AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಬಿಡುಗಡೆ ದಿನವೇ ಇವೆಂಟ್: ರಾಜ್ ಬಿ ಶೆಟ್ಟಿ ಪರೋಕ್ಷ ಅಸಮಾಧಾನ ಕೆಆರ್​ಜಿ ವಿರುದ್ಧವೇ?

Toby: ತಮ್ಮ ಸಿನಿಮಾ ಬಿಡುಗಡೆ ದಿನ ಹಾಗೂ ಬಹುತೇಕ ಅದೇ ಸಮಯದಲ್ಲಿ ಇವೆಂಟ್ ಒಂದನ್ನು ಆರ್ಗನೈಜ್ ಮಾಡಿರುವ ಸಿನಿಮಾ ತಂಡದ ವಿರುದ್ಧ ರಾಜ್ ಬಿ ಶೆಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಕಾಲೆಳೆಯುವುದೇ ಉದ್ದೇಶವಾಗಿದ್ದರೆ ಎಳೆಯಿರಿ ಸವಾಲಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ.

ಸಿನಿಮಾ ಬಿಡುಗಡೆ ದಿನವೇ ಇವೆಂಟ್: ರಾಜ್ ಬಿ ಶೆಟ್ಟಿ ಪರೋಕ್ಷ ಅಸಮಾಧಾನ ಕೆಆರ್​ಜಿ ವಿರುದ್ಧವೇ?
ಟೋಬಿ-ರಾಜ್ ಬಿ ಶೆಟ್ಟಿ
ಮಂಜುನಾಥ ಸಿ.
|

Updated on: Aug 25, 2023 | 7:19 PM

Share

ರಾಜ್ ಬಿ ಶೆಟ್ಟಿ (Raj B Shetty) ನಟನೆಯ ‘ಟೋಬಿ‘ (Toby) ಸಿನಿಮಾ ಇಂದು (ಆಗಸ್ಟ್ 25) ಬಿಡುಗಡೆ ಆಗಿದೆ. ಸಿನಿಮಾಕ್ಕೆ ನಿರೀಕ್ಷಿಸಿದಂತೆಯೇ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾದ ನಟ ರಾಜ್ ಬಿ ಶೆಟ್ಟಿ ಮಾತ್ರ ತುಸು ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಪ್ರೇಕ್ಷಕರಲ್ಲ, ಬದಲಿಗೆ ಚಿತ್ರರಂಗದಲ್ಲಿ ಇರುವವರೇ. ಮೊದಲ ದಿನ ಸಿನಿಮಾಕ್ಕೆ ದೊರಕುತ್ತಿರುವ ಉತ್ತಮ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುತ್ತಾ, ‘ಕೆಲವರ’ ಮೇಲೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಟಿವಿ9 ಜೊತೆ ಮಾತನಾಡಿರುವ ರಾಜ್ ಬಿ ಶೆಟ್ಟಿ, ”ಒಂದು ಸಿನಿಮಾ ಬಿಡುಗಡೆ ಆಗಬೇಕಾದರೆ, ಅದಕ್ಕೆ ಠಕ್ಕರ್ ಕೊಡಬೇಕು ಎಂದುಕೊಂಡು ನೀವು ನಿಮ್ಮ ಸಿನಿಮಾದ ಇವೆಂಟ್ ಮಾಡ್ತೀರ ಅಂದರೆ ನೀವು ಚಿಕ್ಕೋರಾಗ್ತೀರ. ದೊಡ್ಡೋರು ನೀವು ಚಿಕ್ಕೋರಾಗಬೇಡಿ. ಮಾಡ್ಲೇ ಬೇಕು ಅಂತಾದ್ರೆ ಮಾಡಿ, ಈಗಾಗಲೇ ಒಂದನ್ನು ಚಾಲೆಂಜ್ ಆಗಿ ತಗೊಂಡಿದ್ದೀನಿ, ಇನ್ನೊಂದನ್ನು ಸವಾಲಾಗಿ ಸ್ವೀಕರಿಸುತ್ತೇನೆ” ಎಂದು ನಗುತ್ತಲೇ ಹೇಳಿ ಕಪ್ಪು ದಾರಕ್ಕೆ ಕಟ್ಟಿದ ನಾಣ್ಯವೊಂದನ್ನು ತೋರಿಸಿದ್ದಾರೆ.

ಮುಂದುವರೆದು, ”ವ್ಯಕ್ತಿಯನ್ನು ದ್ವೇಷ ಮಾಡಿ ಪರವಾಗಿಲ್ಲ, ಆದರೆ ಸಿನಿಮಾನ ದ್ವೇಷ ಮಾಡಬೇಡಿ. ಯಾರೇ ಆಗಲಿ, ಎಂಥಹವರೇ ಆಗಲಿ ಅವರ ಸಿನಿಮಾದ ಟ್ರೈಲರ್ ಚೆನ್ನಾಗಿದ್ದರೆ ನಾನು ಶೇರ್ ಮಾಡ್ತೀನಿ ಏಕೆಂದರೆ ನಾನು ದುಡಿಯುತ್ತಿರುವ, ಅನ್ನ ತಿನ್ನುತ್ತಿರುವ ಭೂಮಿ ಇದು. ಯಾರೇ ಚೆನ್ನಾಗಿ ಸಿನಿಮಾ ಮಾಡಿದರೂ ನಾನು ಬೆಂಬಲಿಸುತ್ತೇನೆ. ನೀವು ನಮ್ಮ ಸಿನಿಮಾಕ್ಕೆ ಬೆಂಬಲಿಸಲೇ ಬೇಕು ಎಂದೇನು ಇಲ್ಲ ಆದರೆ ಕಾಲೆಳೆಯಬೇಡಿ, ಕಾಲು ಎಳೆಯಲೇ ಬೇಕು ಅನ್ನೋದಾದ್ರೆ ಎಳೀರಿ, ಪ್ರಯತ್ನ ಮಾಡಿ” ಎಂದು ಪರೋಕ್ಷವಾಗಿ ಸವಾಲು ಎಸೆದಿದ್ದಾರೆ ರಾಜ್ ಬಿ ಶೆಟ್ಟಿ.

ಇದನ್ನೂ ಓದಿ:ದುಲ್ಕರ್ ಸಲ್ಮಾನ್​ಗೆ ಆಕ್ಷನ್ ಕಟ್ ಹೇಳಲಿದ್ದಾರೆ ರಾಜ್ ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾ ಬಿಡುಗಡೆ ಆಗುವ ದಿನ, ಬಹುತೇಕ ಅದೇ ಸಮಯಕ್ಕೆ ಕೆಆರ್​ಜಿ ನಿರ್ಮಾಣ ಸಂಸ್ಥೆ ತನ್ನ ಸಿನಿಮಾದ ಇವೆಂಟ್ ಒಂದನ್ನು ಆಯೋಜಿಸಿ, ಮಾಧ್ಯಮದವರನ್ನು, ಯೂಟ್ಯೂಬ್ ಚಾನೆಲ್​ನವರನ್ನು ಆಹ್ವಾನಿಸಿತ್ತು. ಹೀಗಾಗಿ ‘ಟೋಬಿ’ ಸಿನಿಮಾದ ಮೊದಲ ದಿನದ ಪ್ರೇಕ್ಷಕರ ಪ್ರತಿಕ್ರಿಯೆ ಇತರೆ ಸುದ್ದಿಗಳ ಪ್ರಚಾರ ಸೂಕ್ತ ರೀತಿಯಲ್ಲಿ ಆಗಲಿಲ್ಲವೆಂಬುದು ರಾಜ್ ಬಿ ಶೆಟ್ಟಿ ಬೇಸರಕ್ಕೆ ಕಾರಣ.

ಯಾವುದೇ ಸಿನಿಮಾ ತಂಡಕ್ಕೆ ಬಿಡುಗಡೆಯಾದ ಮೊದಲ ದಿನ ಬಹಳ ಮುಖ್ಯ. ಸಿನಿಮಾ ಬಿಡುಗಡೆ ಆಗುವ ದಿನ ಮಾಧ್ಯಮಗಳ ಮೂಲಕ ಆಗುವ ಪ್ರಚಾರ, ಅಭಿಪ್ರಾಯ ಹಂಚಿಕೊಳ್ಳುವ ಪ್ರೇಕ್ಷಕರು ನೀಡುವ ಪ್ರಚಾರಗಳು ಸಿನಿಮಾದ ಹಣೆಬರಹ ನಿರ್ಧರಿಸುತ್ತವೆ. ಆದರೆ ಸಿನಿಮಾ ಬಿಡುಗಡೆ ದಿನವೇ ನಿರೀಕ್ಷಿಸಿದಷ್ಟು ಪ್ರಚಾರ ದೊರೆಯದ ಕಾರಣ ರಾಜ್ ಬಿ ಶೆಟ್ಟಿ ಬೇಸರಗೊಂಡಿದ್ದು ಸಹಜವಾಗಿದೆ.