ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಪುನೀತ್ ರಾಜ್ಕುಮಾರ್ ರಸ್ತೆ’ (Puneeth Rajkumar Road) ಅನಾವರಣ ಮಾಡಿದ್ದಾರೆ. ಅಪ್ಪು ಫೋಟೋ ಇರುವ ಬಲೂನ್ ಗುಚ್ಛವನ್ನು ಬಾನಂಗಳಕ್ಕೆ ಹಾರಿಬಿಡುವ ಮೂಲಕ ಇಂದು (ಫೆ.7) ಈ ರಸ್ತೆಯನ್ನು ಅವರು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು, ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳು, ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಈ ವೇಳೆ ಪುನೀತ್ ಬಗ್ಗೆ ಬಸವರಾಜ ಬೊಮ್ಮಾಯಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಅಣ್ಣಾವ್ರ ಕುಟುಂಬದ ಜೊತೆ ನನಗೆ ಹಲವು ವರ್ಷಗಳ ಒಡನಾಟ ಇದೆ. ಎಲ್ಲರನ್ನೂ ನಗುವಿನಿಂದ ಮತ್ತು ಹೃದಯ ಶ್ರೀಮಂತಿಕೆಯಿಂದ ಗೆದ್ದ ವ್ಯಕ್ತಿ ನಮ್ಮ ಅಪ್ಪು. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಹಲವರು ನಮ್ಮನ್ನ ಬಿಟ್ಟು ಹೋಗಿದ್ದಾರೆ’ ಎಂದು ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.
‘ಪುನೀತ್ ರಾಜ್ಕುಮಾರ್ ನಿಧನರಾದಾಗ ಜನಸಾಗರವೇ ಸೇರಿತು. ಹೆಚ್ಚಿನ ಜನರಿಗೆ ಅಂತಿಮ ದರ್ಶನಕ್ಕೆ ನಾವು ವ್ಯವಸ್ಥೆ ಮಾಡಿದೆವು. ಜನರ ಕಣ್ಣೀರು ನೋಡಿದಾಗ ಒಬ್ಬ ವ್ಯಕ್ತಿ ಎಷ್ಟು ಪ್ರೀತಿ ಗಳಿಸಬಹುದು ಅಂತ ಅನಿಸಿತು. ಹಿರಿಯರು-ಕಿರಿಯರು ಎಂಬ ಯಾವುದೇ ಭೇದ ಭಾವ ಇಲ್ಲದೇ ಅವರು ಎಲ್ಲರಿಗೂ ಪ್ರೀತಿ ತೋರಿಸಿದ್ದರು. ರಾಜ್ಯದ ಎಲ್ಲ ಭಾಗದಲ್ಲೂ ಪುನೀತ್ ಅವರಿಗೆ ಅಭಿಮಾನಿಗಳಿದ್ದಾರೆ’ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.
ಇದನ್ನೂ ಓದಿ: ಪುನೀತ್ ರಸ್ತೆ ನಾಮಕರಣ ಕಾರ್ಯಕ್ರಮ ಫ್ಲೆಕ್ಸ್ನಲ್ಲಿ ಅಪ್ಪು ಫೋಟೋನೇ ಇಲ್ಲ; ರಾರಾಜಿಸಿದ ರಾಜಕೀಯ ನಾಯಕರು
‘ಸಾವಿನ ನಂತರವೂ ಅಪ್ಪು ನಮ್ಮ ನಡುವೆ ಬದುಕುತ್ತಿದ್ದಾರೆ. ಹಾಗಾಗಿ ಪ್ರತಿ ದಿನ ನಾವು ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಅವರ ಹೆಸರಿನಲ್ಲಿ ಸ್ಮಾರಕ ಮಾಡಬೇಕು ಎಂಬುದು ಜನರ ಒತ್ತಾಸೆ. ಸಮಾಧಿ ಸ್ಥಳದಲ್ಲಿ ಅವರ ಮತ್ತು ಡಾ. ರಾಜ್ಕುಮಾರ್ ಜೀವನ ಚರಿತ್ರೆ ಹೇಳುವಂತಹ ಅದ್ಭುತವಾದ ಸ್ಮಾರಕವನ್ನು ನಮ್ಮ ಸರ್ಕಾರದ ವತಿಯಿಂದ ನಿರ್ಮಾಣ ಮಾಡುತ್ತೇವೆ. ಅಪ್ಪು ಅವರ ಸ್ಮಾರಕ ಮಾಡುವ ಭಾಗ್ಯ ನನ್ನದು. ಅಲ್ಲದೇ ಅವರಿಗೆ ಕರ್ನಾಟಕ ರತ್ನ ಕೊಡುವಂತಹ ಭಾಗ್ಯ ಕೂಡ ನನ್ನದಾಗಿತ್ತು’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ ಸರ್ಕಾರಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.
Our heartfelt gratitude to the Government of Karnataka. ?#DrPuneethRajkumarRoad #PowerInU pic.twitter.com/uPo9X6hubn— Ashwini Puneeth Rajkumar (@Ashwini_PRK) February 7, 2023
ವೇದಿಕೆಯಲ್ಲಿ ತೇಜಸ್ವಿ ಸೂರ್ಯ, ಆರ್. ಅಶೋಕ್, ರಾಘವೇಂದ್ರ ರಾಜ್ಕುಮಾರ್, ಅಭಿಷೇಕ್ ಅಂಬರೀಷ್ ಮುಂತಾದ ಗಣ್ಯರು ಮಾತನಾಡಿ ಪುನೀತ್ ರಾಜ್ಕುಮಾರ್ಗೆ ನುಡಿ ನಮನ ಸಲ್ಲಿಸಿದ್ದಾರೆ. ಚಂದನವನದ ಸೆಲೆಬ್ರಿಟಿಗಳು ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Tue, 7 February 23