ನಡೆಯದ ಶಿವರಾಜ್ ಕುಮಾರ್ ಮ್ಯಾಜಿಕ್, ಗೀತಾ ಶಿವರಾಜ್ ಕುಮಾರ್​ಗೆ ಸೋಲು

|

Updated on: Jun 04, 2024 | 3:56 PM

ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್ ಅವರು ಸೋಲನುಭವಿಸಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಪತ್ನಿಯ ಪರವಾಗಿ ಚುರುಕಿನ ಪ್ರಚಾರ ನಡೆಸಿದ್ದರು, ಆದರೆ ಶಿವಣ್ಣನ ಮ್ಯಾಜಿಕ್ ಕೆಲಸ ಮಾಡಿಲ್ಲ.

ನಡೆಯದ ಶಿವರಾಜ್ ಕುಮಾರ್ ಮ್ಯಾಜಿಕ್, ಗೀತಾ ಶಿವರಾಜ್ ಕುಮಾರ್​ಗೆ ಸೋಲು
Follow us on

ಶಿವರಾಜ್ ಕುಮಾರ್ (Shiva Rajkumar) ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್​ ಕುಮಾರ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲಾಗಿದೆ. ಅವರು ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ನಿಚ್ಚಳ ಗೆಲುವು ಸಾಧಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರಿಗೆ ಇದು ಎರಡನೇ ಲೋಕಸಭೆ ಸೋಲು. ಈ ಹಿಂದೆ ಅವರು ಜೆಡಿಎಸ್ ನಿಂದ ಇದೇ ಕ್ಷೇತ್ರದಲ್ಲಿ, ಬಿಎಸ್ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು.

ಗೀತಾ ಶಿವರಾಜ್ ಕುಮಾರ್ ಪರವಾಗಿ ಶಿವರಾಜ್ ಕುಮಾರ್ ಅವರು ಭರ್ಜರಿಯಾಗಿ ಪ್ರಚಾರ ಮಾಡಿದ್ದರು. ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಶಿವಮೊಗ್ಗದಲ್ಲಿಯೇ ಮೊಕ್ಕಾಂ ಹೂಡಿದ್ದ ಶಿವರಾಜ್ ಕುಮಾರ್ ಪತ್ನಿಯ ಪರವಾಗಿ ಎಡಬಿಡದೆ ಪ್ರಚಾರ ಮಾಡಿದ್ದರು. ಹೋದಲ್ಲೆಲ್ಲ, ಹಾಡು ಹಾಡಿ, ಡ್ಯಾನ್ಸ್ ಮಾಡಿ, ಡೈಲಾಗ್​ಗಳನ್ನು ಹೇಳಿ ಜನರನ್ನು ರಂಜಿಸಿದ್ದರು. ಅತ್ಯಂತ ಚುರುಕಾಗಿ ಶಿವಣ್ಣ ಪತ್ನಿಯ ಪರವಾಗಿ ಪ್ರಚಾರ ಮಾಡಿದ್ದರು. ಆದರೆ ಎಲ್ಲವೂ ವ್ಯರ್ಥವಾಗಿದೆ.

ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಿಯೇ ತೀರಬೇಕೆಂದು ಅವರ ಸಹೋದರ ಸಚಿವ ಮಧು ಬಂಗಾರಪ್ಪ ಸಹ ಅಬ್ಬರದ ಪ್ರಚಾರ ಮಾಡಿದ್ದರು. ಆದರೆ ಗೀತಾ ಶಿವರಾಜ್ ಕುಮಾರ್ ಸೋತಿದ್ದು, ಬಿವೈ ರಾಘವೇಂದ್ರ ಸತತ ನಾಲ್ಕನೇ ಬಾರಿ ಗೆದ್ದು ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಹಿಡಿತ, ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಸಂಘಟನೆ ಹಾಗೂ ಬಿವೈ ರಾಘವೇಂದ್ರ ಅವರ ಜನ ಸಂಪರ್ಕದಿಂದಾಗಿ ಜನ ಮತ್ತೆ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದಾರೆ.

ಇದನ್ನೂ ಓದಿ:‘ಒಳ್ಳೆಯ ಅಂತರದಲ್ಲಿ ಗೀತಾ ಶಿವರಾಜ್​ಕುಮಾರ್​ ಗೆಲ್ಲುತ್ತಾರೆ’: ಭವಿಷ್ಯ ನುಡಿದ ಎಸ್​. ನಾರಾಯಣ್​

ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಇದರಿಂದಾಗಿ ಗೀತಾ ಶಿವರಾಜ್ ಕುಮಾರ್ ಗೆಲುವಿಗೆ ಸಹಕಾರವಾಗಲಿದೆ ಎನ್ನಲಾಗಿತ್ತು. ಈಶ್ವರಪ್ಪ ಅವರು ಬಿಜೆಪಿ ಮತಗಳನ್ನು ವಿಭಜಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಿಂದ ರಾಘವೇಂದ್ರ ಗೆದ್ದಿದ್ದಾರೆ.

ಶಿವರಾಜ್ ಕುಮಾರ್ ಅವರು ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಶಿವಣ್ಣ ಪ್ರಚಾರ ಮಾಡಿದ್ದ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಶಿವಣ್ಣ ಕಾಂಗ್ರೆಸ್​ ಪರ ಸ್ಟಾರ್ ಪ್ರಚಾರಕ ಆಗಿದ್ದ ಜೊತೆಗೆ ಲಕ್ಕಿ ಪ್ರಚಾರಕ ಸಹ ಆಗಿದ್ದರು. ಆದರೆ ಈಗ ಗೀತಾ ಶಿವರಾಜ್ ಕುಮಾರ್ ಅವರೇ ಸೋಲನುಭವಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Tue, 4 June 24