ಸಂಗೀತ ನಿರ್ದೇಶಕ, ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ (Chandan Shetty) ಅವರು ನಟನೆ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆ್ಯಂಗ್ರಿ ಎಂಗ್ ಮ್ಯಾನ್ ರೀತಿ ಕಾಣಿಸಿಕೊಳ್ಳಲು ಅವರು ತಯಾರಾಗಿದ್ದಾರೆ. ಈ ರೀತಿಯ ಸುಳಿವನ್ನು ಒಂದಷ್ಟು ದಿನಗಳ ಹಿಂದೆಯೇ ಈ ಸಿನಿಮಾ ತಂಡ ಬಿಟ್ಟುಕೊಟ್ಟಿತ್ತು. ಚಿಕ್ಕದೊಂದು ಪ್ರೋಮೋ ಮೂಲಕ ಜನರ ಕುತುಹಲ ಕೆರಳಿಸುವ ಪ್ರಯತ್ನವನ್ನು ಮಾಡಿತ್ತು. ಅಂತೂ ಇಂತೂ ಆ ಸಿನಿಮಾದ (Chandan Shetty New Movie) ಟೈಟಲ್ ಈಗ ಅನಾವರಣ ಆಗಿದೆ. ಇದು ಕಾಲೇಜೊಂದರ ಸುತ್ತ ನಡೆಯುವ ಸಿನಿಮಾ ಆದ್ದರಿಂದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷ ಏನೆಂದರೆ, ಅದನ್ನು ವಿದ್ಯಾರ್ಥಿಗಳೇ ಬಿಡುಗಡೆ ಮಾಡಿ, ಖುಷಿಪಟ್ಟಿದ್ದಾರೆ. ಈ ಸಿನಿಮಾಗೆ ಯುವ ಡೈರೆಕ್ಟರ್ ಅರುಣ್ ಅಮುಕ್ತ ಅವರು ನಿರ್ದೇಶನ ಮಾಡುತ್ತಿದ್ದಾರೆ.
ನಿರ್ದೇಶಕ ಅರುಣ್ ಅಮುಕ್ತ ಅವರು ಈ ಹಿಂದೆ ಶ್ರೀಮುರಳಿ ನಟನೆಯ ‘ಲೂಸ್ಗಳು’ ಸಿನಿಮಾವನ್ನು ನಿರ್ದೇಶಿಸಿದ್ದರು. ಅವರು ಈಗ ಈ ಕಾಲದ ಟ್ರೆಂಡ್ಗೆ ಸೂಕ್ತ ಆಗುವಂತಹ ಹೊಸ ರೀತಿಯ ಕಥೆಯೊಂದನ್ನು ಇಟ್ಟುಕೊಂಡು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಈ ಟೈಟಲ್ ಬಿಡುಗಡೆ ವಿಚಾರದಲ್ಲೇ ಸಿನಿಮಾ ತಂಡ ಒಂದಷ್ಟು ಕ್ರಿಯೇಟಿವ್ ಆದಂತಹ ಹಾದಿಯನ್ನು ಅನುಸರಿಸಿದೆ. ರಾಜ್ಯದಲ್ಲಿನ ಹಲವು ಕಾಲೇಜ್ಗಳಲ್ಲಿ ಇರುವ ವಿದ್ಯಾರ್ಥಿಗಳು ಈ ಸಿನಿಮಾದ ಟೈಟಲ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾ ಮೂಲಕ ಆ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ. ಈ ಪ್ರಯತ್ನ ಗಮನ ಸೆಳೆದಿದೆ.
ಶಾಲಾ-ಕಾಲೇಜಿನ ಕ್ಯಾಂಪಸ್ ಕಥೆಗಳಿಗೆ ಪ್ರೇಕ್ಷಕರು ಯಾವಾಗಲೂ ಮೆಚ್ಚುಗೆ ಸೂಚಿಸುತ್ತಾರೆ. ‘ಕಿರಿಕ್ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮುಂತಾದ ಸಿನಿಮಾಗಳು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಆ ಬಳಿಕ ಕೆಲವು ವರ್ಷಗಳ ಕಾಲ ಆ ರೀತಿಯ ಚಿತ್ರಗಳು ಬಿಡುಗಡೆ ಆಗಿರಲಿಲ್ಲ. ಕೆಲವೇ ದಿನಗಳ ಹಿಂದೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಡೇರ್ಡೆವಿಲ್ ಮುಸ್ತಫಾ’ ರೀತಿಯ ಕಾಲೇಜು ಕೇಂದ್ರಿತ ಕಥೆ ಇರುವ ಸಿನಿಮಾಗಳು ಯಶಸ್ವಿ ಆಗಿವೆ. ಈ ಥರಹದ ಚಿತ್ರಗಳ ಕೊರತೆಯನ್ನು ಒಂದು ಮಟ್ಟಿಗೆ ನೀಗಿಸಿದಂತೆ ಆಗಿದೆ. ಅದೇ ರೀತಿ ದೊಡ್ಡ ಗೆಲುವನ್ನು ಪಡೆಯುವ ಭರವಸೆಯಿಂದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಅನೌನ್ಸ್ ಆಗಿದೆ.
ಇದನ್ನೂ ಓದಿ: Chandan Shetty: ಚಂದನ್ ಶೆಟ್ಟಿ ಈಗ ‘ಸೂತ್ರಧಾರಿ’; 2ನೇ ಚಿತ್ರದಲ್ಲಿ ಸಿಕ್ತು ಪೊಲೀಸ್ ಅಧಿಕಾರಿ ಪಾತ್ರ
ಚಂದನ್ ಶೆಟ್ಟಿ ಜೊತೆ ಅಮರ್, ಮಾನಸಿ, ಭಾವನಾ, ವಿವಾನ್, ಸುನೀಲ್ ಪುರಾಣಿಕ್, ಭವ್ಯ, ಅರವಿಂದ್ ರಾವ್, ರಘು ರಾಮನಕೊಪ್ಪ, ಸಿಂಚನಾ, ಕಾಕ್ರೋಚ್ ಸುಧಿ, ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜೇತ್ ಕೃಷ್ಣ, ಶಶಾಂಕ್ ಶೇಷಗಿರಿ ಮತ್ತು ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಬ್ರಮಣ್ಯ ಕುಕ್ಕೆ ಹಾಗೂ ಎ.ಸಿ. ಶಿವಲಿಂಗೇಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕುಮಾರ್ ಗೌಡ ಅವರ ಛಾಯಾಗ್ರಹಣ, ಪವನ್ ಗೌಡ ಸಂಕಲನ, ಟೈಗರ್ ಶಿವು ಮತ್ತು ನರಸಿಂಹ ಅವರ ಸಾಹಸ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಭರ್ಜರಿ’ ಚೇತನ್ ಕುಮಾರ್ ಹಾಗೂ ವಾಸುಕಿ ವೈಭವ್ ಅವರು ಸಾಹಿತ್ಯ ಬರೆಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.