‘ಚಂದ್ರ ಚಕೋರಿ’ ಸಕ್ಸಸ್ ಬಳಿಕ ನಟನೆಗೆ ಗುಡ್ಬೈ ಹೇಳಿದ್ದೇಕೆ ಪ್ರಿಯಾ? ಕೊನೆಗೂ ಅಸಲಿ ವಿಷಯ ರಿವೀಲ್
ಬ್ಲಾಕ್‌ಬಸ್ಟರ್ ‘ಚಂದ್ರ ಚಕೋರಿ’ ಸಿನಿಮಾ ಬಳಿಕ ದಿಢೀರನೆ ಮಾಯವಾಗಿದ್ದ ನಟಿ ಪ್ರಿಯಾ ಛಬ್ರಿಯಾ ಕೊನೆಗೂ ತಾವೇಕೆ ಚಿತ್ರರಂಗದಿಂದ ದೂರ ಉಳಿದಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಂದೆಯ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಗಳಿಂದ ಸಿನಿಮಾಗಳಿಂದ ದೂರವಾಗಿದ್ದ ನಟಿ, ಇದೀಗ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

ಮುಖ್ಯಾಂಶಗಳು
- ‘ಚಂದ್ರ ಚಕೋರಿ’ ಹಿಟ್ ಆದ್ರೂ ನಟಿ ಮಾಯವಾಗಿದ್ದೇಕೆ?
- ಅಪಾರ ಆಫರ್‌ಗಳಿದ್ದರೂ ಭಾರತ ತೊರೆದಿದ್ದ ಪ್ರಿಯಾ
- ಸೌದಿಗೆ ತೆರಳಿದ್ದ ನಟಿಗೆ ಎದುರಾಯ್ತು ವದಂತಿಗಳ ಬಿಸಿ
ಕನ್ನಡ ಚಿತ್ರರಂಗದಲ್ಲಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಸಿನಿಮಾ ಎಂದರೆ ‘ಚಂದ್ರ ಚಕೋರಿ’. ಈ ಸಿನಿಮಾದಲ್ಲಿ ಶ್ರೀಮುರಳಿ ಪುಟ್ಟರಾಜು ಪಾತ್ರ ಮಾಡಿದರೆ ಪ್ರಿಯಾ ಅವರು ಸುಧಾ ಹೆಸರಿನ ಪಾತ್ರ ಮಾಡಿದ್ದರು. ಆ ಚಿತ್ರದ ಯಶಸ್ಸಿನ ಬಳಿಕ ಪ್ರಿಯಾ ದಿಢೀರನೆ ಚಿತ್ರರಂಗದಿಂದ ಮಾಯವಾಗಿದ್ದರು. ಅವರು ಇಷ್ಟೊಂದು ವರ್ಷ ಎಲ್ಲಿದ್ದರು ಹಾಗೂ ಮತ್ತೆ ಬಣ್ಣದ ಲೋಕಕ್ಕೆ ಹೇಗೆ ಮರಳುತ್ತಿದ್ದಾರೆ ಎಂಬ ಬಗ್ಗೆ ಸ್ವತಃ ಅವರೇ ವೀಡಿಯೊ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
ಸಿನಿಮಾಗಳಿಂದ ದೂರ ಉಳಿಯಲು ಕಾರಣವೇನು?
‘ಚಂದ್ರ ಚಕೋರಿ’ ಸಿನಿಮಾ ತೆರೆಕಂಡ ತಕ್ಷಣವೇ ಅವರ ತಂದೆಯವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿತು. ಹೀಗಾಗಿ ಕುಟುಂಬದ ಜೊತೆಗಿರಲು ಅವರು ಸೌದಿ ಅರೇಬಿಯಾಗೆ ವಾಪಸ್ ತೆರಳಬೇಕಾಯಿತು. ಆ ಸಮಯದಲ್ಲಿ ಕನ್ನಡ ಚಿತ್ರರಂಗದಿಂದ ಸಾಲು ಸಾಲು ಆಫರ್‌ಗಳು ಬಂದರೂ ತಂದೆಯ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲದಕ್ಕೂ ‘ನೋ’ ಎಂದಿದ್ದರು. ತಂದೆ ಚೇತರಿಸಿಕೊಳ್ಳುವವರೆಗೂ ಸುಮಾರು ಎರಡು ವರ್ಷಗಳ ಕಾಲ ಅವರು ಸೌದಿಯಲ್ಲೇ ಉಳಿದುಕೊಂಡಿದ್ದರು.
View this post on Instagram
ಈ ಅವಧಿಯಲ್ಲಿ ‘ಪ್ರಿಯಾ ಇನ್ನು ಭಾರತಕ್ಕೆ ಮರಳುವುದಿಲ್ಲ’ ಎಂಬ ವದಂತಿ ಹರಡಿತ್ತು. ಆದರೆ ಎರಡು ವರ್ಷಗಳ ನಂತರ ಅವರು ಮತ್ತೆ ಭಾರತಕ್ಕೆ ಮರಳಿದಾಗ, ಅವರಿಗೆ ಬರುವ ಆಫರ್‌ಗಳು ನಿಂತು ಹೋಗಿದ್ದವು. ಆ ಬಳಿಕ ಅವರು ಜಾಹೀರಾತುಗಳು ಹಾಗೂ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ನಂತರ ಮದುವೆಯಾಗಿ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದರು.
ಕಂಬ್ಯಾಕ್ ಮಾಡಲು ಕಾರಣವೇನು?
ಇನ್ಸ್ಟಾಗ್ರಾಮ್ ಹಾಗೂ ಸೋಶಿಯಲ್ ಮೀಡಿಯಾ ಬಂದ ಮೇಲೆ, ಕಳೆದ ಒಂದು ವರ್ಷದಿಂದ ‘ಚಂದ್ರ ಚಕೋರಿ’ ಚಿತ್ರದ ಸಕ್ಸಸ್ ಹಾಗೂ ಅಭಿಮಾನಿಗಳ ಅಪಾರ ಪ್ರೀತಿ ಮತ್ತೆ ತಮಗೆ ಸಿಗಲು ಪ್ರಾರಂಭವಾಯಿತು ಎಂದು ಪ್ರಿಯಾ ಹೇಳಿದ್ದಾರೆ. ಅಭಿಮಾನಿಗಳಿಂದ ಬಂದ ಸಂದೇಶಗಳು ಮತ್ತು ಪ್ರೀತಿಗೆ ಪ್ರತಿಯಾಗಿ ಏನನ್ನಾದರೂ ನೀಡಬೇಕು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿರಬೇಕು ಎನ್ನುವ ಕಾರಣಕ್ಕೆ ತಾವು ‘ಚಂದ್ರ ಚಕೋರಿ’ ಹಾಡುಗಳ ರೀಲ್ಸ್ ಮಾಡಲು ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ಚಂದ್ರ ಚಕೋರಿ’ ಸಿನಿಮಾ ಶ್ರೀಮುರಳಿಗಾಗಿ ಮಾಡಿದ್ದಲ್ಲ: ಎಸ್ ನಾರಾಯಣ್
ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ
ಪ್ರಸ್ತುತ ಪ್ರಿಯಾ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದು, ಜಾಹೀರಾತುಗಳು, ನಾಟಕ, ಸಿನಿಮಾಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ರಚನೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ಇನ್ನೂ ಕೆಲವು ಹೊಸ ಯೋಜನೆಗಳಿದ್ದು, ಸರಿಯಾದ ಸಮಯ ಬಂದಾಗ ಅದನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




