
ದರ್ಶನ್ (Darshan Thoogudeepa), ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧಿತರಾಗಿ ಪರಪ್ಪನ ಅಗ್ರಹಾರದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ಚಾಲ್ತಿ ಆಗಲಿದೆ. ದರ್ಶನ್ ಮೇಲೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಜೊತೆಗೆ ದರ್ಶನ್ ಮನೆಯಲ್ಲಿ ಸಿಕ್ಕಿದ್ದ 82 ಲಕ್ಷ ರೂಪಾಯಿ ಹಣಕ್ಕೆ ಸಂಬಂಧಿಸಿದಂತೆ ಪ್ರಕರಣವೂ ದಾಖಲಾಗಿತ್ತು. ಈ ಹಣವನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ಬಳಸಿದ್ದರು ಎನ್ನಲಾಗಿತ್ತು. ಹಣದ ಮೂಲದ ಬಗ್ಗೆ ತನಿಖಾಧಿಕಾರಿಗಳಿಗೆ ಅನುಮಾನಗಳಿದ್ದವು, ಇದೀಗ ನಟ ದರ್ಶನ್, ಹಣದ ಮೂಲದ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಣದ ಮೂಲ ಪತ್ತೆ ಆಗದ ಕಾರಣ ಹಣವನ್ನು ಆದಾಯ ತೆರಿಗೆ ಇಲಾಖೆಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖಾಧಿಖಾರಿಗಳು ಒಪ್ಪಿಸಿದ್ದರು. ಇದೀಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದರ್ಶನ್, ಹಣದ ಮೂಲದ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಕೃಷಿ ಮತ್ತು ಪಶುಸಂಗೋಪನೆಯಿಂದ ತಮಗೆ ಆ ಹಣ ಬಂದಿದೆಯೆಂದು ನಟ ದರ್ಶನ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ. ಆ ಹಣಕ್ಕೆ ತಮ್ಮ ಬಳಿ ದಾಖಲೆ ಇಲ್ಲವೆಂದು ಸಹ ಹೇಳಿದ್ದಾರೆ. ಅಲ್ಲದೆ, ಐಟಿ ರಿಟರ್ನ್ಸ್ ವೇಳೆ ಈ ಹಣದ ಬಗ್ಗೆ ಮಾಹಿತಿ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಮೂರು ವರ್ಷಗಳಿಂದ ಕೃಷಿ ಮತ್ತು ಪಶುಸಂಗೋಪನೆಯಿಂದ 25 ಲಕ್ಷ ರೂಪಾಯಿ ಹಣ ಗಳಿಕೆ ಮಾಡಿದ್ದೇನೆ, ಜೊತೆಗೆ 15 ಲಕ್ಷ ರೂಪಾಯಿ ಅಭಿಮಾನಿಗಳು ಮತ್ತು ಆಪ್ತರಿಂದ ಹುಟ್ಟುಹಬ್ಬದ ಉಡುಗೊರೆಯಾಗಿ ಬಂದಿದೆ. ಇನ್ನುಳಿದ ಹಣಕ್ಕೆ ನನ್ನಲ್ಲಿ ದಾಖಲೆಗಳು ಇಲ್ಲ ಆದರೆ ಐಟಿ ರಿಟರ್ನ್ಸ್ ವೇಳೆ ಎಲ್ಲದಕ್ಕೂ ದಾಖಲೆ ಸಹಿತ ಮಾಹಿತಿ ನೀಡಲಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.
ಇದನ್ನೂ ಓದಿ:ದರ್ಶನ್ ಪ್ರಕರಣದ ಬಗ್ಗೆ ನಟ ಝೈದ್ ಖಾನ್ ಮಾತು
ಸಾಲದ ಬಗ್ಗೆ ಮಾಹಿತಿ ನೀಡಿರುವ ನಟ ದರ್ಶನ್, ಮೋಹನ್ ರಾಜ್ ಎಂಬುವರಿಗೆ ನಗದು ಸಾಲ ನೀಡಿ ಮರಳಿ ಪಡೆದಿದ್ದೆ ಎಂದಿದ್ದಾರೆ. ಮೋಹನ್ ರಾಜ್ ಅವರಿಗೆ 2024ರ ಫೆಬ್ರವರಿಯಲ್ಲಿ ನಗದು ಹಣ ಸಾಲವಾಗಿ ನೀಡಿದ್ದೆ ಬಳಿಕ ಮೇನಲ್ಲಿ ವಾಪಸ್ ಪಡೆದಿದ್ದೆ ಎಂದು ಹೇಳಿದ್ದಾರೆ. ಅಲ್ಲದೆ ಕಳೆದ ಆರು ವರ್ಷದಿಂದ ಯಾವುದೇ ಸಾಲ ಪಡೆದಿಲ್ಲ ಹಾಗೂ ಮೋಹನ್ ರಾಜ್ ಹೊರತಾಗಿ ಇನ್ಯಾರಿಗೂ ಸಾಲ ನೀಡಿಲ್ಲ ಎಂದು ಹೇಳಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನವಾದ ಬಳಿಕ ದರ್ಶನ್, ವಿಜಯಲಕ್ಷ್ಮೀ, ಪ್ರದೋಶ್, ನಿಖಿಲ್, ಕೇಶವಮೂರ್ತಿ ಮನೆಗಳಲ್ಲಿ 82 ಲಕ್ಷ ಹಣ ಸಿಕ್ಕಿತ್ತು. ಈ ಹಣವನ್ನು ರೇಣುಕಾ ಸ್ವಾಮಿ ಕೊಲೆ ಮುಚ್ಚಿ ಹಾಕಲು ದರ್ಶನ್ ಬಳಸಿದ್ದರು ಎನ್ನಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ