
ನಟ ದರ್ಶನ್ ತೂಗುದೀಪ (Darshan Thoogudeepa) ಈಗಾಗಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಹೊರಬಂದಿದ್ದು, ಈಗ ಆ ಜಾಮೀನು ರದ್ದಾಗುವ ಸಾಧ್ಯತೆಯಲ್ಲಿದೆ. ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ತಮ್ಮೆಲ್ಲ ಚಟುವಟಿಕೆಗಳನ್ನು ಬಂದ್ ಮಾಡಿ ತಾವಾಯ್ತು, ತಮ್ಮ ಕೆಲಸವಾಯ್ತು ಎಂದಿದ್ದಾರೆ. ಆದರೆ ಅವರ ಕೆಲ ಅಭಿಮಾನಿಗಳು ಮಾತ್ರ ದರ್ಶನ್ ಬಿಟ್ಟಿರುವ ದುಂಡಾವರ್ತನೆಯನ್ನು ಮುಂದುವರೆಸಿಕೊಂಡು ಹೋಗುವ ಪಣ ತೊಟ್ಟಂತಿದೆ. ಇಷ್ಟು ದಿನ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಿದ್ದ ಅಶ್ಲೀಲ ಬೈಗುಳ, ಕೊಲೆ ಬೆದರಿಕೆ ಈಗ ನೇರಾ-ನೇರಾ ಕೊಡಲು ಶುರು ಮಾಡಿದಂತಿದ್ದಾರೆ.
ನಟ ಪ್ರಥಮ್ ಮೊದಲಿನಿಂದಲೂ ದರ್ಶನ್ ಅಭಿಮಾನಿಗಳ ದುರ್ವರ್ತನೆಯನ್ನು ತಮ್ಮದೇ ಶೈಲಿಯಲ್ಲಿ ಖಂಡಿಸುತ್ತಾ, ಅವರಿಗೆ ಬುದ್ಧಿವಾದ ಹೇಳುತ್ತಾ ಬಂದಿದ್ದರು. ದರ್ಶನ್ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಅವರಿಗೆ ನಿಂದಿಸುತ್ತಲೇ ಬಂದಿದ್ದರು. ಆದರೆ ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಕೆಲವರು ಪ್ರಥಮ್ ಅವರಿಗೆ ಆಯುಧಗಳನ್ನು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರಲ್ಲದೆ, ಕೊಲೆ ಮಾಡುವ ಪ್ರಯತ್ನವನ್ನೂ ಮಾಡಿದ್ದಾಗಿ ಸ್ವತಃ ಪ್ರಥಮ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಮತ್ತೆ ದರ್ಶನ್ ಅಭಿಮಾನಿಗಳ ಮೇಲೆ ಆಕ್ರೋಶ ಹೊರಹಾಕಿದ ರಮ್ಯಾ
ಇದೇ ತಿಂಗಳ 22 ರಂದು ನಟ ಪ್ರಥಮ್, ಯಾರೋ ಇನ್ಫ್ಲ್ಯುಯೆನ್ಸರ್ ಒಬ್ಬರು ಕರೆದಿದ್ದಾರೆಂದು ದೊಡ್ಡಬಳ್ಳಾಪುರ ಬಳಿಯ ರಾಮಸ್ವಾಮಿಪಾಳ್ಯ ಎಂಬ ಊರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದರಂತೆ. ಅಲ್ಲಿ ವ್ಯಕ್ತಿಯೊಬ್ಬ ಬಂದು ಬಾಸ್ ಕರೆಯುತ್ತಿದ್ದಾರೆ ಬಾ ಎಂದನಂತೆ. ಬಳಿಕ ಪ್ರಥಮ್ ಅನ್ನು ಕೆಲವರು ಮುತ್ತಿಕೊಂಡರಂತೆ. ಕೊನೆಗೆ ವಿಧಿ ಇಲ್ಲದೆ ಪ್ರಥಮ್ ಕಾರು ಹತ್ತಿ ಹೋಗಿದ್ದಾರೆ. ಅಲ್ಲಿ ರಕ್ಷಕ್ ಬುಲೆಕ್ ಸಹ ಇದ್ದರಂತೆ. ಅಲ್ಲಿ ಕೆಲವರು ಪ್ರಥಮ್ ಹೋದ ವರ್ಷ ದರ್ಶನ್ ಅಭಿಮಾನಿಗಳ ಬಗ್ಗೆ ಆಡಿದ ಮಾತುಗಳನ್ನು ಇರಿಸಿಕೊಂಡು ಬೆದರಿಕೆ ಹಾಕಿದರಂತೆ.
ಒಬ್ಬ ವ್ಯಕ್ತಿಯಂತೂ ಉದ್ದನೆಯ ಡ್ರಾಗರ್ ಆಯುಧವನ್ನು ತೋರಿಸಿ ಅದನ್ನು ಪ್ರಥಮ್ ಅವರ ಹೊಟ್ಟೆಗೆ ಚುಚ್ಚುವಂತೆ ನಟನೆ ಮಾಡುತ್ತಾ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದನಂತೆ. ಈ ಎಲ್ಲ ಘಟನೆ ನಡೆಯುವಾಗ ರಕ್ಷಕ್ ಬುಲೆಟ್ ಅಲ್ಲಿಯೇ ಇದ್ದರಂತೆ. ಈ ವಿಷಯವನ್ನು ಸ್ವತಃ ಪ್ರಥಮ್ ಟಿವಿ9 ಬಳಿ ಹೇಳಿಕೊಂಡಿದ್ದಾರೆ. ಘಟನೆ ಬಳಿಕ ಈ ವಿಷಯದ ಬಗ್ಗೆ ಪ್ರಥಮ್ ಅವರು ಬೆಂಗಳೂರು ಗ್ರಾಮಾಂತರ ಎಸ್ಪಿ ಅವರ ಬಳಿ ಮೌಖಿಕ ದೂರು ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Sun, 27 July 25