ನನ್ನ ಮಗನ ರೀತಿ ದರ್ಶನ್ ಸಹ ಸಾಯಲಿ: ರೇಣುಕಾ ಸ್ವಾಮಿ ತಾಯಿ ಶಾಪ
ಒಬ್ಬ ತಾಯಿ ತನ್ನ ಮಗನನ್ನು ಯಾವ ಸ್ಥಿತಿಯಲ್ಲಿ ನೋಡಬಾರದೋ ಅದೇ ಸ್ಥಿತಿಯಲ್ಲಿ ರೇಣುಕಾ ಸ್ವಾಮಿಯ ತಾಯಿ ತನ್ನ ಮಗನನ್ನು ನೋಡಿದ್ದಾರೆ. ಅವರ ಹೃದಯ ಒಡೆದು ಛಿದ್ರವಾಗಿದೆ. ತನ್ನ ಮಗನ ಈ ದುಸ್ಥಿತಿಗೆ ಕಾರಣವಾದವರಿಗೆ ಶಾಪ ಹಾಕಿದ್ದಾರೆ ತಾಯಿ.
ಸುಮಾರು 50 ಕೆಜಿ ತೂಗಬಹುದಾದ ಕೃಷ ದೇಹ, ಆ ದೇಹ ತುಂಬೆಲ್ಲ ಗಾಯಗಳು, ಬಾಯಿಯ ಭಾಗದ ಚರ್ಮವನ್ನೆಲ್ಲ ಕಿತ್ತು ಹೊರಬಂದು ವಿಕಾರಗೊಂಡ ಮುಖ, ದೇಹದ ಮೇಲೆ ಎರಡು ತುಂಡಷ್ಟೆ ಬಟ್ಟೆ, ಕೊಳಚೆ ಮೋರಿಯ ಪಕ್ಕ ಅನಾಥವಾಗಿ ಬಿದ್ದ ಸ್ಥಿತಿ, ಯಾವ ತಾಯಿಯೂ ತನ್ನ ಮಗನನ್ನು ಈ ಸ್ಥಿತಿಯಲ್ಲಿ ನೋಡಬಾರದು. ಆದರೆ ರೇಣುಕಾ ಸ್ವಾಮಿಯ (Renuka Swamy) ತಾಯಿಯ ದುರ್ದೈವ ಆಕೆಗೆ ಇಂಥಹಾ ಘನಘೋರ ಸ್ಥಿತಿ ಬಂದೊದಗಿದೆ. ಒಬ್ಬ ತಾಯಿ ತನ್ನ ಮಗನನ್ನು ಹೇಗೆ ನೋಡಬಾರದೋ ಹಾಗೆಯೇ ನೋಡಿದ್ದಾರೆ. ತಾಯಿಯ ಹೃದಯ ಛಿದ್ರವಾಗಿದೆ. ಎಲ್ಲದಕ್ಕೂ ಕಾರಣ ದುಡ್ಡು, ಪ್ರಭಾವ, ‘ಜನಶಕ್ತಿ’ ಹೊಂದಿದ ದುರುಳರು. ಹೌದು, ದರ್ಶನ್ (Darshan), ಪವಿತ್ರಾ ಗೌಡ ಮೇಲಿನ ಆರೋಪ ಇನ್ನೂ ಸಾಬೀತಾಗಿಲ್ಲ, ಆದರೆ ಪ್ರಾಥಮಿಕ ಹಂತದ ತನಿಖೆಯಲ್ಲಿ ದೊರೆತ ಎಲ್ಲ ಸಾಕ್ಷ್ಯಗಳು ಬೊಟ್ಟು ಮಾಡುತ್ತಿರುವುದು ಆ ಇಬ್ಬರ ಕಡೆಗೆ.
ಮನೆಗೆ ಆಧಾರವಾಗಿದ್ದ ಮಗನನ್ನು ಕ್ಷುಲ್ಲಕ ಕಾರಣಕ್ಕೆ ಕಳೆದುಕೊಂಡ ತಾಯಿ ರತ್ನಪ್ರಭಾ, ಮಗನ ಕೊಂದವರಿಗೆ ಶಾಪ ಹಾಕಿದ್ದಾರೆ. ಮಗ ಇನ್ನಿಲ್ಲವಾದ ನೋವಿನಲ್ಲಿಯೇ ನಿನ್ನೆ ಮಾಧ್ಯಮಗಳ ಮುಂದೆ ಮಾತನಾಡಿದ ರತ್ನಪ್ರಭಾ, ಪದೇ ಪದೇ ಹೇಳಿದ್ದು ಒಂದೇ ಮಾತು, ‘ನನ್ನ ಮಗನಂತೆ ದರ್ಶನ್ ಸಹ ಸಾಯಲಿ’ ಎಂದು. ಅದನ್ನು ಬಿಟ್ಟರೆ ಆ ತಾಯಿಯ ಬಾಯಿಂದ ಮತ್ತೇನೂ ಬಂದಿರಲಿಲ್ಲ.
ರೇಣುಕಾ ಸ್ವಾಮಿಯ ತಾಯಿ ರತ್ನಪ್ರಭಾ ಇಂದು (ಜೂನ್ 12) ಟಿವಿ9 ಜೊತೆ ವಿವರವಾಗಿ ಮಾತನಾಡಿದ್ದು, ಮಾತನಾಡುವ ವೇಳೆ ಹಲವು ಬಾರಿ ಮಗನಿಗೆ ಬಂದೊದಗಿದ ದುಸ್ತಿತಿ ನೆನಸಿ ಕಣ್ಣೀರಾದರು. ಉಕ್ಕಿ ಬರುತ್ತಿದ್ದ ದುಃಖದಲ್ಲಿಯೇ ದರ್ಶನ್ಗೆ ಹಿಡಿ ಶಾಪ ಹಾಕಿದರು. ಒಂದು ಅಮಾಯಕ ಜೀವವನ್ನು ತೆಗೆದ ಯಾರೇ ಆಗಲಿ ಅವರು ಸಾಮಾಜಿಕ ಜೀವನದಲ್ಲಿ ಮುಂದುವರೆಯಬಾರದು, ಅವರನ್ನು ನಾಗರೀಕ ಸಮಾಜದಿಂದ ಬಹಿಷ್ಕರಿಸಬೇಕು ಎಂಬುದು ಆ ತಾಯಿಯ ಮಾತಿನ ತಾತ್ಪರ್ಯವಾಗಿತ್ತು.
ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ, ದರ್ಶನ್ ಮೇಲೆ ರೌಡಿಶೀಟರ್? ಗೃಹ ಸಚಿವರು ಹೇಳಿದ್ದೇನು ನೋಡಿ
ತನಗೆ ಪ್ರಿಯವಾದ ಮಹಿಳೆಗೆ ಹಿಂಸೆಯ ಮೂಲಕ ‘ನ್ಯಾಯ’ ಕೊಡಿಸಲು ಹೋಗಿ ಒಬ್ಬ ತಾಯಿ, ಒಬ್ಬ ಮಡದಿ, ಸಹೋದರಿ ಮೂವರು ಮಹಿಳೆಯರ ಜೀವನವನ್ನೇ ಕಿತ್ತುಕೊಳ್ಳಲಾಗಿದೆ. ರೇಣುಕಾ ಸ್ವಾಮಿಯ ಪತ್ನಿ ಈಗ ಗರ್ಭಿಣಿ, ಹುಟ್ಟಲಿರುವ ಕೂಸಿನ ತಂದೆಯನ್ನೇ ದೂರ ಮಾಡಿದವರಿಗೆ ತಾಯಿ ಶಾಪ ಹಾಕಿದ್ದಾಳೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಕೊಲೆಗೆ ಸಹರಿಸಿದ ಇನ್ನೂ ಕೆಲವರ ಬಂಧವಾಗಿದೆ. ಬಂಧಿತರಿಗೆ ನಿನ್ನೆ (ಜೂನ್ 11) ರಾತ್ರಿ ಬಿರಿಯಾನಿ ಭೋಜನವನ್ನೂ ನೀಡಲಾಗಿದೆ. ದರ್ಶನ್ ಮನೆಗೆ ಭದ್ರತೆ ನೀಡಲಾಗಿದೆ, ದರ್ಶನ್ ಜಾಮೀನಿಗಾಗಿ ಕೆಲವು ಹೈಪ್ರೊಫೈಲ್ ಲಾಯರ್ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ರೇಣುಕಾ ಸ್ವಾಮಿ ಮನೆ ಚಿತ್ರಣ ಭಿನ್ನವಾಗಿದೆ. ಅಲ್ಲಿ ಅಳು, ದುಃಖದ ಹೊರತಾಗಿ ಇನ್ನೇನೂ ಇಲ್ಲ. ರಾಜ್ಯದ ಪೊಲೀಸ್ ವ್ಯವಸ್ಥೆ, ನ್ಯಾಯ ವ್ಯವಸ್ಥೆ ಬಡವರ ಪರವಾಗಿ, ನ್ಯಾಯದ ಪರವಾಗಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಈ ಪ್ರಕರಣ ಒಂದು ಅಳತೆಗೋಲಾಗಲಿದೆ. ಇಷ್ಟು ಸಾಕ್ಷ್ಯಗಳು ದೊರೆತ ಹೊರತಾಗಿಯೂ ಆರೋಪಿಗಳು ತಪ್ಪಿಸಿಕೊಂಡರೆ ಬಡವ ನ್ಯಾಯ ವ್ಯವಸ್ಥೆ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳಲಿದ್ದಾನೇನೋ?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Wed, 12 June 24