ಸದ್ದು ಮಾಡುತ್ತಿದ್ದಾನೆ ‘ಲಂಗೋಟಿ ಮ್ಯಾನ್’: ಟೀಸರ್ ನೋಡಿ ಮೆಚ್ಚಿಕೊಂಡ ನಟ ಶರಣ್
ಕಾಮಿಡಿ ಸಿನಿಮಾ ಇಷ್ಟಪಡುವ ಪ್ರೇಕ್ಷಕರಿಗೆ ‘ಲಂಗೋಟಿ ಮ್ಯಾನ್’ ಚಿತ್ರದ ಟೀಸರ್ ಇಷ್ಟವಾಗುತ್ತಿದೆ. ನಟ ಶರಣ್ ಅವರು ಟೀಸರ್ ರಿಲೀಸ್ ಮಾಡಿದ್ದಾರೆ. ಹೊಸ ನಟ ಆಕಾಶ್ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ಸಂಜೋತಾ ಭಂಡಾರಿ ಅವರು ಸಿನಿಮಾಗೆ ನಿರ್ದೇಶನ ಮಾಡಿದ್ದು, ಟೀಸರ್ ವೈರಲ್ ಆಗಿದೆ. ‘ಇಂಥ ಸಿನಿಮಾ ಮಾಡಲು ಧೈರ್ಯ ಬೇಕು’ ಎಂದು ಶರಣ್ ಹೇಳಿದ್ದಾರೆ.
ನಟ ಶರಣ್ ಅವರು ಹಾಸ್ಯ ಪಾತ್ರಗಳ ಮೂಲಕ ಸೈ ಎನಿಸಿಕೊಂಡವರು. ಅವರಿಂದ ಮೆಚ್ಚುಗೆ ಸಿಗುತ್ತದೆ ಎಂದರೆ ಸಣ್ಣ ಮಾತಲ್ಲ. ಈಗ ಹೊಸ ನಟ ಆಕಾಶ್ ರಾಂಬೋ ಅವರು ‘ಲಂಗೋಟಿ ಮ್ಯಾನ್’ ಸಿನಿಮಾದಲ್ಲಿ ಅಭಿನಯಿಸಿದ್ದು, ಅವರಿಗೆ ಶರಣ್ ಕಡೆಯಿಂದ ಪ್ರಶಂಸೆ ಸಿಕ್ಕಿದೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಲಾಂಚ್ ಮಾಡಲಾಯಿತು. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ಟೀಸರ್ ಸದ್ದು ಮಾಡುತ್ತಿದೆ. ‘ತನು ಟಾಕೀಸ್’ ಮೂಲಕ ಈ ಸಿನಿಮಾ ನಿರ್ಮಾಣವಾಗಿದ್ದು, ಸಂಜೋತಾ ಭಂಡಾರಿ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘ಲಂಗೋಟಿ ಮ್ಯಾನ್’ ಸಿನಿಮಾದ ಕಾನ್ಸೆಪ್ಟ್ ಸಖತ್ ಭಿನ್ನವಾಗಿದೆ. ಇದು ಸಂಪೂರ್ಣ ಕಾಮಿಡಿ ಸಿನಿಮಾ. ಹಾಗಾಗಿ ಶರಣ್ ಅವರು ಅತಿಥಿಯಾಗಿ ಬಂದು ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಅಲ್ಲದೇ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಇಂಥ ಕಾಸ್ಟ್ಯೂಮ್ನಲ್ಲಿ ಸಿನಿಮಾವನ್ನು ಕಲ್ಪನೆ ಮಾಡುವುದೇ ಕಷ್ಟ. ಆಕಾಶ್ ಅವರು ಮೈಚಳಿ ಬಿಟ್ಟು ನಟಿಸಿದ್ದಾರೆ’ ಎಂದು ಹೊಸ ನಟನ ಪ್ರಯತ್ನಕ್ಕೆ ಶರಣ್ ಬೆನ್ನು ತಟ್ಟಿದ್ದಾರೆ. 10 ವರ್ಷಗಳ ಹಿಂದೆ ‘ಮಿರ್ಚಿ ಮಂಡಕ್ಕಿ ಖಡಕ್ ಚಾಯ್’ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕಿ ಸಂಜೋತಾ ಅವರಿಗೆ ಇದು ಎರಡನೇ ಸಿನಿಮಾ.
ಸಂಜೋತಾ ಭಂಡಾರಿ ಅವರು ಮಾತನಾಡಿ, ‘ನಾನು ಬೇರೆ ಒಂದು ಸಿನಿಮಾದ ಕಥೆ ಮಾಡುತ್ತಿದ್ದಾಗ ಈ ಕಾನ್ಸೆಪ್ಟ್ ಹೊಳೆಯಿತು. ಕೊನೆಗೆ ‘ಲಂಗೋಟಿ ಮ್ಯಾನ್’ ಸಿನಿಮಾ ಸ್ವರೂಪ ಪಡೆದುಕೊಂಡಿತು. ಈ ಸಿನಿಮಾದಲ್ಲಿ ಲಂಗೋಟಿಯೇ ನಿಜವಾದ ಹೀರೋ. ಕಥೆ ಮತ್ತು ಸಂಭಾಷಣೆ ಬರವಣಿಗೆಯಲ್ಲಿ ಅನೇಕ ಸ್ನೇಹಿತರು ಸಹಾಯ ಮಾಡಿದ್ದಾರೆ. ಸಿನಿಮಾ ಗೆಲುತ್ತದೆ ಎಂಬ ವಿಶ್ವಾಸ ನಮಗಿದೆ’ ಎಂದರು.
ಆಕಾಶ್ ರಾಂಬೊ ಜೊತೆ ಧೀರೇಂದ್ರ, ಮಹಾಲಕ್ಷ್ಮಿ, ಸಂಹಿತ ವಿನ್ಯಾ, ಹುಲಿ ಕಾರ್ತಿಕ್, ಗಿಲ್ಲಿ ನಟ, ಸ್ನೇಹಾ ಋಷಿ, ಆಟೋ ನಾಗರಾಜ್, ಪವನ್ ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಸೌತ್ ಡಿಸಿಸಿ ಪ್ರೆಸಿಡೆಂಟ್ ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಇದನ್ನೂ ಓದಿ: ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ 7.7 ಅಡಿ ಎತ್ತರದ ನಟ; 5 ದಿನಕ್ಕೆ 322 ಕೋಟಿ ರೂ. ಕಲೆಕ್ಷನ್
ಶರಣ್ ಅವರು ಮಾತನಾಡಿ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಈ ಟೈಟಲ್ ಕೇಳಿದಾಗ ನಗು ಬರುತ್ತದೆ. ತಮಾಷೆಗೆ ಈ ರೀತಿ ಟೈಟಲ್ ಇಟ್ಟಿರಬಹುದು ಎಂದುಕೊಂಡಿದ್ದೆ. ಆದರೆ ಈ ಟೈಟಲ್ ಹಿಂದೆ ದೊಡ್ಡ ಕಾನ್ಸೆಪ್ಟ್ ಮತ್ತು ಮೆಸೇಜ್ ಇದೆ ಎಂಬುದು ನನಗೆ ಗೊತ್ತಾಗಿದೆ. ತಂಡದಲ್ಲಿ ಪಾಸಿಟಿವಿಟಿ ಕಾಣಿಸಿದೆ. ಇದು ಗೆಲುವಿನ ಮೊದಲ ಗುಣ. ಒಳ್ಳೆಯ ಕಾಂಟೆಂಟ್ ಇರುವ ಸಿನಿಮಾಗಳಿಗೆ ಖಂಡಿತಾ ಗೆಲುವು ಸಿಗುತ್ತದೆ’ ಎಂದು ಶರಣ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.