AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆ: ಕಾರಣ?

Darshan Thoogudeepa: ದರ್ಶನ್ ತೂಗುದೀಪ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ ಇಂದು ಯಾವುದೇ ವಾದ ಮಂಡನೆ ಮಾಡದೆ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ಕಾರಣವೇನು?

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆ: ಕಾರಣ?
ದರ್ಶನ್-ರೇಣುಕಾಸ್ವಾಮಿ
ಮಂಜುನಾಥ ಸಿ.
|

Updated on:Sep 27, 2024 | 3:49 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದ್ದು, ಆದರೆ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ವಾದ ಮಂಡನೆಗೆ ಕಾಲಾವಕಾಶವನ್ನು ದರ್ಶನ್ ಪರ ವಕೀಲರು ಕೇಳಿದ ಕಾರಣದಿಂದಾಗಿ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ಈ ಹಿಂದೆ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಪರ ವಕೀಲರು, ಎಸ್​ಪಿಪಿ ಪ್ರಸನ್ನ ಅವರು ಆಕ್ಷೇಪಣೆ ಸಲ್ಲಿಸಲು ತಡ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಈಗ ಆಕ್ಷೇಪಣೆ ಸಲ್ಲಿಸಿದ ಮೇಲೆ ತಾವೇ ಈಗ ವಿಚಾರಣೆಯನ್ನು ಮುಂದಕ್ಕೆ ಹಾಕಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಖುದ್ದು ಹಿರಿಯ ವಕೀಲರು ಸಿವಿ ನಾಗೇಶ್ ಅವರು ಬರಬೇಕಾಗಿದ್ದು, ಅವರು ಬರದೇ ಇರುವ ಕಾರಣಕ್ಕೆ ಅವರ ಸಹಾಯಕ ವಕೀಲರು ಪ್ರಕರಣದಲ್ಲಿ ಇನ್ನಷ್ಟು ದಿನದ ಕಾಲಾವಕಾಶವನ್ನು ಕೇಳಿದ್ದಾರೆ. ವಾದ ಮಂಡನೆಗೆ ದರ್ಶನ್ ಪರ ವಕೀಲರು ಕಾಲಾವಕಾಶ ಕೇಳಿದ ಬೆನ್ನಲ್ಲೆ, ಎಸ್​ಪಿಪಿ ಪ್ರಸನ್ನ ಅವರು ಮಾತನಾಡಿ, ‘ಆಕ್ಷೇಪಣೆ ಸಲ್ಲಿಸಿಲ್ಲವೆಂದು ದರ್ಶನ್ ವಕೀಲರು ತಕರಾರು ತೆಗೆಯುತ್ತಿದ್ದರು…. ಈಗ ಆಕ್ಷೇಪಣೆ ಸಲ್ಲಿಸಿದ್ದೇವೆ ವಾದ ಮಂಡನೆಗೆ ಸಿದ್ದ ಇದ್ದೇವೆ’ ಎಂದು ಕೋರ್ಟ್​ಗೆ ಹೇಳಿದರು. ಆದರೆ ದರ್ಶನ್ ಪರ ವಕೀಲರು ಸಮಯ ಕೇಳಿದ್ದರಿಂದ ಸೆಪ್ಟೆಂಬರ್ 30ಕ್ಕೆ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದರು.

ಇದೇ ತಿಂಗಳ 21ರಂದು ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ತಕರಾರು ಸಲ್ಲಿಸಲು ಎಸ್​ಪಿಪಿ ಅವರು ತಡ ಮಾಡಿದ್ದ ಕಾರಣ ಎರಡು ಬಾರಿ ವಿಚಾರಣೆ ಮುಂದೂಡಿ ಸೆಪ್ಟೆಂಬರ್ 27ಕ್ಕೆ ವಿಚಾರಣೆ ನಿಗದಿಯಾಗಿತ್ತು. ಆದರೆ ಇಂದು ದರ್ಶನ್ ಪರ ವಕೀಲರೆ ವಿಚಾರಣೆಗೆ ಕಾಲಾವಕಾಶ ಕೋರಿದ ಕಾರಣ ಪ್ರಕರಣವನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ಇನ್ನು ಇದೇ ದಿನ ಪವಿತ್ರಾ ಗೌಡ ಜಾಮೀನು ಅರ್ಜಿಯೂ ವಿಚಾರಣೆ ಇದ್ದು, ಹಿರಿಯ ವಕೀಲ ಸೆಬಾಸ್ಟಿಯನ್ ಅವರು ಪವಿತ್ರಾ ಗೌಡ ಪರವಾಗಿ ವಾದ ಮಂಡಿಸಿದ್ದಾರೆ.

ಜೂನ್ ತಿಂಗಳಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಆರಂಭದ ಹಲವು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಮಯ ಕಳೆದ ದರ್ಶನ್, ಅಲ್ಲಿ ರಾಜಾತಿಥ್ಯ ಸ್ವೀಕರಿಸಿದ ಆರೋಪ ಹೊತ್ತು ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡರು. ಬಳ್ಳಾರಿ ಜೈಲಿಗೆ ದರ್ಶನ್ ಬಂದು ಒಂದು ತಿಂಗಳಾಗಿದೆ. ಜಾಮೀನು ದೊರಕುವ ಉಮೇದಿನಲ್ಲಿ ನಟ ದರ್ಶನ್ ಇದ್ದಾರೆ. ಸೆಪ್ಟೆಂಬರ್ 30 ರಂದು ಹಿರಿಯ ವಕೀಲ ಸಿವಿ ನಾಗೇಶ್ ಅವರೇ ದರ್ಶನ್ ಪರವಾಗಿ ವಾದ ಮಂಡಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Fri, 27 September 24