ಡೇರ್​ಡೆವಿಲ್ ಮುಸ್ತಾಫಾ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಕೋರಿ ಮನವಿ: ಅಸ್ತು ಎನ್ನುತ್ತಾರೆಯೇ ಸಿದ್ದರಾಮಯ್ಯ

|

Updated on: Jun 11, 2023 | 5:13 PM

Daredevil Mustafa: ಡೇರ್​ಡೆವಿಲ್ ಮುಸ್ತಾಫಾ ಸಿನಿಮಾದ ನಿರ್ದೇಶಕ ಹಾಗೂ ಕೆಲವು ಚಿಂತಕರು ಸೇರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೋಮು ಸೌಹಾರ್ಧತೆ ಸಾರುವ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದರು.

ಡೇರ್​ಡೆವಿಲ್ ಮುಸ್ತಾಫಾ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಕೋರಿ ಮನವಿ: ಅಸ್ತು ಎನ್ನುತ್ತಾರೆಯೇ ಸಿದ್ದರಾಮಯ್ಯ
ಡೇರ್​ಡೆವಿಲ್ ಮುಸ್ತಾಫಾ
Follow us on

ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಕತೆ ಆಧರಿಸಿದ ಹೊಸಬರ ಪ್ರಯತ್ನ ಡೇರ್​ಡೆವಿಲ್ ಮುಸ್ತಾಫಾ (Daredevil mustafa) ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಧರ್ಮ ಸಹಿಷ್ಣುತೆ, ಸಹಬಾಳ್ವೆ, ಸಮಭಾವದ ಪಾಠ ಹೇಳುವ ಈ ಸಿನಿಮಾವನ್ನು ಇನ್ನೂ ಹೆಚ್ಚಿನ ಮಂದಿಗೆ ತೋರಿಸುವ ಇಚ್ಛೆಯಿಂದ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂದು ಸಿನಿಮಾದ ನಿರ್ದೇಶಕ ಹಾಗೂ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿದ ಕೆಲ ಹಿರಿಯರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಡೇರ್​ಡೆವಿಲ್ ಮುಸ್ತಾಫಾ ಸಿನಿಮಾದ ನಿರ್ದೇಶಕ ಶಶಾಂಕ ಸೋಗಾಲ, ಚಿತ್ರಕತೆ ಬರೆದಿರುವ ಚಿಂತನ್ ಹಾಗೂ ಚಿಂತಕ ನಟರಾಜ್ ಹುಳಿಯಾರ್ ಅವರುಗಳು ಸಿಎಂ ನಿವಾಸದ ಬಳಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೋಮು ಸಾಮರಸ್ಯ ಸಾರುವ ತಮ್ಮ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೋರಿಕೊಂಡಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುದ್ವೇಷ ಹರಡುವ ಸಿನಿಮಾ ಎಂಬ ಕುಖ್ಯಾತಿಗೆ ಗುರಿಯಾಗಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಅದಾದ ಬಳಿಕ ಪುನೀತ್ ರಾಜ್​ಕುಮಾರ್ ಅವರ ಡಾಕ್ಯುಡ್ರಾಮಾ ಗಂಧದ ಗುಡಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಆಗಿನ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಹಲವು ಸಚಿವರು, ನಾಯಕರು, ಶಾಸಕರು ವೀಕ್ಷಿಸಿ ತಮ್ಮ ಕ್ಷೇತ್ರಗಳಲ್ಲಿ ಉಚಿತ ಪ್ರದರ್ಶನ ಆಯೋಜನೆಯನ್ನೂ ಮಾಡಿದ್ದರು.

ಕೋಮುದ್ವೇಷದ ಕಡು ವಿರೋಧಿಯಾದ, ಕೋಮು ಸಾಮರಸ್ಯದ ಬಗ್ಗೆ ಅತೀವ ನಂಬುಗೆಯುಳ್ಳ ಸಿದ್ದರಾಮಯ್ಯ ಅವರು ಇದೀಗ ಸಿಎಂ ಆಗಿದ್ದು, ಕೋಮುಸಾಮರಸ್ಯ ಸಾರುವ ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ಇದೀಗ ಬಿಡುಗಡೆ ಆಗಿದ್ದು, ಕೋಮುದ್ವೇಷ ವಿರೋಧಿ ಸಿದ್ದರಾಮಯ್ಯ ಅವರು ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುತ್ತಾರೆಯೇ ಕಾದು ನೋಡಬೇಕಿದೆ.

ಇದನ್ನೂ ಓದಿ: Daredevil Musthafa: ​ಈಗ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ಟಿಕೆಟ್​ ಬೆಲೆ ಕೇವಲ 50 ರೂಪಾಯಿ; ಮಲ್ಟಿಪ್ಲೆಕ್ಸ್​ನಲ್ಲಿ 99 ರೂಪಾಯಿ

ಆದರೆ ಚಿತ್ರತಂಡವು ತಮಗೆ ತೆರಿಗೆ ವಿನಾಯಿತಿ ಸಿಗುವ ಮೊದಲೇ ತಮ್ಮ ಸಿನಿಮಾವನ್ನು ಅತ್ಯಂತ ಕಡಿಮೆ ದರದಲ್ಲಿ ವೀಕ್ಷಕರಿಗೆ ಪ್ರದರ್ಶಿಸುತ್ತಿದೆ. ಸಿಂಗಲ್ ಸ್ಕ್ರೀನ್​ಗಳಲ್ಲಿ ಡೇರ್​ಡೆವಿಲ್ ಮುಸ್ತಾಫಾ ಸಿನಿಮಾಕ್ಕೆ ಕೇವಲ 50 ಹಾಗೂ 75 ರುಪಾಯಿ ಟಿಕೆಟ್ ದರ ನಿಗದಿಪಡಿಸಿದ್ದರೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಕೇವಲ 99 ರೂಪಾಯಿಗಳಲ್ಲಿ ಸಿನಿಮಾ ಟಿಕೆಟ್ ಲಭ್ಯವಾಗುತ್ತಿದೆ. ಈ ಸಿನಿಮಾವನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಇಷ್ಟು ಕಡಿಮೆ ಮೊತ್ತಕ್ಕೆ ಟಿಕೆಟ್ ಬೆಲೆ ನಿಗದಿ ಪಡಿಸಲಾಗಿದೆ.

ಇತ್ತೀಚೆಗೆ ಬಿಡುಗಡೆ ಆಗಿರುವ ದಿ ಕೇರಳ ಸ್ಟೋರಿ ಸಿನಿಮಾಕ್ಕೂ ಉತ್ತರ ಪ್ರದೇಶ, ಮಧ್ಯ ಪ್ರದೇಶಗಳಂತಹಾ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಸಿಕ್ಕಿದೆ. ಒಂದೊಮ್ಮೆ ಆ ಸಿನಿಮಾ ಬಿಡುಗಡೆ ಆಗುವ ವೇಳೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೆ ಆ ಸಿನಿಮಾಕ್ಕೂ ತೆರಿಗೆ ವಿನಾಯಿತಿ ದೊರಕುತ್ತಿತ್ತೇನೋ. ಆದರೆ ಆ ವೇಳೆಗಾಗಲೆ ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ