Kabzaa Movie Set: ‘ಕಬ್ಜ’ ಸೆಟ್ ನಿರ್ಮಾಣಕ್ಕೆ ಕೋಟಿ-ಕೋಟಿ ಸುರಿದ ಚಂದ್ರು ಆಂಡ್ ಗ್ಯಾಂಗ್
ಆರ್.ಚಂದ್ರು-ಉಪೇಂದ್ರ ಕಾಂಬಿನೇಶನ್ನ ಕಬ್ಜ ಸಿನಿಮಾಕ್ಕೆ ಬರೋಬ್ಬರಿ 45 ಸೆಟ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಕೋಟಿ-ಕೋಟಿ ಹಣವನ್ನು ಕೇವಲ ಸೆಟ್ ನಿರ್ಮಾಣಕ್ಕೆ ಖರ್ಚು ಮಾಡಿದೆ ಚಿತ್ರತಂಡ!
‘ಕಬ್ಜ‘ (Kabzaa) ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಈಗಾಗಲೇ ಸಖತ್ ಸದ್ದು ಮಾಡಿದೆ. ಸಿನಿಮಾದ ಪ್ರಚಾರ ಭರ್ಜರಿಯಾಗಿ ಸಾಗುತ್ತಿದ್ದು ಭಾರತದ ಬಹುನಿರೀಕ್ಷಿತ ಸಿನಿಮಾ ಸಾಲಿಗೆ ಕಬ್ಜ ಸೇರಿಕೊಂಡಿದೆ. ಸ್ವಾತಂತ್ರ್ಯಪೂರ್ವದ ಕತೆಯನ್ನು ‘ಕಬ್ಜ’ ಸಿನಿಮಾಕ್ಕಾಗಿ ಆರ್ ಚಂದ್ರು (R Chandru) ಹೆಣೆದಿದ್ದು, ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಸೆಟ್ಗಳಲ್ಲಿಯೇ ಮಾಡಿ ಮುಗಿಸಿದ್ದಾರೆ. ಕೆಲವು ಅದ್ಧೂರಿ ಸೆಟ್ಗಳನ್ನು ಈ ಸಿನಿಮಾಕ್ಕಾಗಿ ಚಿತ್ರತಂಡ ನಿರ್ಮಿಸಿದ್ದು ಸೆಟ್ ನಿರ್ಮಾಣಕ್ಕೆ ಹಲವು ಕೋಟಿಗಳನ್ನು ಖರ್ಚು ಮಾಡಲಾಗಿದೆ.
ಸ್ವಾತಂತ್ರ್ಯಪೂರ್ವದ ಕತೆಯಾದ್ದರಿಂದ ಆಗಿನ ಕಾಲದ ಫೀಲ್ ನೀಡಲು ಹಳೆಯ ಜಮಾನಾ ಹೋಲುವ ಸೆಟ್ಗಳನ್ನು ಚಿತ್ರತಂಡ ನಿರ್ಮಿಸಿದೆ. ಚಿತ್ರತಂಡ ನೀಡಿರುವ ಮಾಹಿತಿಯಂತೆ ಕಬ್ಜ ಸಿನಿಮಾಕ್ಕಾಗಿ ಬರೋಬ್ಬರಿ 45 ಸೆಟ್ಗಳನ್ನು ನಿರ್ಮಾಣ ಮಾಡಲಾಗಿತ್ತಂತೆ!
ಸಿನಿಮಾಗಳಿಗೆ ಒಂದು ದೊಡ್ಡ ಸೆಟ್ ಹಾಕುವುದು ಮಾಮೂಲು ಆದರೆ ‘ಕಬ್ಜ’ ಸಿನಿಮಾಕ್ಕಾಗಿ ಬರೋಬ್ಬರಿ 30 ದೊಡ್ಡ ಸೆಟ್ಗಳು ಹಾಗೂ 15 ಸಣ್ಣ ಸೆಟ್ಗಳನ್ನು ನಿರ್ಮಿಸಿ ಅದರಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾರುಕಟ್ಟೆಯ ಸೆಟ್, ಅರಮನೆಯ ಸೆಟ್, ಹಳೆಯ ಕಾಲದ ಬೀದಿಯ ಸೆಟ್, ಮಾಂಸದ ಮಾರುಕಟ್ಟೆಯ ಸೆಟ್ ಹೀಗೆ ಹಲವು ಸೆಟ್ಗಳನ್ನು ಸಿನಿಮಾಕ್ಕಾಗಿ ಹಾಕಲಾಗಿತ್ತು. ಸೆಟ್ ಅಥವಾ ಚಿತ್ರೀಕರಣದ ದೃಶ್ಯಗಳು ಲೀಕ್ ಆಗದಂತೆ ತಡೆಯಲು ಸೆಟ್ನಲ್ಲಿ ಮೊಬೈಲ್ ಬ್ಯಾನ್ ಮಾಡಿತ್ತು ಚಿತ್ರತಂಡ.
ಸಿನಿಮಾದ ಕತೆಯು 1945 ರಿಂದ 1985 ರ ವರೆಗೂ ನಡೆಯುವ ಕಾರಣ ಸ್ವಾತಂತ್ರಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಭಾರತವನ್ನು ತೋರಿಸುವ ಭಿನ್ನ-ಭಿನ್ನ ಸೆಟ್ಗಳನ್ನು ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ತಂಡ ನಿರ್ಮಿಸಿತ್ತು.
ಬೆಂಗಳೂರು ಹಾಗೂ ಮಂಗಳೂರಲ್ಲಿ ಸಿನಿಮಾಕ್ಕಾಗಿ ಸೆಟ್ಗಳನ್ನು ಹಾಕಲಾಗಿದ್ದು, ಕೇವಲ ಸೆಟ್ ನಿರ್ಮಾಣಕ್ಕೆ ಸುಮಾರು 20 ಕೋಟಿ ಹಣವನ್ನು ಚಿತ್ರತಂಡ ಖರ್ಚು ಮಾಡಿದೆ. ಕಲಾ ನಿರ್ದೇಶಕ ಶಿವಕುಮಾರ್ ಕೇಳಿದ್ದೆಲ್ಲವನ್ನೂ ನಿರ್ಮಾಪಕರು ನೀಡಿದ್ದು, ಅದಕ್ಕೆ ತಕ್ಕಂತೆ ಅದ್ಧೂರಿ ಸೆಟ್ಗಳನ್ನು ಶಿವಕುಮಾರ್ ಹಾಗೂ ತಂಡ ನಿರ್ಮಿಸಿ ಕೊಟ್ಟಿದ್ದಾರೆ.
ಸೆಟ್ಗಳು ಹೀಗೆ ಇರಬೇಕೆಂದು ನಿರ್ದೇಶಕ ಚಂದ್ರು ನೀಡಿದ ನೀಲ ನಕ್ಷೆ ಆಧರಿಸಿ ಶಿವಕುಮಾರ್ ಹಾಗೂ ತಂಡ ಸೆಟ್ಗಳನ್ನು ಸಿದ್ಧಪಡಿಸಿದೆ. ಸಿನಿಮಾದಲ್ಲಿ ಅದ್ಧೂರಿ ಸೆಟ್ಗಳ ಜೊತೆಗೆ ವಿಎಫ್ಎಕ್ಸ್ ಅನ್ನು ಸಹ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಸಿನಿಮಾದ ಟೀಸರ್ ಹಾಗೂ ಟ್ರೈಲರ್ಗಳಲ್ಲಿ ಪ್ರೇಕ್ಷಕರು ಈಗಾಗಲೇ ಗಮನಿಸಿರುವಂತೆ ಕೆಲವು ಅದ್ಧೂರಿ ಸೆಟ್ಗಳ ಹಿನ್ನೆಲೆಯಲ್ಲಿ ಕತೆ ನಡೆಯುತ್ತಿದೆ.
ಉಪೇಂದ್ರ, ಶ್ರೆಯಾ ಶಿರಿನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಕಬ್ಜ ಸಿನಿಮಾದಲ್ಲಿ ನಟ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು ಸಿನಿಮಾವು ಮಾರ್ಚ್ 17ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.