
ನಟ ಧ್ರುವ ಸರ್ಜಾ (Dhruva Sarja) ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಸರ್ಜಾ ವಿರುದ್ಧ ಮಾತ್ರವೇ ಅಲ್ಲದೆ ಧ್ರುವ ಸರ್ಜಾ ಮ್ಯಾನೇಜರ್, ಅವರ ಕಾರು ಚಾಲಕ ಹಾಗೂ ಅಭಿಮಾನಿಗಳ ವಿರುದ್ಧವೂ ದೂರು ದಾಖಲಾಗಿದೆ. ಧ್ರುವ ಸರ್ಜಾ ವಿರುದ್ಧ ಅವರ ನೆರೆಮನೆಯವರೇ ದೂರು ದಾಖಲು ಮಾಡಿದ್ದಾರೆ. ಅಲ್ಲದೆ ಧ್ರುವ ಸರ್ಜಾ ಹಾಗೂ ಅವರ ಮ್ಯಾನೇಜರ್, ಚಾಲಕನ ಮೇಲೆ ಎಫ್ಐಆರ್ ದಾಖಲು ಮಾಡುವಂತೆ ದೂರುದಾರರು ಒತ್ತಾಯಿಸಿದ್ದಾರೆ.
ಮನೋಜ್ ಎಂಬುವರು ಧ್ರುವ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. ಮನೋಜ್ ಅವರು ಧ್ರುವ ಸರ್ಜಾ ಅವರ ನೆರೆ ಮನೆಯವರೇ ಆಗಿದ್ದು, ಧ್ರುವ ಸರ್ಜಾ ಅವರ ಅಭಿಮಾನಿಗಳ ವರ್ತನೆಯಿಂದ ಬೇಸತ್ತು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಧ್ರುವ ಸರ್ಜಾ ಅವರ ಮನೆಗೆ ಬರುವ ಅಭಿಮಾನಿಗಳು ರಸ್ತೆಯಲ್ಲಿ, ಮನೆಯ ಮುಂದೆ ಅಡ್ಡಾದಿಡ್ಡಿಯಾಗಿ ಗಾಡಿಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಕೂಗಾಡುತ್ತಾರೆ, ಕಿರುಚಾಡುತ್ತಾರೆ ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಿದೆ ಎಂದು ಮನೋಜ್ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಮಹಾಲಯ ಅಮಾವಾಸ್ಯೆ: ನಟ ಧ್ರುವ ಸರ್ಜಾ ಅವರಿಂದ ವಿಶೇಷ ಪೂಜೆ
ಅಭಿಮಾನಿಗಳು ಮನೆಯ ಮುಂದೆ ಸಿಗರೇಟು ಸೇದುತ್ತಾರೆ, ಗುಟ್ಕಾ ಉಗಿಯುತ್ತಾರೆ, ಮನೆಯ ಗೋಡೆಗಳ ಮೇಲೆಯೂ ಉಗಿದಿದ್ದಾರೆ, ಗಲಾಟೆ ಮಾಡುತ್ತಾರೆ. ಈ ಬಗ್ಗೆ ನಟನ ಮ್ಯಾನೇಜರ್, ಚಾಲಕನ ಬಳಿ ಹೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಧ್ರುವ ಸರ್ಜಾ ಅವರ ಅಭಿಮಾನಿಗಳ ಉಪಟಳದಿಂದ ಸಮಸ್ಯೆ ಆಗಿದೆ ಎಂದು ಮನೋಜ್ ಹೇಳಿದ್ದಾರೆ.
ಮನೋಜ್ ನೀಡಿರುವ ದೂರು ಆಧರಿಸಿ ಪೊಲೀಸರು ಎನ್ಸಿಆರ್ ದಾಖಲಿಸಿದ್ದಾರೆ. ಆದರೆ ಧ್ರುವ ಸರ್ಜಾ, ಅವರ ಮ್ಯಾನೇಜರ್ ಮತ್ತು ಚಾಲಕರ ಮೇಲೆ ಎಫ್ಐಆರ್ ದಾಖಲು ಮಾಡಬೇಕು ಎಂದು ದೂರುದಾರರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದರೆ ಎಫ್ಐಆರ್ ದಾಖಲು ಮಾಡಲಾಗಿಲ್ಲ. ಬದಲಿಗೆ ಎನ್ಸಿಆರ್ ಅನ್ನಷ್ಟೆ ದಾಖಲು ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ