ದರ್ಶನ್ ಪ್ರಕರಣದಲ್ಲಿ ಸೇರುತ್ತಲೇ ಇವೆ ಹೊಸ ಸಾಕ್ಷಿಗಳು
Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಕಠಿಣವಾದ ಆರೋಪ ಪಟ್ಟಿಯನ್ನೇ ಪೊಲೀಸರು ಸಿದ್ಧಪಡಿಸಿದ್ದಾರೆ. ಇದರ ನಡುವೆ ಪ್ರಕರಣದ ಸಾಕ್ಷ್ಯಗಳ ಪಟ್ಟಿಗೆ ಇನ್ನೂ ಎರಡು ಸಾಕ್ಷ್ಯಗಳು ಸೇರಿಕೊಂಡಿವೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಸೇರಿ ಮೂರು ತಿಂಗಳಾಗುತ್ತಾ ಬಂದಿದೆ. ಪೊಲೀಸರು ಸಹ ತನಿಖೆ ಮುಗಿಸಿ ಚಾರ್ಜ್ ಶೀಟ್ ಸಲ್ಲಿಸಲು ತಯಾರಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ. ಪ್ರಕರಣದ ಆಳಕ್ಕಿಳಿದಿರುವ ಪೊಲೀಸರಿಗೆ ಸಾಕ್ಷ್ಯಗಳ ಮೇಲೆ ಸಾಕ್ಷ್ಯ ಸಿಗುತ್ತಲೇ ಸಾಗುತ್ತಿವೆ. ಆ ಸಾಕ್ಷ್ಯಗಳ ಪರಿಶೀಲನೆ, ಮರು ಪರಿಶೀಲನೆಗಳನ್ನು ಪೊಲೀಸರು ಮಾಡುತ್ತಿದ್ದಾರೆ. ಇದೀಗ ಇನ್ನೂ ಎರಡು ಹೊಸ ಸಾಕ್ಷ್ಯಗಳನ್ನು ಪಟ್ಟಿಗೆ ಸೇರಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ದರ್ಶನ್ ವಿರುದ್ಧ 4500 ಪುಟಗಳ ಸವಿವರವಾದ ಆರೋಪ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ಪ್ರಕರಣ ಸಂಬಂಧ 100ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಹಲವಾರು ಮಂದಿಯ ಹೇಳಿಕೆಗಳನ್ನು ಪಡೆದು ದಾಖಲಿಸಿದ್ದಾರೆ. 150ಕ್ಕೂ ಹೆಚ್ಚು ಮಟೀರಿಯಲ್ ಎವಿಡೆನ್ಸ್ಗಳನ್ನು ಸಂಗ್ರಹಿಸಿದ್ದಾರೆ. ಡಿಜಿಟಲ್ ಎವಿಡೆನ್ಸ್ಗಳು ಸಹ ದೊಡ್ಡ ಸಂಖ್ಯೆಯಲ್ಲಿವೆ. ಹಲವು ವಸ್ತುಗಳನ್ನು ಬೆಂಗಳೂರು ಹಾಗೂ ಹೈದರಾಬಾದ್ ಎಫ್ಎಸ್ಎಲ್ ಕೇಂದ್ರಕ್ಕೆ ಕಳಿಸಿ ವರದಿ ತರಿಸಿಕೊಳ್ಳಲಾಗಿದೆ. ಇನ್ನು ಎಂಟು ವರದಿಗಳು ಹೈದರಾಬಾದ್ ಎಫ್ಎಸ್ಎಲ್ನಿಂದ ಬರಬೇಕಾಗಿದ್ದು ಆ ಎಂಟು ವರದಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಹದಿನೆಂಟು ವರದಿಗಳು ಹೈದರಾಬಾದ್ ಎಫ್ಎಸ್ಎಲ್ ಕೇಂದ್ರದಿಂದ ಬರಬೇಕಿತ್ತು ಆದರೆ 10 ಮಾತ್ರವೇ ಬಂದಿದ್ದು, ಬಾಕಿ ಇರುವ ವರದಿ ಪಡೆಯಲು ಪೊಲೀಸ್ ಸಿಬ್ಬಂದಿ ಅಲ್ಲಿಯೇ ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ:ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವೆ ಸ್ನೇಹ ಕುದುರಿದ ಹಿಂದಿದೆ ಹಣದ ಡೀಲ್!
ಆರೋಪ ಪಟ್ಟಿ ತಯಾರಿಕೆ, ಸಾಕ್ಷ್ಯ ಸಂಗ್ರಹ ಇನ್ನಿತರೆ ವಿಚಾರಗಳ ಬಗ್ಗೆ ಡಿಜಿಪಿ ಅಲೋಕ್ ಮೋಹನ್, ಆಯುಕ್ತ ದಯಾನಂದ್ ಅವರು ತನಿಖಾಧಿಕಾರಿಗಳೊಟ್ಟಿಗೆ ನಿಯಮಿತ ಚರ್ಚೆಯಲ್ಲಿದ್ದಾರೆ. ಈಗ ತಯಾರಾಗಿರುವ ಆರೋಪ ಪಟ್ಟಿಯ ಬಗ್ಗೆ ವಕೀಲರ ಸಲಹೆಗಳನ್ನು ತೆಗೆದುಕೊಂಡಿದ್ದು, ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶಗಳು ಸಿಗದಂತೆ ಶಿಸ್ತಿನ ಕಟ್ಟು-ನಿಟ್ಟಿನ ಆರೋಪ ಪಟ್ಟಿಯನ್ನು ಸಿದ್ಧಗೊಳಿಸಲಾಗುತ್ತಿದೆ.
ಇದರ ನಡುವೆ ಎರಡು ಲಾರಿಗಳನ್ನು ಸಹ ಸಾಕ್ಷ್ಯಗಳ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಪಟ್ಟಣಗೆರೆ ಶೆಡ್ನಲ್ಲಿದ್ದ ಎರಡು ಲಾರಿಗಳನ್ನು ಮೆಟಿರಿಯಲ್ ಎವಿಡೆನ್ಸ್ ಎಂದು ಪರಿಗಣಿಸಲಾಗಿದ್ದು, ಅವುಗಳ ಮಾಲೀಕರ ಮಾಹಿತಿ ಮತ್ತು ಇತರೆ ಮಾಹಿತಿಗಳನ್ನು ಪಡೆಯಲು ಪೊಲೀಸರು ಆರ್ಟಿಓ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ದರ್ಶನ್ ಮತ್ತು ಗ್ಯಾಂಗ್, ರೇಣುಕಾ ಸ್ವಾಮಿಯನ್ನು ಆ ಲಾರಿಗಳಿಗೆ ನೂಕಿ ಹೊಡೆದಿದ್ದರಂತೆ. ಇದೇ ಕಾರಣಕ್ಕೆ ಆ ಲಾರಿಗಳನ್ನು ಸಹ ಸಾಕ್ಷ್ಯಗಳನ್ನಾಗಿ ಪರಿಗಣಿಸಿ ಸೀಜ್ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ