತ್ತೇನೆ. ನಾನು ಇದನ್ನು ಇಲ್ಲಿಗೆ ನಿಲ್ಲಿಸಲ್ಲ’ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.

‘ನನ್ನ ಅಣ್ಣನ (ಸುದೀಪ್) ವಿಷಯ ಬಂದ್ರೆ ನಾನು ಮಾತನಾಡುತ್ತೀನಿ. ಸುದೀಪ್ ಎಷ್ಟು ನೊಂದುಕೊಂಡಿದ್ದಾರೆ ಅಂತ ಗೊತ್ತಾ? ಈಗ ಈ ಸಮಸ್ಯೆ ಬಗೆಹರಿಯುತ್ತಿದೆ. ಶಿವಣ್ಣ, ರವಿ ಸರ್ ಬಂದು ಬಗೆ ಹರಿಸ್ತಿದ್ದಾರೆ. ಆದರೆ, ಇದನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡ್ತಿದ್ದಾನೆ. ಊಟ ಮಾಡಿದ ಮನೆಗೆ ದ್ರೋಹ ಬಗೆಯುತ್ತಿದ್ದಾನೆ’ ಎಂದಿದ್ದಾರೆ ಚಕ್ರವರ್ತಿ.

ಇದನ್ನೂ ಓದಿ: Sudeep: ‘ನನ್ನ-ಸುದೀಪ್ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಆಗಿದೆ’; ಸೂರಪ್ಪ ಬಾಬು

‘ಸುದೀಪ್ ಅವರಿಗೆ ಸೂರಪ್ಪ ಬಾಬು ಏಳು ಕೋಟಿ ರೂಪಾಯಿ ಕೊಡಬೇಕು. ನಾನು ಕೇಳೇ ಕೇಳ್ತೀನಿ. ಸಮಯ ಬಂದಾಗ ಸುದೀಪ್ ಅವರು ಕೂಡ ಒಂದು ದಿನ ಇದನ್ನು ಕೇಳೆ ಕೇಳ್ತಾರೆ’ ಎಂದಿದ್ದಾರೆ ಚಕ್ರವರ್ತಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:39 pm, Mon, 24 July 23