R Chandru: ಅಪ್ಪ ಮಾರಿದ್ದ ಕಾಸಿನ ಸರ ಅಮ್ಮನಿಗಾಗಿ ತಂದ ಮಗ: ಆರ್ ಚಂದ್ರು ಕಂಡ ಕಷ್ಟಗಳ ಬಗ್ಗೆ ಪೋಷಕರ ಮಾತು
ಆರ್ ಚಂದ್ರು ಈಗ ಸ್ಯಾಂಡಲ್ವುಡ್ನ ಯಶಸ್ವಿ ನಿರ್ದೇಶಕ ಆದರೆ ಆರಂಭಿಕ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಅವರು ಅನುಭವಿಸಿದ್ದರು. ಆ ಬಗ್ಗೆ ಸ್ವತಃ ಅವರ ಪೋಷಕರು ಮಾತನಾಡಿದ್ದಾರೆ.
ನಿರ್ದೇಶಕ ಆರ್ ಚಂದ್ರು (R Chandru) ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲೊಬ್ಬರು. ಕಳೆದ ಹದಿನೈದು ವರ್ಷಗಳಿಂದಲೂ ಕನ್ನಡ ಸಿನಿಮಾಗಳ ನಿರ್ದೇಶಿಸುತ್ತಾ ಬರುತ್ತಿರುವ ಆರ್ ಚಂದ್ರು, ‘ತಾಜ್ ಮಹಲ್’, ‘ಚಾರ್ಮಿನಾರ್’, ‘ಮೈಲಾರಿ’ ಅಂಥಹಾ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಮೊದಲ ಬಾರಿಗೆ ‘ಕಬ್ಜ’ ಮೂಲಕ ಪ್ಯಾನ್ ಇಂಡಿಯಾ (Pan India) ಸಿನಿಮಾ ನಿರ್ದೇಶಕ ಎನ್ನಿಸಿಕೊಳ್ಳಲು ಹೊರಟಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ಆರ್ ಚಂದ್ರು ಅವರ ಆರಂಭದ ದಿನಗಳು ಬಹಳ ಕಷ್ಟದಿಂದ ಕೂಡಿದ್ದವು. ಆರ್ ಚಂದ್ರುವಿನ ಬಾಲ್ಯ, ಅವರ ಕಷ್ಟದ ದಿನಗಳು, ಎಳವೆಯಲ್ಲಿ ಅವರ ವ್ಯಕ್ತಿತ್ವ ಹೇಗಿತ್ತು ಎನ್ನುವ ಬಗ್ಗೆ ಅವರ ಪೋಷಕರೇ ಮಾತನಾಡಿದ್ದಾರೆ.
ಆಗಿನ ಕೋಲಾರ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಕೇಶವಾರದಲ್ಲಿ ರಾಮಯ್ಯ ಹಾಗೂ ಲಕ್ಷ್ಮಿ ದೇವಮ್ಮ ದಂಪತಿಗಳಿಗೆ ಜನಿಸಿದ ಆರ್ ಚಂದ್ರು ಅವರ ಬಾಲ್ಯ ಬಹುತೇಕ ಬಡತನದಲ್ಲಿಯೇ ಕಳೆಯಿತು. ರಾಮಯ್ಯ ಅವರೇ ಹೇಳಿರುವಂತೆ, ಕೂಲಿ ಮಾಡಿ ಮಕ್ಕಳನ್ನು ಓದಿಸುತ್ತಿದ್ದರಂತೆ ಅವರು. ಆರ್.ಚಂದ್ರು ಚೆನ್ನಾಗಿ ಓದುತ್ತಿದ್ದರಾದರೂ ಅವರ ತಮ್ಮಂದಿರಷ್ಟು ಚೆನ್ನಾಗಿ ಓದುತ್ತಿರಲಿಲ್ಲ. ಹಾಗಾಗಿ ಚಂದ್ರುಗೆ ವಿಪರೀತ ಹೊಡೆಯುತ್ತಿದ್ದರಂತೆ ತಂದೆ ರಾಮಯ್ಯ.
ಚಂದ್ರುಗೆ ಮೊದಲಿನಿಂದಲೂ ಸಿನಿಮಾ ಹುಚ್ಚು, ಸಿನಿಮಾ ನೋಡುವುದು, ಮಾಡುವುದೆಂದರೆ ಬಹಳ ಪ್ರೀತಿ. ಒಮ್ಮೆಯಂತೂ ಕೆಮಿಸ್ಟ್ರಿ ಪರೀಕ್ಷೆ ತಪ್ಪಿಸಿ, ನಂದಿಬೆಟ್ಟದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ನೋಡಲು ಹೊರಟು ಹೋಗಿದ್ದರಂತೆ. ಅಂದಂತೂ ತಂದೆಯಿಂದ ವಿಪರೀತ ಪೆಟ್ಟು ತಿಂದಿದ್ದರು ಚಂದ್ರು.
1994ರಲ್ಲೇ ಆರ್ ಚಂದ್ರುಗಾಗಿ ಕೇಶವಾರದಲ್ಲಿ ಅಂಗಡಿಯೊಂದನ್ನು ರಾಮಯ್ಯ ಹಾಕಿಕೊಟ್ಟಿದ್ದರು. ಆದರೆ ಅಂಗಡಿಯ ಮಾಲನ್ನೆಲ್ಲ ಬೇರೆಯವರಿಗೆ ದಾನ ಮಾಡಿಬಿಟ್ಟಿದ್ದರಂತೆ ಚಂದ್ರು. ”ಯಾರಾದರೂ ಕಷ್ಟ, ಹಣವಿಲ್ಲ ಎಂದು ಬಂದರೆ ಅವರಿಗೆ ಅಂಗಡಿ ಸಾಮಾನುಗಳನ್ನು ಕೊಟ್ಟು ಬಿಡುತ್ತಿದ್ದ. ಆಗೆಲ್ಲ ನನ್ನಿಂದ ಬಹಳ ಹೊಡೆಸಿಕೊಂಡಿದ್ದಾನೆ. ಅದರ ನಂತರವೇ ಅವನು ಬೆಂಗಳೂರಿಗೆ ಹೋಗಿ ಎಸ್.ನಾರಾಯಣ್ ಬಳಿ ಸೇರಿಕೊಂಡಿದ್ದು. ಬೆಂಗಳೂರಿನಲ್ಲಿದ್ದಾಗ ಫುಟ್ಪಾತ್ನಲ್ಲಿ ಊಟ ಮಾಡುತ್ತಾ ಬಹಳ ಕಷ್ಟ ಅನುಭವಿಸಿದ. ಬರಿಗೈಲಿ ಊರಿಗೆ ಬರಲು ನನ್ನ ಭಯ ಇತ್ತು. ಹಾಗಾಗಿ ಕಷ್ಟಗಳನ್ನು ಸಹಿಸಿಕೊಂಡು ಅಲ್ಲಿಯೇ ಇದ್ದು ಈಗ ಸಾಧನೆ ಮಾಡಿದ್ದಾನೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ ರಾಮಯ್ಯ.
ಮಗನ ಬಗ್ಗೆ ಬಹಳ ಹೆಮ್ಮೆ ವ್ಯಕ್ತಪಡಿಸುವ ರಾಮಯ್ಯ ಹಾಗೂ ಲಕ್ಷ್ಮಿ ದೇವಮ್ಮ, ”ಅವನ ಸಾಧನೆ ಬಹಳ ದೊಡ್ಡದು, ಸ್ವಲ್ಪ ಬುದ್ಧಿ ಇದ್ದುಬಿಟ್ಟರೆ ಎಲ್ಲರೂ ಓದುತ್ತಾರೆ, ಅವರಿಗೆ ಕಲಿಸಲು ಗುರುಗಳೂ ಇರುತ್ತಾರೆ. ಆದರೆ ಹೀಗೆ ಸಾಧನೆ ಮಾಡುವುದು ಸುಲಭವಲ್ಲ. ಪೋಷಕರಾಗಿ ನಾವಂತೂ ಬಹಳ ಖುಷಿಯಲ್ಲಿದ್ದೀವಿ, ನಮಗೆ ಸ್ವರ್ಗದಲ್ಲಿ ತೇಲಿದ ಅನುಭವ ಆಗುತ್ತಿದೆ ಎಂದಿದ್ದಾರೆ.
ಮಗನಾಗಿ ನಮಗೆ ಹಲವು ಸೇವೆಗಳನ್ನು ಮಾಡುತ್ತಿದ್ದಾನೆ ಎಂದರುವ ರಾಮಯ್ಯ, ”ನಾನು ಬಹಳ ಹಿಂದೊಮ್ಮೆ, ನನ್ನ ಮದುವೆಯಾದಾ ಹೊಸತರಲ್ಲಿ ನನ್ನ ಪತ್ನಿಗೆ ಅವರ ಮನೆಯವರು ಕೊಟ್ಟಿದ್ದ ಕಾಸಿನ ಸರ ಮಾರಿ ಬಿಟ್ಟಿದ್ದೆ. ಅದೂ ಕೇವಲ ಮದುವೆಯಾದ ಮೂರೇ ತಿಂಗಳಿಗೆ. ಅದರ ಬಗ್ಗೆ ನನಗೆ ಬಹಳ ಬೇಸರ ಇತ್ತು. ಇದನ್ನು ಮಕ್ಕಳ ಬಳಿ ಆಗಾಗ್ಗೆ ಹೇಳಿಕೊಳ್ಳುತ್ತಾ ಇದ್ದೆ. ಅದನ್ನು ಕೇಳಿದ್ದ ಮಗ ಚಂದ್ರು ಗುಟ್ಟಾಗಿ ಅವರ ಅಮ್ಮನಿಗೆ ಕಾಲು ಕೇಜಿ ತೂಕದ ಕಾಸಿನ ಸರ ಮಾಡಿಸಿ ಕೊಟ್ಟ. ಪೋಷಕರಾದವರಿಗೆ ಇದಕ್ಕಿಂತಲೂ ದೊಡ್ಡದು ಏನು ಬೇಕು” ಎಂದು ಭಾವುಕರಾಗಿದ್ದಾರೆ ರಾಮಯ್ಯ.
ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಬಿಡುಗಡೆಗೆ ತಯಾರಾಗಿದ್ದು, ನಿನ್ನೆ (ಫೆಬ್ರವರಿ 26) ಯಷ್ಟೆ ಆರ್.ಚಂದ್ರು ಅವರು ಶಿಡ್ಲಘಟ್ಟದಲ್ಲಿ ತಾವು ಕಲಿತ ಶಾಲೆಯ ಮೈದಾನದಲ್ಲಿಯೇ ದೊಡ್ಡ ಕಾರ್ಯಕ್ರಮ ಮಾಡಿ ಹಾಡು ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮ ತಂದೆ–ತಾಯಿ, ಕುಟುಂಬ, ಸ್ನೇಹಿತರನ್ನು ಕರೆಸುವ ಜೊತೆಗೆ ಸಿನಿಮಾದಲ್ಲಿ ನಟಿಸಿರುವ ಉಪೇಂದ್ರ, ಶ್ರೆಯಾ ಶಿರಿನ್, ಅತಿಥಿಗಳಾಗಿ ಶಿವಣ್ಣ, ಗೀತಕ್ಕ. ಸಚಿವ ಸುಧಾಕರ್, ಎಂಟಿಬಿ ನಾಗರಾಜು, ಶಾಸಕ ವಿ ಮುನಿಯಪ್ಪ ಇನ್ನೂ ಹಲವರನ್ನು ಕರೆಸಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:20 am, Mon, 27 February 23