ದರ್ಶನ್ ಪ್ರಕರಣ: ರೇಣುಕಾ ಸ್ವಾಮಿ ಶವ ಸಾಗಿಸಿದ್ದ ಕಾರು ವಶ, ಯಾರ ಹೆಸರಲ್ಲಿದೆ ಕಾರು?

|

Updated on: Jun 12, 2024 | 11:42 AM

ರೇಣುಕಾ ಸ್ವಾಮಿಯ ಶವ ಸಾಗಿಸಲು ಬಳಸಲಾಗಿದೆ ಎನ್ನಲಾಗುತ್ತಿರುವ ಸ್ಕಾರ್ಪಿಯೋ ಕಾರು ಸೇರಿದಂತೆ ದರ್ಶನ್ ಬಳಸುತ್ತಿದ್ದ ಜೀಪ್ ರ್ವಾಂಗ್ಲರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರುಗಳಿಂದ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ದರ್ಶನ್ ಪ್ರಕರಣ: ರೇಣುಕಾ ಸ್ವಾಮಿ ಶವ ಸಾಗಿಸಿದ್ದ ಕಾರು ವಶ, ಯಾರ ಹೆಸರಲ್ಲಿದೆ ಕಾರು?
Follow us on

ರೇಣುಕಾ ಸ್ವಾಮಿ (Renuka Swamy) ಕೊಲೆ ಕುರಿತಾಗಿ ಹಲವು ಅಂಶಗಳು ಒಂದೊಂದಾಗಿ ಹೊರಬೀಳುತ್ತಿವೆ. ಇದೀಗ ಅಪರಾಧಕ್ಕೆ ಬಳಕೆಯಾಗಿದೆ ಎನ್ನಲಾಗುತ್ತಿರುವ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಜೀಪ್ ರ್ವಾಂಗ್ಲರ್ ಕಾರು, ರೇಣುಕಾ ಸ್ವಾಮಿಯನ್ನು ಕೂಡಿ ಹಾಕಿದ್ದ ರಾಜರಾಜೇಶ್ವರಿ ನಗರದ ಶೆಡ್​ಗೆ ಹೋಗುತ್ತಿರುವುದು ಬಹಿರಂಗವಾಗಿದೆ ಇದೀಗ ಪೊಲೀಸರು ಈ ಎರಡೂ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಕೆಲವು ವಸ್ತುಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ವಾಹನಗಳಿಂದ ಒಂದು ತುಂಬಿದ ಮದ್ಯದ ಬಾಟಲಿ ಹಾಗೂ ಮಹಿಳೆಯರು ಬಳಸುವ ವ್ಯಾನಿಟಿ ಬ್ಯಾಗ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ವ್ಯಾನಿಟಿ ಬ್ಯಾಗು ಪವಿತ್ರಾ ಗೌಡ ಅವರಿಗ್ಗೆ ಸೇರಿದ್ದು ಎನ್ನಲಾಗುತ್ತಿದೆ. ಜೀಪ್ ಕಾರು ದರ್ಶನ್ ಆಪ್ತ ವಿನಯ್ ಹೆಸರಿನಲ್ಲಿ ನೊಂದಾವಣಿ ಆಗಿದೆ, ಬೆಂಗಳೂರಿನಲ್ಲಿ ಓಡಾಡಲು ದರ್ಶನ್ ಇದೇ ಕಾರನ್ನು ಹೆಚ್ಚಾಗಿ ಬಳಸುತ್ತಿದ್ದರು. ಕೊಲೆಯಾದ ರಾತ್ರಿ ಇದೇ ಕಾರಿನಲ್ಲಿ ರಾಜರಾಜೇಶ್ವರಿ ನಗರದ ಶೆಡ್​ಗೆ ಆಗಮಿಸಿದ್ದರು ಎನ್ನಲಾಗುತ್ತಿದೆ. ಈ ಕಾರಿನಿಂದ ಒಂದು ಮದ್ಯದ ಬಾಟಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೊಲೆ ಆರೋಪದಲ್ಲಿ ದರ್ಶನ್​ಗೆ ಜೈಲು, ನಿರ್ಮಾಪಕರು ಆತಂಕದಲ್ಲಿ

ಇನ್ನು ಸ್ಕಾರ್ಪಿಯೋ ಕಾರು ದರ್ಶನ್​ರ ಮತ್ತೊಬ್ಬ ಆಪ್ತ ಪ್ರದೋಶ್ ಹೆಸರಿನಲ್ಲಿ ನೊಂದಾವಣಿ ಆಗಿದೆ. ಈ ಕಾರು ಸೆಕೆಂಡ್ಸ್ ಆಗಿದ್ದು, ಮೊದಲ ಮಾಲೀಕನಿಂದ ಪ್ರದೋಶ್ ಖರೀದಿಸಿದ್ದಾರೆ ಎನ್ನುತ್ತಿವೆ ಆರ್​ಟಿಓ ದಾಖಲೆಗಳು. ಮೂಲಗಳ ಪ್ರಕಾರ ಇದೇ ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳು ರೇಣುಕಾ ಸ್ವಾಮಿಯ ಶವವನ್ನು ಕೊಂಡೊಯ್ದು ಸುಮನಹಳ್ಳಿ ಮೋರಿಗೆ ಎಸದಿದ್ದರು ಎನ್ನಲಾಗುತ್ತಿದೆ. ಸ್ಕಾರ್ಪಿಯೋ ಕಾರಿನಿಂದ ವ್ಯಾನಿಟಿ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಜೀಪ್ ಹಾಗೂ ಸ್ಪಾರ್ಪಿಯೋದ ಮಾಲೀಕರಾದ ವಿನಯ್ ಹಾಗೂ ಪ್ರದೋಶ್ ಇಬ್ಬರೂ ಸಹ ಈಗ ಪೊಲೀಸರ ವಶದಲ್ಲಿಯೇ ಇದ್ದಾರೆ.

ಎರಡೂ ಕಾರುಗಳು ಸದ್ಯ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಬಳಿ ಇವೆ. ಬೆರಳಚ್ಚು ತಜ್ಞರು ಕಾರಿನಲ್ಲಿ ಬೆರಳಚ್ಚುಗಳ ಪ್ರತಿಯನ್ನು ತೆಗೆದುಕೊಳ್ಳಲಿದ್ದಾರೆ. ಶವವನ್ನು ಸಹ ಸಾಗಾಟ ಮಾಡಿರುವ ಕಾರಣ ಇನ್ನೂ ಕೆಲವು ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಲಿದ್ದಾರೆ.

ರೇಣುಕಾ ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು 17 ಮಂದಿಯನ್ನು ಬಂಧಿಸಿದ್ದಾರೆ. ಅವರ ಮೊಬೈಲ್​ಗಳನ್ನು ಈಗಾಗಲೇ ವಶಕ್ಕೆ ಪಡೆದಿದ್ದು ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದರ ನಡುವೆ ಕಾರುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಇನ್ನು ವಿನಯ್​ಗೆ ಸೇರಿದ ಸ್ಟೋನಿ ಬ್ರೂಕ್ಸ್ ಹೋಟೆಲ್​ನಲ್ಲಿಯೂ ಸಹ ಪೊಲೀಸರು ತನಿಖೆ ನಡೆಸಿ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ