ಪ್ರೇಕ್ಷಕರನ್ನು ಮೊದಲು ತಲುಪುವುದೇ ಸಿನಿಮಾದ ಟೈಟಲ್. ಜನರ ಗಮನ ಬೇಗ ಸೆಳೆದುಕೊಳ್ಳಬೇಕು ಎಂದರೆ ಶೀರ್ಷಿಕೆ ಚೆನ್ನಾಗಿರಬೇಕು. ಹಾಗಾಗಿ ಡಿಫರೆಂಟ್ ಆದ ಟೈಟಲ್ಗಳನ್ನು ಚಿತ್ರತಂಡದವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ‘KA 11 1977’. ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಯಿತು. ‘KA-11-1977’ ಟೈಟಲ್ ಅನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡಿದ್ದು ವಿಶೇಷ.
‘KA-11-1977’ ಶೀರ್ಷಿಕೆ ಅನಾವರಣ ಮಾಡಿದ ಬಳಿಕ ಚಂದ್ರಶೇಖರ ಕಂಬಾರ ಅವರು ಮಾತನಾಡಿದರು. ‘ಶೀರ್ಷಿಕೆ ನೋಡಿದರೆ ಈ ಸಿನಿಮಾ ಹೊಸ ರೀತಿಯಲ್ಲಿ ಬರಬಹುದು ಅಂತ ತಿಳಿಯುತ್ತದೆ. ಈಗಿನ ಜನರು ಈ ರೀತಿಯ ಸಿನಿಮಾಗಳನ್ನೇ ಇಷ್ಟಪಡುತ್ತಾರೆ. ಸಿನಿಮಾ ಎಂಬುದು ಮನರಂಜನಾ ಲೋಕ. ಅದರಂತೆ ನೀವು ಅಂಥದ್ದೇ ಸಿನಿಮಾ ನೀಡುವಿರಿ ಅಂತ ನಂಬಿರುತ್ತೇನೆ. ಎಲ್ಲರಂತೆ ನಾನು ಸಹ ಸಿನಿಮಾ ನೋಡಲು ಕಾಯುತ್ತಿರುತ್ತೇನೆ. ಚಿತ್ರತಂಡಕ್ಕೆ ಶುಭವಾಗಲಿ’ ಎಂದು ಚಂದ್ರಶೇಖರ ಕಂಬಾರರು ಹೇಳಿದರು.
ಶರಣ್ ನಟಿಸಿದ್ದ ‘ಕಾಲೇಜ್ ಕಾಲೇಜ್’, ‘ಥ್ಯಾಂಕ್ಸ್’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಜಗದೀಶ್ ಕೊಪ್ಪ ಅವರು ಈಗ ದೊಡ್ಡ ಗ್ಯಾಪ್ ಬಳಿಕ ಮತ್ತೆ ಆ್ಯಕ್ಷನ್-ಕಟ್ ಹೇಳಲು ಬಂದಿದ್ದಾರೆ. ‘KA-11-1977’ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಅಷ್ಟೇ ಅಲ್ಲದೇ, ಸಹ ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
‘ಪ್ರಕಾಶ್ ಪ್ರೊಡಕ್ಷನ್’ ಮೂಲಕ ಬೆಂಗಳೂರಿನ ಉದ್ಯಮಿ ಹೆಚ್. ಪ್ರಕಾಶ್ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾ ವಿನೂತನ, ವಿಶಿಷ್ಟ ಮತ್ತು ವಿಸ್ಮಯಗಳಿಂದ ಕೂಡಿರುತ್ತದೆ ಎಂದು ಚಿತ್ರತಂಡದವರು ಹೇಳಿದ್ದಾರೆ. ಸದ್ಯಕ್ಕೆ ಟೈಟಲ್ ಪೋಸ್ಟರ್ ಮಾತ್ರ ಹೊರಬಂದಿದೆ. ಕಥೆಯಲ್ಲಿ ಕುತೂಹಲಕಾರಿ ಅಂಶಗಳು ಇರುವುದರಿಂದ ಕಥೆಯ ಎಳೆಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: 7 ತಿಂಗಳ ಬಳಿಕ ಮೌನ ಮುರಿದ ನಟ ದರ್ಶನ್; ಅಭಿಮಾನಿಗಳಿಗೆ ಸಂಕ್ರಾಂತಿ ಸಂದೇಶ
ನಟ ನವೀನ್ ಕೃಷ್ಣ ಅವರು ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಸಂಭಾಷಣೆ ಕೂಡ ಬರೆಯುತ್ತಿದ್ದಾರೆ. ಒಂದು ಮುಖ್ಯ ಪಾತ್ರದಲ್ಲಿ ಸಂಗಮೇಶ ಉಪಾಸೆ ನಟಿಸಲಿದ್ದಾರೆ. ಶಿವಕುಮಾರ ಆರಾಧ್ಯ, ತಾರಾ, ರೀಮಾ, ಬೇಬಿ ರಚನಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಪಳಿನಿ ಡಿ ಸೇನಾಪತಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿ ರೇಣುಕುಮಾರ್ ಅವರದ್ದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.