
ಡಾರ್ಲಿಂಗ್ ಕೃಷ್ಣ ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ (Kousalya Supraja Rama) ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್ ದಿನಾಂಕವನ್ನು ನಿರ್ದೇಶಕ ಶಶಾಂಕ್ ಅವರು ಅನೌನ್ಸ್ ಮಾಡಿದ್ದಾರೆ. ಯಾವುದೇ ಹೈಪ್, ಬಿಲ್ಡಪ್ ಇಲ್ಲದೇ ಅವರು ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ. ಜುಲೈ 28ರಂದು ಈ ಚಿತ್ರ ತೆರೆಕಾಣಲಿದೆ. ಶಶಾಂಕ್ (Director Shashank) ಮತ್ತು ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ ಆದ್ದರಿಂದ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಅವರಿಗೆ ಜೋಡಿಯಾಗಿ ಬೃಂದಾ ಆಚಾರ್ಯ ನಟಿಸಿದ್ದಾರೆ. ಈಗಾಗಲೇ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಚಿತ್ರಮಂದಿರದಲ್ಲಿ ಆದಷ್ಟು ಬೇಗ ಈ ಸಿನಿಮಾ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳು ರಿಲೀಸ್ ಡೇಟ್ ಕೇಳಿ ಖುಷಿಪಟ್ಟಿದ್ದಾರೆ.
ರಿಲೀಸ್ ಡೇಟ್ ತಿಳಿಸುವುದಕ್ಕೂ ಮುನ್ನ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರತಂಡದವರು ಒಂದು ವಿಡಿಯೋ ಹಂಚಿಕೊಂಡಿದ್ದರು. ಬಹಳ ಸಿಂಪಲ್ ಆಗಿ ಬಿಡುಗಡೆ ದಿನಾಂಕ ಘೋಷಿಸುವುದಾಗಿ ಶಶಾಂಕ್ ಹೇಳುತ್ತಾರೆ. ಹೈಪ್, ಬಿಲ್ಡಪ್ ಏನೂ ಇಲ್ವಾ ಅಂತಾ ಮಿಲನಾ ನಾಗರಾಜ್ ಕೇಳುತ್ತಾರೆ. ಕಂಟೆಂಟ್ ಚೆನ್ನಾಗಿದ್ದರೆ ಯಾವುದೇ ಹೈಪ್, ಬಿಲ್ಡಪ್ ಬೇಡ ಎಂಬುದು ಶಶಾಂಕ್ ಅವರ ನಂಬಿಕೆ. ಹಾಗಾಗಿ ತುಂಬ ಸಿಂಪಲ್ ಆಗಿ, ಒಂದು ಮೋಷನ್ ಪೋಸ್ಟರ್ ಮೂಲಕ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ರಿಲೀಸ್ ಡೇಟ್ ತಿಳಿಸಲಾಗಿದೆ.
ನಿರ್ದೇಶಕ ಶಶಾಂಕ್ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ‘ಮೊಗ್ಗಿನ ಮನಸು’, ‘ಕೃಷ್ಣ ಲೀಲಾ’, ‘ಕೃಷ್ಣನ್ ಲವ್ ಸ್ಟೋರಿ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ತುಂಬ ಪ್ರಾಮುಖ್ಯತೆ ಇರುತ್ತದೆ. ಕಳೆದ ವರ್ಷ ರಿಲೀಸ್ ಆದ ‘ಲವ್ 360’ ಚಿತ್ರದ ಹಾಡುಗಳು ಕೂಡ ಸಖತ್ ಜನಪ್ರಿಯತೆ ಪಡೆದುಕೊಂಡವು. ಪ್ರೇಮಕಥೆಗಳನ್ನು ತೆರೆಗೆ ತರುವುದರಲ್ಲಿ ಶಶಾಂಕ್ ಅವರು ಫೇಮಸ್. ಈಗ ಅವರು ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಕೂಡ ಒಂದು ಸ್ಪೆಷಲ್ ಕಹಾನಿಯನ್ನು ಜನರ ಮುಂದಿಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ಜನ್ಮದಿನ; ಹೀರೋ ಆಗಿ 10 ವರ್ಷ: 2 ವಿಶೇಷ ಕಾರಣಗಳಿಗೆ ಶುಭ ಕೋರಿದ ಮಿಲನಾ ನಾಗರಾಜ್
‘ಲವ್ ಮಾಕ್ಟೇಲ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಡಾರ್ಲಿಂಗ್ ಕೃಷ್ಣ ಅವರ ಖ್ಯಾತಿ ಹೆಚ್ಚಿತು. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಅವರೊಂದು ಡಿಫರೆಂಟ್ ಪಾತ್ರ ಮಾಡಿದ್ದಾರೆ. ಆ ಪಾತ್ರ ಹೇಗಿರಲಿದೆ ಎಂಬುದನ್ನು ಈಗಾಗಲೇ ‘ಶಿವಾನಿ..’ ಹಾಡಿನಲ್ಲಿ ವಿವರಿಸಲಾಗಿದೆ. ಪೂರ್ತಿ ಸಿನಿಮಾ ನೋಡಲು ಪ್ರೇಕ್ಷಕರು ಕಾದಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಮಿಲನಾ ನಾಗರಾಜ್ ಕೂಡ ಕೈ ಜೋಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.