ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸಿನಿಮಾಗಳಲ್ಲಿ ಆಸ್ಥಾನ ಕಲಾವಿದರು ಯಾರು?
ರಿಷಬ್ ಅವರು ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ‘ಕಾಂತಾರ’ ಸಿನಿಮಾ ನಟನೆಗೆ ಅತ್ಯುತ್ತಮ ನಟ ಅವಾರ್ಡ್ ಅವರಿಗೆ ಸಿಕ್ಕಿದೆ. ಈ ಮೂಲಕ ಅವರ ಜನಪ್ರಿಯತೆ ಹೆಚ್ಚಾಗಿದೆ. ರಿಷಬ್ ಅವರು ಸಾಧನೆ ಅನೇಕರಿಗೆ ಮಾದರಿ. ಅವರ ಸಿನಿಮಾಗಳಲ್ಲಿ ಇಬ್ಬರು ಕಲಾವಿದರು ಸದಾ ಇರುತ್ತಾರೆ.
ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಒಬ್ಬರ ಸಿನಿಮಾಗೆ ಒಬ್ಬರು ಬೆಂಬಲ ನೀಡುತ್ತಾ ಬಂದಿದ್ದಾರೆ. ಕರಾವಳಿ ಭಾಗದವರು ಆಗಿದ್ದರಿಂದ ಸಹಜವಾಗಿಯೇ ಹಲವು ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದಾರೆ. ರಿಷಬ್ ಹಾಗೂ ರಕ್ಷಿತ್ ಸಿನಿಮಾಗಳಲ್ಲಿ ಆಸ್ಥಾನ ಕಲಾವಿದರಂತೆ ಇಬ್ಬರು ಇರುತ್ತಾರಂತೆ. ಅವರು ಯಾರು ಎಂಬುದನ್ನು ರಿಷಬ್ ಶೆಟ್ಟಿ ಅವರು ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಸಿನಿಮಾಗಳಲ್ಲಿ ಸಹಜವಾಗಿ ಕಾಣಿಸೋರು ಪ್ರಮೋದ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್. ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’ ಚಿತ್ರದಿಂದ ಹಿಡಿದು, ‘ಕಾಂತಾರ’ ಚಿತ್ರದವರೆಗೆ ಪ್ರಮೋದ್ ಹಾಗೂ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಇಷ್ಟ ಆಗುತ್ತದೆ. ರಿಷಬ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಖಡಕ್ ಸಿನಿಮಾ’ ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಿಷಬ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಲಾಫಿಂಗ್ ಬುದ್ಧ’ ಹೆಸರಿನ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಪ್ರಮೋದ್ ಶೆಟ್ಟಿ ಹೀರೋ. ಅವರಿಗೆ ಈ ಸಿನಿಮಾ ಹೇಳಿ ಮಾಡಿಸಿದಂತೆ ಇದೆ ಅನ್ನೋದು ಟ್ರೇಲರ್ ನೋಡಿದವರಿಗೆ ಸ್ಪಷ್ಟವಾಗುತ್ತದೆ. ಸಿನಿಮಾಗಳಿಗೆ ಪಾತ್ರಗಳನ್ನು ಆಯ್ಕೆ ಮಾಡುವಾಗ ಪ್ರಮೋದ್ ಹಾಗೂ ಅಚ್ಯುತ್ ಕುಮಾರ್ಗೆ ಈ ಪಾತ್ರ ಎಂಬುದು ರಿಷಬ್ ತಲೆಯಲ್ಲಿ ಕೂತು ಬಿಡುತ್ತದೆಯಂತೆ.
ಇದನ್ನೂ ಓದಿ: ‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ ಖಡಕ್ ಮಾತು
‘ಪ್ರಮೋದ್ ಶೆಟ್ಟಿ ರಂಗಭೂಮಿಯಲ್ಲಿ ಇದ್ದವನು. ಅವನು ಸಿನಿಮಾಗೆ ಬರಲ್ಲ ಎಂದಿದ್ದ. ನಾನೇ ಆತನನ್ನು ಕರೆದುತಂದೆ. ಈಗ 50 ಸಿನಿಮಾಗಳಲ್ಲಿ ನಟಿಸಿದ್ದಾನೆ. ರಕ್ಷಿತ್ ಪರಂವ ಸ್ಟುಡಿಯೋಸ್ ಮಾಡಿದ. ನಾನು ರಿಷಬ್ ಶೆಟ್ಟಿ ಫಿಲ್ಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಮಾಡಿದೆ. ನಮ್ಮ ಎಲ್ಲಾ ಸಿನಿಮಾಗಳಲ್ಲೂ ಆಸ್ಥಾನ ಕಲಾವಿದರ ರೀತಿ ಅಚ್ಯುತಣ್ಣ (ಅಚ್ಯುತ್ ಕುಮಾರ್) ಹಾಗೂ ಪ್ರಮೋದ್ ಶೆಟ್ಟಿಗೆ ಒಂದು ಪಾತ್ರ ಮೀಸಲಿರುತ್ತದೆ. ರಂಗಭೂಮಿಯಿಂದ ಬಂದವರಿಗೆ ತಂಡ ತಂಡವಾಗಿ ಕೆಲಸ ಮಾಡಿ ಅಭ್ಯಾಸ ಆಗಿರುತ್ತದೆ. ಆ ರೀತಿಯ ಆಲೋಚನೆ ಪ್ರಕ್ರಿಯೆ ನಡೆದುಕೊಂಡು ಹೋಗುತ್ತದೆ’ ಎಂದಿದ್ದಾರೆ ರಿಷಬ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.