ಹುಚ್ಚಾಟ ಮೆರೆದ ದರ್ಶನ್ ಅಭಿಮಾನಿಯ ಎಳೆದೊಯ್ದ ಪೊಲೀಸರು

|

Updated on: Aug 30, 2024 | 1:53 PM

Darshan Thoogudeepa: ದರ್ಶನ್ ನಟನೆಯ ‘ಕರಿಯ’ ಸಿನಿಮಾದ ಮರು ಬಿಡುಗಡೆ ವೇಳೆ ದರ್ಶನ್ ಅಭಿಮಾನಿಗಳು ಕೆಲವರು ಮೇರೆ ಮೀರಿ ವರ್ತಿಸಿದ್ದು, ದರ್ಶನ್​ರ ಅಭಿಮಾನಿಗಳು ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಭಿಮಾನಿಗಳ ಮೇಲೆ ಲಾಠಿ ಪ್ರಹಾರವೂ ನಡೆದಿದೆ.

ಹುಚ್ಚಾಟ ಮೆರೆದ ದರ್ಶನ್ ಅಭಿಮಾನಿಯ ಎಳೆದೊಯ್ದ ಪೊಲೀಸರು
Follow us on

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಸಹಜವಾಗಿಯೇ ದರ್ಶನ್ ಅಭಿಮಾನಿಗಳು ಈ ಬಗ್ಗೆ ಬೇಸರಗೊಂಡಿದ್ದಾರೆ. ಆದರೆ ಈ ಸಮಯವನ್ನು ‘ಸದುಪಯೋಗ’ ಪಡಿಸಿಕೊಳ್ಳುತ್ತಿರುವ ಕೆಲವು ನಿರ್ಮಾಪಕರು, ವಿತರಕರು ದರ್ಶನ್​ರ ಹಳೆಯ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಇಂದು (ಆಗಸ್ಟ್ 30) ದರ್ಶನ್ ನಟನೆಯ ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗಿದೆ. ಸಹಜವಾಗಿಯೇ ದರ್ಶನ್ ಅಭಿಮಾನಿಗಳು ಅತರೇಕರ ಅಭಿಮಾನದಿಂದ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಆದರೆ ಕೆಲ ಅಭಿಮಾನಿಗಳು ಮೇರೆ ಮೀರಿ ವರ್ತಿಸಿದ್ದು, ಅಂಥಹಾ ಕೆಲವರನ್ನು ಪೊಲೀಸರು ಎಳೆದೊಯ್ದಿದ್ದಾರೆ. ಕೆಲವರಿಗೆ ಲಾಠಿ ಏಟಿನ ರುಚಿ ತೋರಿಸಿದ್ದಾರೆ.

ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಪ್ರಸನ್ನ ಚಿತ್ರಮಂದಿರದಲ್ಲಿ ‘ಕರಿಯ’ ಸಿನಿಮಾದ ಮರು ಬಿಡುಗಡೆ ಆಗಿದೆ. ಬೆಳಿಗಿನಿಂದಲೇ ದರ್ಶನ್ ಅಭಿಮಾನಿಗಳು, ದರ್ಶನ್​ರ ಆರೋಪಿ ಸಂಖ್ಯೆ ಹೊಂದಿರುವ ಕಟೌಟ್, ಬ್ಯಾನರ್​ಗಳನ್ನು ಚಿತ್ರಮಂದಿರದ ಹೊರಗೆ ಹಾಕಿದ್ದಾರೆ. ಅದರ ಜೊತೆಗೆ ದರ್ಶನ್, ಜೈಲಿನಲ್ಲಿ ಸಿಗರೇಟು ಸೇದುತ್ತಾ ಕೂತಿದ್ದ ಪೋಸ್ಟರ್ ಹಾಕಿದ್ದಾರೆ. ಮಾಧ್ಯಮಗಳ ಮೇಲಿನ ಸಿಟ್ಟಿನಿಂದ ದರ್ಶನ್ ಹೇಳಿದ್ದ ‘ಏನ್ರಿ ಮೀಡಿಯಾ’ ಎಂಬ ಕಟೌಟ್ ಅನ್ನು ಸಹ ಅಭಿಮಾನಿಗಳು ಹಾಕಿದ್ದರು. ಇದೆಲ್ಲದರ ನಡುವೆ ಸಿನಿಮಾ ಪ್ರದರ್ಶನವಾಗುವಾಗ ಮಾಧ್ಯಮಗಳ ವಿರುದ್ಧ ಅಭಿಮಾನಿಗಳು ಘೋಷಣೆ ಸಹ ಕೂಗಿದ್ದರು.

ಇದನ್ನೂ ಓದಿ:ದರ್ಶನ್ ರಾಜಾತಿಥ್ಯ ಪ್ರಕರಣ; ಇನ್ನೊಂದು ಫೋಟೊ ನಮಗೆ ಸಿಕ್ಕಿದೆ: ಬಿ ದಯಾನಂದ, ಪೊಲೀಸ್ ಆಯುಕ್ತ

ಪೊಲೀಸರು ಮೊದಲಿಗೆ ಈ ಬಗ್ಗೆ ಎಚ್ಚರಿಕೆ ನೀಡಿ, ಶಾಂತರೀತಿಯಲ್ಲಿ ವರ್ತಿಸುವಂತೆ ಮನವಿ ಮಾಡಿದ್ದರು. ಆದರೆ ಸಮಯ ಕಳೆದಂತೆ ದರ್ಶನ್ ಅಭಿಮಾನಿಗಳ ಹುಚ್ಚಾಟ ಹೆಚ್ಚಾಗಿದ್ದು, ವರದಿಗೆ ತೆರಳಿದ್ದ ಕೆಲ ಮಾಧ್ಯಮ ಪ್ರತಿನಿಧಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರನ್ನೂ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಚಿತ್ರಮಂದಿರಕ್ಕೆ ಬರುತ್ತಿದ್ದಂತೆ ಕೆಲ ಅಭಿಮಾನಿಗಳು ಪರಾರಿಯಾದರೆ, ಕೆಲವರು ಒಳಗೆ ಬಾಗಿಲು ಹಾಕಿಕೊಂಡಿದ್ದಾರೆ. ಕೈಗೆ ಸಿಕ್ಕ ಕೆಲವು ಅಭಿಮಾನಿಗಳನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಗಲಾಟೆ ಮಾಡುತ್ತಿದ್ದ ಇನ್ನು ಕೆಲವು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿ ಓಡಿಸಿದ್ದಾರೆ.

ಇನ್ನು ಬಳ್ಳಾರಿ ಜೈಲಿನ ಬಳಿಯೂ ಸಹ ನಿನ್ನೆ ದರ್ಶನ್ ಅಭಿಮಾನಿಗಳು ಜಮಾವಣೆ ಆಗಿದ್ದಾಗ ಅಲ್ಲಿಯೂ ಸಹ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯಂತೂ ದರ್ಶನ್ ಅಭಿಮಾನಿಗಳಿಗೆ ಹಿಗ್ಗಾ-ಮುಗ್ಗ ಬೈದಿದ್ದು, ನಿಮ್ಮಂದಲೇ ಆ ವ್ಯಕ್ತಿಗೆ ಕಳಂಕ ಹತ್ತುತ್ತಿದೆ. ನಿಮ್ಮಂಥಹವರಿಂದಲೇ ದರ್ಶನ್​ಗೆ ಇಂದು ಈ ಗತಿ ಬಂದಿದೆ ಎಂದು ಬೈದ ಘಟನೆಯೂ ನಡೆದಿದೆ. ಇಂದು (ಆಗಸ್ಟ್ 30) ಬಳ್ಳಾರಿಯಲ್ಲಿ ದರ್ಶನ್ ಅಭಿಮಾನಿಗಳು ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿ ದರ್ಶನ್ ಬಿಡುಗಡೆ ಆಗಬೇಕೆಂದು ಕೋರಿದ್ದಾರೆ. ಅಭಿಮಾನಿಗಳು ದರ್ಶನ್ ಆರೋಪಿ ಸಂಖ್ಯೆಯಾಗಿದ್ದ 6106 ನಂಬರ್ ಹೊಂದಿರುವ ಟಿ-ಶರ್ಟ್ ಧರಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ