‘ಒಳ್ಳೇದಾಗ್ಲಿ ಅಂತ ಆಶೀರ್ವಾದ ಮಾಡಿ’: ‘ರಾಜಯೋಗ’ ಬಂದ ಮೇಲೆ ಮನವಿ ಮಾಡಿಕೊಂಡ ಧರ್ಮಣ್ಣ

|

Updated on: Oct 04, 2023 | 5:39 PM

Rajayoga Movie trailer: ಲಿಂಗರಾಜ ಉಚ್ಚಂಗಿದುರ್ಗ ಅವರು ‘ರಾಜಯೋಗ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರೀರಾಮರತ್ನ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈಗ ಟ್ರೇಲರ್​ ಬಿಡುಗಡೆ ಆಗಿದ್ದು, ಸಿನಿಮಾದ ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡಲಾಗಿದೆ. ಈ ಸಿನಿಮಾದಲ್ಲಿ ಧರ್ಮಣ್ಣ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

‘ಒಳ್ಳೇದಾಗ್ಲಿ ಅಂತ ಆಶೀರ್ವಾದ ಮಾಡಿ’: ‘ರಾಜಯೋಗ’ ಬಂದ ಮೇಲೆ ಮನವಿ ಮಾಡಿಕೊಂಡ ಧರ್ಮಣ್ಣ
‘ರಾಜಯೋಗ’ ಸಿನಿಮಾ ತಂಡ
Follow us on

ಕನ್ನಡ ಚಿತ್ರರಂಗದಲ್ಲಿ ನಟ ಧರ್ಮಣ್ಣ (Dharmanna) ಅವರು ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಅವರ ಕಾಮಿಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನ ಬೇರೆ ಹೀರೋಗಳ ಸಿನಿಮಾದಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಧರ್ಮಣ್ಣ ಈಗ ಹೀರೋ ಆಗಿದ್ದಾರೆ. ಅವರಿಗೆ ರಾಜಯೋಗ ಬಂದಿದೆ. ಅಂದರೆ, ‘ರಾಜಯೋಗ’ (Rajayoga) ಸಿನಿಮಾದಲ್ಲಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇತ್ತೀಚಿಗೆ ಈ ಸಿನಿಮಾದ ಟ್ರೇಲರ್​ (Rajayoga Trailer) ಬಿಡುಗಡೆ ಮಾಡಲಾಗಿದೆ. ಟ್ರೇಲರ್ ಕೊನೆಯಲ್ಲಿ ‘ಒಳ್ಳೇದಾಗ್ಲಿ ಅಂತ ಆಶೀರ್ವಾದ ಮಾಡಿ’ ಎಂದು ಧರ್ಮಣ್ಣ ಮನವಿ ಮಾಡಿಕೊಳ್ಳುವ ದೃಶ್ಯ ಇದೆ. ಮೊದಲ ಬಾರಿ ಮುಖ್ಯ ನಿಭಾಯಿಸಿರುವ ಅವರು ಪ್ರೇಕ್ಷಕ ಪ್ರಭುಗಳಲ್ಲಿ ಈ ರೀತಿ ಮನವಿ ಮಾಡಿಕೊಂಡಂತಿದೆ.

ಲಿಂಗರಾಜ ಉಚ್ಚಂಗಿದುರ್ಗ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ‘ರಾಜಯೋಗ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರೀರಾಮರತ್ನ ಪ್ರೊಡಕ್ಷನ್ಸ್’ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಲಿಂಗರಾಜು ಕೆ.ಎನ್., ಪ್ರಭು ಚಿಕ್ಕನಾಯ್ಕನಹಳ್ಳಿ, ಅರ್ಜುನ್ ಅಣತಿ ಹಾಗೂ ಧರ್ಮಣ್ಣ ಅವರ ಸಹೋದರ ಹೊನ್ನಪ್ಪ ಕಡೂರು ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಧರ್ಮಣ್ಣ ಅವರಿಗೆ ಜೋಡಿಯಾಗಿ ನಿರೀಕ್ಷಾ ರಾವ್​ ನಟಿಸಿದ್ದಾರೆ. ಸಂಪೂರ್ಣ ಗ್ರಾಮೀಣ ಪರಿಸರದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ: ಧರ್ಮಣ್ಣನಿಗೆ ಎರಡನೇ ಮದುವೆ ಆಯ್ತಾ? ಅವರೇ ಕೊಟ್ಟಿದ್ದಾರೆ ಉತ್ತರ

ಡೈರೆಕ್ಟರ್​ ಲಿಂಗರಾಜು ಅವರಿಗೆ ಇದು ಮೊದಲ ಸಿನಿಮಾ. ‘ನಾನು ಕೂಡ ಸಹ ಗ್ರಾಮೀಣ ಭಾಗದಿಂದ ಬಂದವನು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಖಂಡಿತವಾಗಿಯೂ ರಾಜಯೋಗ ಬರುತ್ತದೆ ಎಂಬುದು ಈ ಸಿನಿಮಾದ ಕಾನ್ಸೆಪ್ಟ್. ‘ರಾಮ ರಾಮ ರೇ’ ಸಿನಿಮಾದಲ್ಲಿ ಧರ್ಮಣ್ಣ ಅವರ ನಟನೆಯನ್ನು ನೋಡಿ ನಾವು ಈ ಸಿನಿಮಾಗೆ ಆಯ್ಕೆ ಮಾಡಿದೆವು. ಜೋತಿಷ್ಯ ಸುಳ್ಳಲ್ಲವಾದರೂ ಅದನ್ನು ದುರುಪಯೋಗ ಮಾಡಿಕೊಳ್ಳುವ ಕೆಲವರು ಇದ್ದಾರೆ. ಈ ಸಿನಿಮಾದಲ್ಲಿ ಗಂಭೀರವಾದ ವಿಷಯವನ್ನು ಹಾಸ್ಯದ ಮೂಲಕ ಹೇಳಲಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.

‘ರಾಜಯೋಗ’ ಸಿನಿಮಾದ ಟ್ರೇಲರ್​:

ಧರ್ಮಣ್ಣ ಹೇಳುವ ಪ್ರಕಾರ, ಈ ಸಿನಿಮಾ ನೋಡಿದರೆ ರೆಟ್ರೋ ಕಾಲದ ಅನಂತ್​ ನಾಗ್, ಶಶಿಕುಮಾರ್ ಅವರ ಸಿನಿಮಾಗಳು ಖಂಡಿತಾ ನೆನಪಾಗುತ್ತವೆ. ‘ಕಥೆ ಮತ್ತು ನಿರ್ದೇಶನವೇ ಈ ಸಿನಿಮಾದ ಹೀರೋಗಳು. ನಾನು ಇಲ್ಲಿ ಒಂದು ಮುಖ್ಯ ಪಾತ್ರ ಮಾಡಿದ್ದೇನೆ ಅಷ್ಟೇ. ಕಾಮಿಡಿ ಮತ್ತು ಎಮೋಷನ್ ಈ ಕಥೆಯಲ್ಲಿದೆ. ನಾನು ಈ ರೀತಿಯ ಪಾತ್ರವನ್ನು ಹಿಂದೆಂದೂ ಮಾಡಿರಲಿಲ್ಲ. ಸಂಬಂಧಗಳ ಮೌಲ್ಯವನ್ನು ಹಾಸ್ಯದ ಶೈಲಿಯಲ್ಲಿ ಹೇಳಲಿದ್ದೇವೆ’ ಎಂಬುದು ಧರ್ಮಣ್ಣ ಅವರ ಮಾತುಗಳು.

ಇದನ್ನೂ ಓದಿ: ಬರ್ತ್​ಡೇ ದಿನ ಧರ್ಮಣ್ಣನಿಗೆ ಸರ್​ಪ್ರೈಸ್; ಭಾವುಕರಾದ ಹಾಸ್ಯ ನಟ

ಅಕ್ಷಯ್ ರಿಶಭ್ ಅವರು ‘ರಾಜಯೋಗ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿಷ್ಣುಪ್ರಸಾದ್ ಅವರು ಛಾಯಾಗ್ರಹಣ ಈ ಚಿತ್ರಕ್ಕಿದೆ. ಬಿ.ಎಸ್. ಕೆಂಪರಾಜು ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವುತಾರ್, ಮಹಾಂತೇಶ ಹಿರೇಮಠ್, ಶ್ರೀನಿವಾಸಗೌಡ, ಉಷಾ ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಶೂಟಿಂಗ್​ ಮುಗಿದಿದೆ. ಸದ್ಯಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯ ನಿರತವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.