Puneeth Rajkumar: ಪುನೀತ್ ಮೇಲೆ RSS ಕಾರ್ಯಕರ್ತೆ ಗಂಭೀರ ಆರೋಪ; ಮೌನ ಮುರಿಯಬೇಕಿದೆ ರಿಷಬ್ ಶೆಟ್ಟಿ
Jyoti Suparna Chincholi | Rishab Shetty: ‘ಕಾಂತಾರ’ ಚಿತ್ರವನ್ನು ಹೊಗಳುವ ಭರದಲ್ಲಿ ಜ್ಯೋತಿ ಸುಪರ್ಣಾ ಚಿಂಚೋಳಿ ಅವರು ಡಾ. ರಾಜ್ಕುಮಾರ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿಯವರ ಖಾತೆಯನ್ನೂ ಟ್ಯಾಗ್ ಮಾಡಿದ್ದಾರೆ.
‘ಕರ್ನಾಟಕ ರತ್ನ’ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಇಡೀ ಕರುನಾಡು ಕಣ್ಣೀರು ಹಾಕುತ್ತಿದೆ. ದೇಶಾದ್ಯಂತ ಇರುವ ಸೆಲೆಬ್ರಿಟಿಗಳು ಕೂಡ ಅಪ್ಪು ಅವರ ಸಾಧನೆ ಮತ್ತು ವ್ಯಕ್ತಿತ್ವಕ್ಕೆ ತಲೆಬಾಗಿದ್ದಾರೆ. ಆದರೆ ಆರ್ಎಸ್ಎಸ್ ಕಾರ್ಯಕರ್ತೆ ಜ್ಯೋತಿ ಸುಪರ್ಣಾ ಚಿಂಚೋಳಿ (Jyoti Suparna Chincholi) ಅವರು ಪುನೀತ್ ರಾಜ್ಕುಮಾರ್ ಅವರನ್ನು ನೆಪೋಕಿಡ್ ಎಂದು ಕರೆದಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ಡಾ. ರಾಜ್ಕುಮಾರ್ ಕುಟುಂಬದ ಮೇಲೆ ಅವರು ನೆಪೋಟಿಸಂ (Nepotism) ಆರೋಪ ಹೊರಿಸಿದ್ದಾರೆ. ಈ ಕುರಿತು ಮಾಡಿರುವ ಟ್ವೀಟ್ನಲ್ಲಿ ರಿಷಬ್ ಶೆಟ್ಟಿ ಅವರನ್ನೂ ಜ್ಯೋತಿ ಟ್ಯಾಗ್ ಮಾಡಿದ್ದಾರೆ. ಹಾಗಾಗಿ ಈ ಬಗ್ಗೆ ರಿಷಬ್ ಶೆಟ್ಟಿ ಮೌನ ಮುರಿಯಬೇಕಿದೆ. ‘ಕಾಂತಾರ’ ಸಿನಿಮಾವನ್ನು ಹೊಗಳುವ ಭರದಲ್ಲಿ ಜ್ಯೋತಿ ಸುಪರ್ಣಾ ಚಿಂಚೋಳಿ ಅವರು ಅಣ್ಣಾವ್ರು ಕುಟುಂಬದ ಬಗ್ಗೆ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.
ಡಾ. ರಾಜ್ಕುಮಾರ್ ಮಕ್ಕಳನ್ನು ಕರಣ್ ಜೋಹರ್ಗೆ ಹೋಲಿಸಿ ಜ್ಯೋತಿ ಸುಪರ್ಣಾ ಚಿಂಚೋಳಿ ಟ್ವೀಟ್ ಮಾಡಿದ್ದಾರೆ. ಇದು ಈಗ ಚರ್ಚೆಗೆ ಕಾರಣ ಆಗಿದೆ. ಅಣ್ಣಾವ್ರು ಕುಟುಂಬದ ಅಭಿಮಾನಿಗಳು ಜ್ಯೋತಿ ವಿರುದ್ಧ ಗರಂ ಆಗಿದ್ದಾರೆ. ಎಷ್ಟೋ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ ಕೀರ್ತಿ ಡಾ. ರಾಜ್ ಫ್ಯಾಮಿಲಿಗೆ ಸಲ್ಲುತ್ತದೆ. ಪುನೀತ್ ರಾಜ್ಕುಮಾರ್ ಕೂಡ ತಮ್ಮ ‘ಪಿಆರ್ಕೆ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ಹಲವರಿಗೆ ಅವಕಾಶ ನೀಡಿದ್ದರು. ಶಿವರಾಜ್ಕುಮಾರ್ ಅವರು ಇಂದಿಗೂ ಹೊಸಬರ ಬೆನ್ನು ತಟ್ಟುತ್ತಲೇ ಇದ್ದಾರೆ. ಅಂಥವರ ವಿರುದ್ಧವೇ ನೆಪೋಟಿಸಂ ಆರೋಪ ಮಾಡಿದ್ದಾರೆ ಜ್ಯೋತಿ.
ವಿವಾದಾತ್ಮಕ ಟ್ವೀಟ್ನಲ್ಲಿ ಏನಿದೆ?
‘ಬಾಲಿವುಡ್ನಲ್ಲಿ ಕರಣ್ ಜೋಹರ್ ಇರುವ ರೀತಿ, ಕರ್ನಾಟಕದಲ್ಲಿ ಡಾ. ರಾಜ್ಕುಮಾರ್ ಅವರ ನೆಪೋಕಿಡ್ಸ್ ದೇವರಿದ್ದಂತೆ. ಯಾರಾದರೂ ಸ್ಯಾಂಡಲ್ವುಡ್ನಲ್ಲಿ ಉಳಿಯಬೇಕಾದರೆ ಇವರಿಗೆ ಸಲಾಂ ಹೊಡೆಯಬೇಕು. ರಿಷಬ್ ಶೆಟ್ಟಿ ಕೂಡ ಪುನೀತ್ ರಾಜ್ಕುಮಾರ್ ಅವರಿಗೆ ಈ ಪಾತ್ರವನ್ನು ನೀಡಿದ್ದೆ ಅಂತ ಹೇಳಬೇಕಾಯಿತು’ ಎಂದು ಜ್ಯೋತಿ ಟ್ವೀಟ್ ಆರಂಭಿಸಿದ್ದಾರೆ.
‘ಪುನೀತ್ ನಿಧನದಿಂದ ನನಗೆ ಬೇಸರ ಆಗಿದೆ. ಆದರೆ ವಾಸ್ತವ ಏನೆಂದರೆ, ಪ್ರತಿಭಾವಂತ ನಟ/ನಿರ್ದೇಶಕ/ಬರಹಗಾರ ರಿಷಬ್ ಶೆಟ್ಟಿ ಅವರು ಸ್ಯಾಂಡಲ್ವುಡ್ನಲ್ಲಿ ದಶಕಗಳ ಕಾಲ ಕಷ್ಟಪಡಬೇಕಾಯಿತು. ದಶಕದ ಹಿಂದೆಯೇ ಅವರು ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡುತ್ತಿದ್ದರು’ ಎಂದು ಜ್ಯೋತಿ ಟ್ವೀಟ್ ಮಾಡಿದ್ದಾರೆ.
‘ಪ್ರಾಮಾಣಿಕವಾಗಿ ಹೇಳಿ, ಪುನೀತ್ಗೆ ಈ ಪಾತ್ರ ಮಾಡಲು ಸಾಧ್ಯವಾಗುತ್ತಿತ್ತಾ? ದೈವಾರಾಧನೆ ಮತ್ತು ಭೂತಕೋಲದಲ್ಲಿ ರಿಷಬ್ ಅವರ ಮೂಲ ಸಂಸ್ಕೃತಿ ಇರುವುದರಿಂದ ಅವರಿಗೆ ಈ ದೈವಿ ಪರ್ಫಾರ್ಮೆನ್ಸ್ ನೀಡಲು ಸಾಧ್ಯವಾಯ್ತು’ ಎಂದು ಜ್ಯೋತಿ ಪೋಸ್ಟ್ ಮಾಡಿದ್ದಾರೆ. ಅವರ ಈ ಟ್ವಿಟರ್ ಖಾತೆಯನ್ನು ನರೇಂದ್ರ ಮೋದಿ, ಸಿ.ಟಿ. ರವಿ ಮುಂತಾದವರು ಕೂಡ ಫಾಲೋ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.