ನಟ ಕಿಚ್ಚ ಸುದೀಪ್ರ (Sudeep) ಕ್ರಿಕೆಟ್ ಪ್ರೀತಿಯ ಬಗ್ಗೆ ಪೀಠಿಕೆಯ ಅಗತ್ಯವಿಲ್ಲ. ಕ್ರಿಕೆಟ್ ಹಾಗೂ ಸಿನಿಮಾ ಪ್ರಿಯರಿಬ್ಬರಿಗೂ ಸುದೀಪ್ರ ಕ್ರಿಕೆಟ್ ಪ್ರೇಮದ ಬಗ್ಗೆ ತಿಳಿದೇ ಇದೆ. ಕ್ರಿಕೆಟ್ ಅನ್ನು ಅತಿಯಾಗಿ ಪ್ರೀತಿಸುವ, ಜೀವಿಸುವ ಸುದೀಪ್ಗೆ ಸಾಕಷ್ಟು ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರಿಕೆಟರ ಸ್ನೇಹ ದೊರೆತಿದೆ. ಸುದೀಪ್ರ ಆತ್ಮೀಯ ಗೆಳೆಯರ ಪಟ್ಟಿಯಲ್ಲಿ ಕ್ರಿಕೆಟಿಗರೂ ಇದ್ದಾರೆ. ಹಲವು ಕ್ರಿಕೆಟಿಗರು ಸುದೀಪ್ ಮನೆಗೆ ಆಗಮಿಸಿ ಆಥಿತ್ಯ ಪಡೆದಿದ್ದಾರೆ. ಇದೀಗ ಕ್ರಿಕೆಟಿಗ ಯಜುವೇಂಧರ್ ಚಾಹಲ್ (Yuzvendra Chahal), ಪೃಥ್ವಿ ಶಾ (Prithvi Shaw) ಹಾಗೂ ಸಂದೀಪ್ ಶರ್ಮಾ, ಸುದೀಪ್ ಮನೆಗೆ ಆಗಮಿಸಿ ಆಥಿತ್ಯ ಸ್ವೀಕರಿಸಿದ್ದಾರೆ.
ಚಾಹಲ್, ಪೃಥ್ವಿ ಶಾ, ಸಂದೀಪ್ ಶರ್ಮಾ ಹಾಗೂ ಇನ್ನೂ ಕೆಲವರು ಸುದೀಪ್ ಮನೆಗೆ ಆಗಮಿಸಿದ್ದು, ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಚಾಹಲ್ ಹಾಗೂ ಶಾ ಅವರು ಒಳಗೊಂಡಂತೆ ಇನ್ನಷ್ಟು ಅತಿಥಿಗಳಿರುವ ಚಿತ್ರವನ್ನು ನಟ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂದು (ಮಾರ್ಚ್ 08) ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅತಿಥಿಗಳೊಟ್ಟಿಗೆ ಸುದೀಪ್ರ ಪುತ್ರಿಯೂ ಇದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಸಿಸಿಎಲ್ನ ಕರ್ನಾಟಕ ಬುಲ್ಡೋಜರ್ ಹಾಗೂ ಚೆನ್ನೈ ರೈನೋಸ್ ನಡುವಿನ ಪಂದ್ಯ ವೀಕ್ಷಿಸಲು ನಟ ಚಾಹೆಲ್ ಆಗಮಿಸಿದ್ದರು. ಆಗಲೂ ಅವರು ನಟ ಸುದೀಪ್ರ ಪತ್ನಿ ಸೇರಿದಂತೆ ಹಲವರನ್ನು ಮಾತನಾಡಿಸಿದ್ದರು. ಈಗ ಸುದೀಪ್ ಮನೆಗೆ ಬಂದು ಆತಿಥ್ಯ ಸ್ವೀಕರಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಸುದೀಪ್ ಮನೆಗೆ ಕ್ರಿಕೆಟಿಗ ಶಿಖರ್ ಧವನ್ ಆಗಮಿಸಿದ್ದರು. ಅದಕ್ಕೂ ಮುನ್ನ ಯುವ ಐಪಿಎಲ್ ಆಟಗಾರ ಮಹೇಶ್ ಸಹ ಸುದೀಪ್ ಅವರನ್ನು ಭೇಟಿಯಾಗಿದ್ದರು. ಕ್ರಿಸ್ ಗೇಲ್, ರವಿ ಶಾಸ್ತ್ರಿ, ಸುರೇಶ್ ರೈನಾ, ಕಪಿಲ್ ದೇವ್, ತಿಲಕರತ್ನೆ ದಿಲ್ಶಾನ್ ಭಾರತದ ಹಲವಾರು ಕ್ರಿಕೆಟಿಗರು ಸುದೀಪ್ರ ಗೆಳೆಯರಾಗಿರುವ ಜೊತೆಗೆ ಅವರ ಮನೆಯಲ್ಲಿ ಆತಿಥ್ಯವನ್ನೂ ಸ್ವೀಕರಿಸಿದ್ದಾರೆ. ಈಗ ಪೃಥ್ವಿ ಶಾ ಹಾಗೂ ಚಾಹೆಲ್ ಸರದಿ.
ವಿಶ್ವದ ಹಲವು ಅತ್ಯುತ್ತಮ ಕ್ರಿಕೆಟಿಗರ ಬ್ಯಾಟುಗಳ ಕಲೆಕ್ಷನ್ ಸಹ ನಟ ಸುದೀಪ್ ಅವರ ಬಳಿ ಇದೆ. ವಿರಾಟ್ ಕೊಹ್ಲಿ, ಧೋನಿ, ಜಾಸ್ ಬಟ್ಲರ್, ಕಪಿಲ್ ದೇವ್ ಇನ್ನೂ ಹಲವು ಖ್ಯಾತನಾಮರು ತಮ್ಮ ಬ್ಯಾಟ್ಗಳನ್ನು ನಟ ಸುದೀಪ್ಗೆ ಉಡುಗೊರೆಯಾಗಿ ನೀಡಿದ್ದಾರೆ. ಕ್ರಿಕೆಟ್ ಕಲೆಕ್ಷನ್ಗಳಿಗಾಗಿಯೇ ಸುದೀಪ್ ವಿಶೇಷ ಸ್ಥಳವನ್ನು ತಮ್ಮ ಮನೆಯಲ್ಲಿ ಮಾಡಿಸಿದ್ದಾರೆ.
ಸುದೀಪ್ ಪ್ರಸ್ತುತ ಸಿಸಿಎಲ್ ಆಡುತ್ತಿದ್ದು ಈ ವರೆಗೆ ಕರ್ನಾಟಕ ಬುಲ್ಡೋಜರ್ಸ್ ಆಡಿರುವ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡಿದೆ. ಈ ವಾರಾಂತ್ಯಕ್ಕೆ ಮತ್ತಷ್ಟು ಪಂದ್ಯಗಳನ್ನು ಆಡಲಿದೆ.
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಅದರ ಬೆನ್ನಲ್ಲೆ ತಮಿಳಿನ ಸ್ಟಾರ್ ನಿರ್ದೇಶಕರೊಬ್ಬರ ಸಿನಿಮಾವನ್ನು ಸುದೀಪ್ ಒಪ್ಪಿಕೊಂಡಿದ್ದಾರೆ. ಅನುಪ್ ಭಂಡಾರಿ ನಿರ್ದೇಶನದ ಹೊಸ ಸಿನಿಮಾದಲ್ಲಿಯೂ ಸುದೀಪ್ ನಟಿಸಲಿದ್ದಾರೆ.