ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ಗೆ ಮನೆ ಊಟ ಬೇಕೆಂದು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು (ಆಗಸ್ಟ್ 20) ನಡೆಯಲಿದೆ. ಮನೆ ಊಟ, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ನಟ ದರ್ಶನ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯಲ್ಲಿ ಆರೋಗ್ಯದ ಕಾರಣ ನೀಡಿದ್ದರು. ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ನಡೆಸಲಿದೆ.
ಕಳೆದ ಬಾರಿ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈಗಾಗಲೇ ವರದಿ ಸಲ್ಲಿಕೆ ಆಗಲಿದ್ದು, ಇಂದು ಹೈಕೋರ್ಟ್ ಏಕ ಸದಸ್ಯ ಪೀಠ ತನ್ನ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ. ಜೈಲು ಅಧಿಕಾರಿಗಳು, ಮನೆ ಊಟದ ಅವಶ್ಯಕತೆ ಇಲ್ಲವೆಂದೇ ವರದಿ ನೀಡಿದ್ದಾರೆ ಎನ್ನಲಾಗಿದೆ. ಜೈಲಿನ ವೈದ್ಯಾಧಿಕಾರಿಗಳು ಸಹ ದರ್ಶನ್ಗೆ ಮನೆ ಊಟದ ಅವಶ್ಯಕತೆ ಇಲ್ಲವೆಂದೇ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಸುಮಾರು 200 ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಿದ್ದು ಅವುಗಳಲ್ಲಿ ಸಾಂಧರ್ಭಿಕ ಸಾಕ್ಷಿಗಳು, ಡಿಜಿಟಲ್ ಸಾಕ್ಷಿಗಳು, ಸಿಸಿಟಿವಿ ಫುಟೇಜ್ಗಳು ಇನ್ನೂ ಕೆಲವು ಹಲವು ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಇವುಗಳ ಸತ್ಯಾಸತ್ಯತೆ ತಿಳಿಯಲು ಇವುಗಳನ್ನು ಹೈದರಾಬಾದ್ ಮತ್ತು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅವುಗಳಲ್ಲಿ ಸುಮಾರು 70% ಸಾಕ್ಷ್ಯಗಳ ಎಫ್ಎಸ್ಎಲ್ ವರದಿಗಳು ಪೊಲೀಸರ ಕೈ ಸೇರಿವೆ. ಇನ್ನುಳಿದ ಸಾಕ್ಷ್ಯಗಳ ಎಫ್ಎಸ್ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಹೈದರಾಬಾದ್ಗೆ ಕಳಿಸಲಾಗಿರುವ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಉಪಕರಣಗಳು, ಸಿಸಿ ಕ್ಯಾಮೆರಾ, ಆಡಿಯೋ ಸ್ಯಾಂಪಲ್ಸ್, ಮೊಬೈಲ್ ಡೇಟಾ ರಿಪೋರ್ಟ್ ಎಫ್ಎಸ್ಎಲ್ ವರದಿಗಳು ಮಾತ್ರವೇ ಬರಬೇಕಿದೆ. ಇನ್ನು 30% ವರದಿಗಳು ಮಾತ್ರವೇ ಬರಬೇಕಿದ್ದು, ಈ ವರದಿಗಳು ಇದೇ ವಾರದಲ್ಲಿ ಪೊಲೀಸರ ಕೈ ಸೇರಲಿವೆ ಎನ್ನಲಾಗುತ್ತಿದೆ. ಡಿಜಿಟಲ್ ಡಾಟಾ ರಿಟ್ರೀವ್ ಮಾಡುವ ಡಿವೈಸ್ಗಳಲ್ಲಿ ಐಫೋನ್ಗಳು ಸಹ ಇದ್ದು, ಇವುಗಳ ಡಾಟಾ ರಿಟ್ರೀವ್ಗೆ ಹೆಚ್ಚಿನ ಸಮಯ ಹಿಡಿಯುತ್ತಿದೆ ಎನ್ನಲಾಗುತ್ತಿದೆ.
ಈಗಾಗಲೇ ಚಾರ್ಜ್ ಶೀಟ್ ತಯಾರಿ ಪ್ರಕ್ರಿಯೆ ಪ್ರಾರಂಭ ಆಗಿದ್ದು, ಎಫ್ಎಸ್ಎಲ್ ವರದಿ ಬಂದ ಬಳಿಕ ಚಾರ್ಜ್ಶೀಟ್ ತಯಾರಿ ಪ್ರಕ್ರಿಯೆಗೆ ವೇಗ ಸಿಗಲಿದೆ. ಇನ್ನು 20 ದಿನಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ದರ್ಶನ್ ಹಾಗೂ ಸಂಗಡಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಕ್ಯಾಬ್ ಡ್ರೈವರ್ ಅನು ಕುಮಾರ್ ಸಹ ಜಾಮೀನು ಸಲ್ಲಿಕೆಗೆ ಸರ್ಜಿ ಸಲ್ಲಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ