ನಟ ಡಾಲಿ ಧನಂಜಯ್, ದೊಡ್ಡ ಅಭಿಮಾನಿ ಬಳಗವುಳ್ಳ ಯುವ ನಟರಲ್ಲಿ ಒಬ್ಬರು. ಮಾಸ್-ಕ್ಲಾಸ್ ಎರಡೂ ಬಗೆಯ ಸಿನಿಮಾಗಳನ್ನು ಮಾಡುತ್ತಾ ಬರುತ್ತಿರುವ ಧನಂಜಯ್ಗೆ ಸಹಜವಾಗಿಯೇ ಎರಡೂ ತೆರನಾದ ಅಭಿಮಾನಿಗಳಿದ್ದಾರೆ. ಇನ್ನೇನು ಒಂದೆರಡು ದಿನಗಳಲ್ಲಿ ಡಾಲಿ ಧನಂಜಯ್ ಹುಟ್ಟುಹಬ್ಬವಿದೆ. ಆದರೆ ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದಿದ್ದಾರೆ ಡಾಲಿ ಧನಂಜಯ್. ಈ ಬಗ್ಗೆ ಅಭಿಮಾನಿಗಳಲ್ಲಿ ಕ್ಷಮೆ ಸಹ ಕೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂದೇಶ ಪ್ರಕಟಿಸಿರುವ ನಟ ಡಾಲಿ ಧನಂಜಯ್, ‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ಆಗಸ್ಟ್ 23, ಪ್ರತಿ ವರ್ಷದಂತೆ ನಿಮ್ಮೊಡನೆ ಹುಟ್ಟು ಹಬ್ಬವನ್ನು ಸಂಭ್ರಮಿಸುವ ಉತ್ಸಾಹವಿದ್ದರು, ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ. ಕ್ಷಮೆಯಿರಲಿ. ಎಲ್ಲಿರುತ್ತೀರೋ ಅಲ್ಲಿಂದಲೇ ಹರಸಿ. ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ. ಪ್ರೀತಿಯಿರಲಿ. ಇಂತಿ ನಿಮ್ಮ ಪ್ರೀತಿಯ, ಡಾಲಿ ಧನಂಜಯ’ ಎಂದಿದ್ದಾರೆ.
ಡಾಲಿ ಧನಂಜಯ್ ಈ ಬಾರಿ ಏಕೆ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ನಿಖರ ಕಾರಣ ಹೇಳಿಲ್ಲ. ಡಾಲಿ ಧನಂಜಯ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸಿನಿಮಾ ಶೆಡ್ಯೂಲ್ ಇರುವ ಕಾರಣದಿಂದ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಆದರೆ ಕಳೆದ ವರ್ಷ ಭಾರಿ ಜೋರಾಗಿ ಹುಟ್ಟುಹಬ್ಬವನ್ನು ಡಾಲಿ ಆಚರಣೆ ಮಾಡಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್ 22 ಕ್ಕೆ ಅವರ ನಟನೆಯ ‘ಉತ್ತರಕಾಂಡ’ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಅದಾದ ಬಳಿಕ ನಂದಿ ಲಿಂಕ್ ಗ್ರೌಂಡ್ನಲ್ಲಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗಸ್ಟ್ 23 ರ ರಾತ್ರಿ ಸಹ ಚಿತ್ರರಂಗದ ಸೆಲೆಬ್ರಿಟಿಗಳನ್ನೆಲ್ಲ ಕರೆದು ದೊಡ್ಡ ಪಾರ್ಟಿ ಸಹ ಕೊಟ್ಟಿದ್ದರು. ಹಲವು ಸ್ಟಾರ್ ನಟ-ನಟಿಯರು ಡಾಲಿ ಧನಂಜಯ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:ಡಾಲಿ ಧನಂಜಯ್, ಸತ್ಯದೇವ್ ನಟನೆಯ ‘ಜೀಬ್ರಾ’ ಸಿನಿಮಾದಿಂದ ಫಸ್ಟ್ ಲುಕ್ ರಿಲೀಸ್
ಈ ಬಾರಿ ಡಾಲಿ ಧನಂಜಯ್ ಹುಟ್ಟುಹಬ್ಬದಂದು ಅವರು ನಟಿಸುತ್ತಿರುವ ಸಿನಿಮಾಗಳ ಪೋಸ್ಟರ್, ಟೀಸರ್ಗಳು ಬಿಡುಗಡೆ ಆಗುವ ಸಾಧ್ಯತೆ ಇದೆ. ವಿಶೇಷವಾಗಿ ‘ಉತ್ತರಕಾಂಡ’ ಸಿನಿಮಾದ ಟೀಸರ್ ಬರುವ ಸಾಧ್ಯತೆ ಇದೆ. ‘ಪುಷ್ಪ 2’ ಸಿನಿಮಾದಲ್ಲಿನ ಡಾಲಿ ಧನಂಜಯ್ ಪಾತ್ರದ ಪೋಸ್ಟರ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಅದರ ಜೊತೆಗೆ ಡಾಲಿ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಆ ಸಿನಿಮಾ ತಂಡಗಳು ಡಾಲಿಗೆ ವಿಷ್ ಮಾಡಿ ಪೋಸ್ಟರ್, ಟೀಸರ್, ಟ್ರೈಲರ್ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ