Komal: ಯಲಾ ಕುನ್ನಿ.. ವಜ್ರಮುನಿ ಅವತಾರವೆತ್ತಲಿರುವ ಕೋಮಲ್
ಕನ್ನಡ ಚಲನಚಿತ್ರದ ಜನಪ್ರಿಯ ಖಳನಟ ವಜ್ರಮುನಿಯನ್ನು ಪ್ರೇರಣೆಯಾಗಿರಿಸಿಕೊಂಡ ಹೊಸ ಸಿನಿಮಾ ಒಂದು ಸೆಟ್ಟೇರಿದೆ. ವಜ್ರಮುನಿಯವರು ಸಿನಿಮಾಗಳಲ್ಲಿ ಬಳಸುತ್ತಿದ್ದ ಬೈಗುಳವನ್ನೇ ಸಿನಿಮಾಕ್ಕೆ ಹೆಸರನ್ನಾಗಿ ಇಡಲಾಗಿದೆ.
ಕೆಲ ವರ್ಷಗಳಿಂದ ಚಿತ್ರರಂಗದಿಂದ (Sandalwood) ದೂರ ಉಳಿದಿರುವ ನಟ ಕೋಮಲ್ (Komal) ಇದೀಗ ಕಮ್ಬ್ಯಾಕ್ಗೆ ತಯಾರಾಗಿದ್ದಾರೆ. 2020 ಹೆಸರಿನ ಸಿನಿಮಾವೊಂದನ್ನು ಕೋಮಲ್ ಈ ಹಿಂದೆ ಘೋಷಿಸಿದ್ದರು. ಇದೀಗ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಬೈಗುಳವನ್ನೇ ಸಿನಿಮಾದ ಹೆಸರಾಗಿರುವ ಸಿನಿಮಾದಲ್ಲಿ ಕೋಮಲ್ ನಟಿಸುತ್ತಿದ್ದು, ಸಿನಿಮಾ ಕತೆಗೆ ಕನ್ನಡದ ಬೆಸ್ಟ್ ವಿಲನ್ ವಜ್ರಮುನಿ ಪ್ರೇರಣೆಯಾಗಿದ್ದಾರೆ!
ಕೋಮಲ್ ಯಲಾ ಕುನ್ನಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾಕ್ಕೆ ಮೇರಾ ನಾಮ್ ವಜ್ರಮುನಿ ಎಂಬ ಅಡಿಶೀರ್ಷಿಕೆ ನೀಡಲಾಗಿದೆ. ಸಿನಿಮಾದ ಪೋಸ್ಟರ್ ವಿಭಿನ್ನಾಗಿದ್ದು, ಉದಯಿಸುತ್ತಿರುವ ಸೂರ್ಯನ ಮೇಲೆ ಮೂಡಿಸಿರುವ ವಜ್ರಮುನಿಯ ಚಿತ್ರ ಗಮನ ಸೆಳೆಯುತ್ತಿದೆ. ಜೊತೆಗೆ ಪೋಸ್ಟರ್ನಲ್ಲಿ ಪುಣ್ಯಕೋಟಿ ಗೋವಿನ ಹಾಡಿನಲ್ಲಿ ಹುಲಿಯನ್ನು ಬಣ್ಣಿಸುವ ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಬುದಾನೆಂಬ ವ್ಯಾಘ್ರನು ಅಬ್ಬರಿಸಿ ಹಸಿ-ಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು ಎಂಬ ಸಾಲುಗಳನ್ನು ಬರೆಯಲಾಗಿದೆ.
ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರವನ್ನು ಎನ್. ಆರ್ ಪ್ರದೀಪ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರಾದ ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಗರಡಿಯಲ್ಲಿ ಪಳಗಿರುವ ಪ್ರದೀಪ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ.
1981 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತ-ಮುತ್ತಲಿನಲ್ಲಿ ಹಳ್ಳಿ ಮತ್ತು ದೇವಸ್ಥಾನದ ಸೆಟ್ ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗುವುದು ಎಂದಿದೆ ಚಿತ್ರತಂಡ.
View this post on Instagram
ಕನ್ನಡದ ಖ್ಯಾತ ನಟ ವಜ್ರಮುನಿ ತಮ್ಮ ಚಿತ್ರಗಳಲ್ಲಿ ಹೆಚ್ಚು ಬಯ್ಯಲು ಬಳಸುತ್ತಿದ್ಡ ಸಂಭಾಷಣೆ “ಯಲಾ ಕುನ್ನಿ”. ಈ ಪದವನ್ನೆ ಚಿತ್ರದ ಶೀರ್ಷಿಕೆಯಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ “ವಜ್ರಮುನಿ”ಯಾಗಿ ಕೋಮಲ್ ರೆಟ್ರೂ ಲುಕ್ ನಲ್ಲಿ ಕಮಾಲ್ ಮಾಡಲಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಮಗ ಜಯಸಿಂಹ ಮುಸುರಿ, ನವರಸ ನಾಯಕ ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ “ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕುಟುಂಬ ಸಮೇತ ನೋಡಬಹುದಾದ ಪರಿಶುದ್ಧ ಹಾಸ್ಯ ಕಥಾಹಂದರದ ಜೊತೆಗೆ ಎಮೋಶನ್ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರದೀಪ ಅವರೆ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ,ಗೀತ ರಚನೆ ಸಹ ಮಾಡಿದ್ದಾರೆ ಧರ್ಮ ವಿಶ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:34 pm, Thu, 9 March 23