ಬುದ್ಧಿವಾದ ಹೇಳಿದ್ದಕ್ಕೆ ಕತ್ತುಕೊಯ್ದು ಪರಾರಿಯಾದ ದರ್ಶನ್ ಅಭಿಮಾನಿಗಳು

|

Updated on: Sep 29, 2024 | 12:16 PM

Darshan Thoogudeepa: ಬುದ್ಧಿವಾದ ಹೇಳಲು ಮುಂದಾದ ಹಿರಿಯ ವ್ಯಕ್ತಿಯ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾರೆ ದರ್ಶನ್ ಅಭಿಮಾನಿಗಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ದರ್ಶನ್ ಅಭಿಮಾನಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬುದ್ಧಿವಾದ ಹೇಳಿದ್ದಕ್ಕೆ ಕತ್ತುಕೊಯ್ದು ಪರಾರಿಯಾದ ದರ್ಶನ್ ಅಭಿಮಾನಿಗಳು
Follow us on

ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ತನ್ನ ಪ್ರೇಯಸಿಯ ಮನಸ್ಸು ಗೆಲ್ಲಲು ಹೋಗಿ ಒಂದು ಜೀವವೇ ಹೋಗಲು ಕಾರಣವಾಗಿದ್ದಾರೆ. ದರ್ಶನ್, ಜೈಲಿನ ಒಳಗೆ ತಮ್ಮ ಎಂದಿನ ದುರ್ನಡತೆ ಜಾರಿಯಲ್ಲಿಟ್ಟಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವು ರೌಡಿ ಶೀಟರ್​ಗಳ ಜೊತೆ ಸೇರಿಕೊಂಡು ಮೋಜು-ಮಸ್ತಿಯಲ್ಲಿ ತೊಡಗಿದ್ದ ದರ್ಶನ್ ಅನ್ನು ಬಳ್ಳಾರಿ ಜೈಲಗೆ ಸ್ಥಳಾಂತರ ಮಾಡಲಾಗಿದೆ. ಇಲ್ಲಿಯೂ ಸಹ ಜೈಲು ಅಧಿಕಾರಿಗಳೊಂದಿಗೆ ಪ್ರತಿದಿನ ಒಂದಲ್ಲ ಒಂದು ವಿಷಯಕ್ಕೆ ಜಗಳ, ಕಿರಿಕ್ ಮಾಡಿಕೊಳ್ಳುತ್ತಲೇ ಇದ್ದಾರೆ ಎನ್ನಲಾಗುತ್ತಿದೆ. ಇನ್ನು ಹೊರಗಡೆ ದರ್ಶನ್​ರ ಅಭಿಮಾನಿಗಳು, ದರ್ಶನ್ ಜೈಲು ಸೇರಿದಾಗಿನಿಂದಲೂ ಅವರ ದುರ್ನಡತೆ ಜಾರಿಯಲ್ಲಿದೆ. ಇತರೆ ನಟ, ನಟಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಸೊಂಟದ ಕೆಳಗಿನ ಭಾಷೆ ಬಳಸಿ ಬೈಯ್ಯುವುದು, ಮಹಿಳೆಯರನ್ನು ನಿಂದಿಸುವುದು ಚಾಲ್ತಿಯಲ್ಲಿದೆ. ಇದರ ನಡುವೆ ಇದೀಗ ಕೊಲೆ ಮಾಡುವ ಹಂತವನ್ನೂ ದರ್ಶನ್​ ಅಭಿಮಾನಿಗಳು ಮುಟ್ಟಿದ್ದಾರೆ.

ರಾಮನಗರದಲ್ಲಿ, ದರ್ಶನ್ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದಕ್ಕಾಗಿ ವ್ಯಕ್ತಿಯೊಬ್ಬನ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಆ ವ್ಯಕ್ತಿ ಜೀವಕ್ಕೆ ಹಾನಿ ಆಗಿಲ್ಲ. ಆಗಿರುವುದಿಷ್ಟು, ರಾಮನಗರದ ಸೂಲಿಕೆರೆಪಾಳ್ಯದ ಕಟ್ಟಡವೊಂದು ನಿರ್ಮಾಣ ಮಾಡಲಾಗುತ್ತಿತ್ತು. ಆ ಕಟ್ಟಡದ ಮೇಸ್ತ್ರಿ ಆಗಿದ್ದ ವೆಂಕಟಸ್ವಾಮಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಳಿಯೇ ಷೆಡ್ ಹಾಕಿಕೊಂಡು ಇತರೆ ಕೆಲ ಕೆಲಸಗಾರರ ಜೊತೆಗೆ ವಾಸವಿದ್ದರು. ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಕೆಲ ಆರೋಪಿಗಳು ಷೆಡ್​ ಬಳಿ ದರ್ಶನ್ ಬಗ್ಗೆ ಮಾತನಾಡುತ್ತಿದ್ದರು. ಆ ಬಳಕ ಏಕಾ-ಏಕಿ ‘ಡಿ-ಬಾಸ್’ ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಆಗ ಷೆಡ್​ನಲ್ಲಿ ಮಲಗಿದ್ದ ವೆಂಕಟಸ್ವಾಮಿ, ಯಾಕೆ ಹೀಗೆ ಕೂಗುತ್ತೀರ, ಇಲ್ಲೆಲ್ಲ ಮನೆಗಳಿವೆ, ಬೇರೆ ಕಡೆ ಹೋಗಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆ: ಕಾರಣ?

ಇಷ್ಟಕ್ಕೆ ಸಿಟ್ಟಾದ ಇಬ್ಬರು ದರ್ಶನ್ ಅಭಿಮಾನಿಗಳು, ‘ಏನೋ ದರ್ಶನ್ ಬಗ್ಗೆ ಮಾತನಾಡುತ್ತೀಯ? ಅವರ ಬಗ್ಗೆ ನಿನಗೇನು ಗೊತ್ತು? ಎಂದು ಕೂಗಾಡುತ್ತಾ ಹಲ್ಲೆ ಮಾಡಿದ್ದಾರೆ. ಈ ಸಮಯದಲ್ಲಿ ಕಿರಣ ಎಂಬುವ ದರ್ಶನ್ ಅಭಿಮಾನಿಯೊಬ್ಬ ಚಾಕು ತೆಗೆದುಕೊಂಡು ವೆಂಕಟಸ್ವಾಮಿಯ ಕತ್ತು ಸಹ ಕೊಯ್ದಿದ್ದಾನೆ. ಆತನ ಜೊತೆಗೆ ಮಹದೇವ ಎಂಬಾತ ವೆಂಕಟಸ್ವಾಮಿ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಕಾಳಯ್ಯ ಎಂಬುವರು ಜಗಳ ಬಿಡಿಸಿದ್ದಾರೆ. ಕುತ್ತಿಗೆ ಗಾಯಗೊಂಡು ರಕ್ತಸ್ರಾವವಾಗಿದ್ದ ವೆಂಕಟಸ್ವಾಮಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆತ ಕಾರಣ ವೆಂಕಟಸ್ವಾಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಕುರಿತು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಬಳಿಕ ಆರೋಪಿಗಳಾದ ಕಿರಣ್ ಹಾಗೂ ಮಹದೇವ್ ಇಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಹಿಂದೆ ಸಹ ದರ್ಶನ್ ಅಭಿಮಾನಿಗಳು ಈ ರೀತಿಯ ರೌಡಿತನ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪ್ರಕರಣಗಳು ದಾಖಲಾಗಿವೆ. ಹಿರಿಯ ನಟ ಜಗ್ಗೇಶ್ ಮೇಲೆ ದಾಳಿ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಉಮಾಪತಿ ಶ್ರೀನಿವಾಸ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ ಕಾರಣ ಕೆಲವರ ಬಂಧನ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ