‘ಕಟ್ಲೆ’ ಸಿನಿಮಾ ಮೂಲಕ ಹೀರೋ ಆದ ಕೆಂಪೇಗೌಡ; ಟ್ರೇಲರ್ ರಿಲೀಸ್

75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಕೆಂಪೇಗೌಡ ಅವರು ಈಗ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಅವರು ನಟಿಸಿರುವ ‘ಕಟ್ಲೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 6ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಟೆನ್ನಿಸ್‌ ಕೃಷ್ಣ, ತಬಲ ನಾಣಿ, ಬಿರಾದಾರ್ ಮುಂತಾದ ಹಿರಿಯ ಕಲಾವಿರದರು ಕೂಡ ನಟಿಸಿದ್ದಾರೆ.

‘ಕಟ್ಲೆ’ ಸಿನಿಮಾ ಮೂಲಕ ಹೀರೋ ಆದ ಕೆಂಪೇಗೌಡ; ಟ್ರೇಲರ್ ರಿಲೀಸ್
Kempegowda, Amrutha

Updated on: Jan 28, 2026 | 7:50 PM

ಮೊದಲು ಹಾಸ್ಯ ನಟರಾಗಿ, ನಂತರ ಹೀರೋ ಆಗಿ ಯಶಸ್ಸು ಕಂಡವರು ಹಲವರು ಇದ್ದಾರೆ. ಈಗ ಕಾಮಿಡಿ ಕಲಾವಿದ ಕೆಂಪೇಗೌಡ (Kempegowda) ಕೂಡ ಹೀರೋ ಆಗಿದ್ದಾರೆ. ಹೌದು, ಅವರು ಹೀರೋ ನಟಿಸಿರುವ ಸಿನಿಮಾ ‘ಕಟ್ಲೆ’. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಸಿ.ಎನ್. ಅಶ್ವತ್ಥ್ ನಾರಾಯಣ, ರವಿಕುಮಾರ್‌ ಗೌಡ, ಪ್ರಥಮ್, ಕಾಕ್ರೋಚ್ ಸುಧಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘ಕಟ್ಲೆ’ (Katle) ಸಿನಿಮಾಗೆ ಶ್ರೀವಿಧಾ ಅಭಿನಂದನ್ ಅವರು ಕಥೆ, ಚಿತ್ರಕತೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಹೊಸಕೋಟೆ ಮೂಲದ ಭರತ್‌ ಗೌಡ ಅವರು ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಸನ್ಮಿತಾ ಹಾಗೂ ಅಮೃತಾ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಹರ್ಷಿಕಾ ಪೂರ್ಣಚ್ಚ ಕಾಣಿಸಿಕೊಂಡಿದ್ದಾರೆ. ಟೆನ್ನಿಸ್‌ ಕೃಷ್ಣ, ತಬಲ ನಾಣಿ, ಹರೀಶ್‌ ರಾಜ್, ಪವನ್‌ ಕುಮಾರ್, ಗಣೇಶ್‌ ರಾವ್ ಕೇಸರಕರ್, ಬಿರಾದಾರ್, ಎಂ.ಎಸ್. ಉಮೇಶ್, ಕರಿಸುಬ್ಬು, ಯತಿರಾಜ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಬೆಂಗಳೂರು, ಶಿರಸಿ ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ವಿ. ನಾಗೇಂದ್ರ ಪ್ರಸಾದ್, ಚೇತನ್‌ ಕುಮಾರ್ ಮತ್ತು ಕಿನ್ನಾಳ್‌ ರಾಜ್ ಅವರು ಈ ಸಿನಿಮಾದ ಹಾಡುಗಳನ್ನು ಬರೆದಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರು ‘ಕಟ್ಲೆ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅನಿರುದ್ಧ್ ಅವರ ಛಾಯಾಗ್ರಹಣ, ಚಲುವಮೂರ್ತಿ ಅವರ ಸಂಕಲನ, ಅಲ್ಟೆಮೇಟ್‌ ಶಿವು ಅವರ ಸಾಹಸ ನಿರ್ದೇಶನ, ಭಜರಂಗಿ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

‘ಕಟ್ಲೆ’ ಸಿನಿಮಾ ಟ್ರೇಲರ್:

ಟ್ರೇಲರ್ ಬಿಡುಗಡೆ ವೇಳೆ ನಿರ್ದೇಶಕ ಶ್ರೀವಿಧಾ ಅಭಿನಂದನ್ ಅವರು ಮಾತನಾಡಿದರು. ‘ಕಟ್ಲೆಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅದರದೇ ಆದ ಅರ್ಥ ಇರುತ್ತದೆ. ಪ್ರತಿಯೊಂದು ಜೀವ ರಾಶಿಗೆ ಕಾಲ ಅನ್ನೋದು ಇರುತ್ತೆ. ಅದು ಸರಿಯಾಗಿ ಆಗಲಿಲ್ಲ ಅಂದರೆ ಕಾಲಚಕ್ರದಲ್ಲಿ ಸ್ಥಗಿತಗೊಳ್ಳುತ್ತದೆ. ಇದರ ಆಧಾರದ ಮೇಲೆ ಚಿತ್ರ ಸಾಗುತ್ತದೆ. ಕಟ್ಲೆ ಅಳಿಸುತ್ತೆ, ನಗಿಸುತ್ತೆ, ಕಾಡುತ್ತೆ, ಕಾಡಿಸುತ್ತೆ. ಕ್ಲೈಮಾಕ್ಸ್‌ನಲ್ಲಿ ಸಂದೇಶ ಇದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ

ನಟ ಕೆಂಪೇಗೌಡ ಅವರು ಮಾತನಾಡಿ, ‘ಕಳೆದ 18 ವರ್ಷದ ಸಿನಿಪಯಣದಲ್ಲಿ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಈಗ ಬಡ್ತಿ ಎನ್ನುವಂತೆ ಹೀರೋ ಆಗಿ ಅಭಿನಯಿಸಿದ್ದೇನೆ. ನಿರ್ಮಾಪಕರು ಕಾಮಿಡಿ ಕಲಾವಿದನಿಗೆ ಹೀರೋ ಪಟ್ಟ ಕಟ್ಟಿ, ದೊಡ್ಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಹಾರರ್, ಥ್ರಿಲ್ಲರ್, ಸೈಕಲಾಜಿಕಲ್ ಎಲ್ಲವನ್ನೂ ಒಳಗೊಂಡಿರುವ ಸಿನಿಮಾ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.