‘ಡೆವಿಲ್’ ಸಿನಿಮಾ ಡಬ್ಬಿಂಗ್ ಮುಕ್ತಾಯ, ಪ್ರಚಾರವೊಂದೇ ಬಾಕಿ
Darshan Thoogudeepa: ದರ್ಶನ್ ತೂಗುದೀಪ ನಟನೆಯ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ದರ್ಶನ್ ಸೇರಿದಂತೆ ಎಲ್ಲ ಕಲಾವಿದರ ಡಬ್ಬಿಂಗ್ ಸಹ ಪೂರ್ಣಗೊಂಡಿದೆ. ಸಿನಿಮಾದ ಸಣ್ಣ-ಪುಟ್ಟ ತಾಂತ್ರಿಕ ಕೆಲಸಗಳಷ್ಟೆ ಬಾಕಿ ಇದ್ದು, ಸಿನಿಮಾದ ಪ್ರಚಾರ ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಿಸಬೇಕಿದೆ.

ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮತ್ತು ಡಬ್ಬಿಂಗ್ ಎಲ್ಲವೂ ಮುಗಿದಿದೆ. ಸಿನಿಮಾ ಬಿಡುಗಡೆಗೆ ಬೇಕಾಗಿರುವ ಬಹುತೇಕ ಎಲ್ಲವೂ ಮುಕ್ತಾಯವಾಗಿದ್ದು, ಕೊನೆಯ ಹಂತದ ಎಡಿಟಿಂಗ್, ಟ್ರಿಮ್ಮಿಂಗ್, ಕಲರ್ ಗ್ರೇಡಿಂಗ್ ಮಾತ್ರವೇ ಬಾಕಿ ಇದೆ ಎನ್ನಲಾಗುತ್ತಿದೆ. ನಟ ದರ್ಶನ್ ಸೇರಿದಂತೆ ಸಿನಿಮಾನಲ್ಲಿ ನಟಿಸಿರುವ ಎಲ್ಲ ಕಲಾವಿದರೂ ಡಬ್ಬಿಂಗ್ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಸಿನಿಮಾ ಹಾಡೊಂದರ ಚಿತ್ರೀಕರಣಕ್ಕಾಗಿ ಇತ್ತೀಚೆಗಷ್ಟೆ ನಟ ದರ್ಶನ್, ನಿರ್ದೇಶಕ ಪ್ರಕಾಶ್ ಅವರುಗಳು ಥಾಯ್ಲೆಂಡ್ಗೆ ತೆರಳಿದ್ದರು. ಥಾಯ್ಲೆಂಡ್ನಲ್ಲಿ ಸುಮಾರು ಒಂದು ವಾರ ಚಿತ್ರೀಕರಣ ಮುಗಿಸಿದ ಬಳಿಕ ಚಿತ್ರತಂಡ ಬೆಂಗಳೂರಿಗೆ ಇತ್ತೀಚೆಗಷ್ಟೆ ವಾಪಸ್ಸಾಗಿತ್ತು. ನಟ ದರ್ಶನ್, ಚಿತ್ರೀಕರಣ ಮುಗಿಸಿದ ಬಳಿಕ ಕೆಲ ದಿನಗಳ ಕಾಲ ಅಲ್ಲೇ ತಂಗಿದ್ದು ವಿಶ್ರಾಂತಿ ಪಡೆದು ಮರಳಿದ್ದಾರೆ.
‘ಡೆವಿಲ್’ ಸಿನಿಮಾದ ಬಹುತೇಕ ಎಲ್ಲ ಕಾರ್ಯವೂ ಮುಗಿದಿದ್ದು ಕೆಲ ಸಣ್ಣ-ಪುಟ್ಟ ತಾಂತ್ರಿಕ ಕೆಲಸಗಳಷ್ಟೆ ಬಾಕಿ ಇದೆ. ಅವುಗಳ ಬಳಿಕ ಸಿನಿಮಾದ ಪ್ರಚಾರ ಮತ್ತು ಸೆನ್ಸಾರ್ ಮಾತ್ರವೇ ಬಾಕಿ ಉಳಿಯಲಿದೆ. ಈ ಸಿನಿಮಾದ ಪ್ರಚಾರ ಭಾರಿ ಕುತೂಹಲ ಮೂಡಿಸಿದೆ. ರೇಣುಕಾ ಸ್ವಾಮಿ ಪ್ರಕರಣದ ಬಳಿಕ ಮಾಧ್ಯಮಗಳು, ಬಹಿರಂಗ ಕಾರ್ಯಕ್ರಮಗಳಿಂದ ದೂರಾಗಿರುವ ನಟ ದರ್ಶನ್, ‘ಡೆವಿಲ್’ ಸಿನಿಮಾದ ಪ್ರಚಾರ ಹೇಗೆ ಮಾಡಲಿದ್ದಾರೆ. ಆ ಸಂದರ್ಭದಲ್ಲಿ ರೇಣುಕಾ ಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಲಿದ್ದಾರಾ ಎಂಬುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:‘ಡೆವಿಲ್’ ಸಿನಿಮಾ ಶೂಟ್ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
‘ಡೆವಿಲ್’ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ರಚನಾ ರೈ ನಾಯಕಿ. ತುಳಸಿ, ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು , ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿದೆ.
ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ಗೆ ಈಗ ಮತ್ತೆ ಟೆನ್ಷನ್ ಶುರುವಾಗಿದೆ. ಪ್ರಕರಣದಲ್ಲಿ ದರ್ಶನ್ಗೆ ಜಾಮೀನು ರದ್ದು ಪಡಿಸುವಂತೆ ಪೊಲೀಸ್ ಇಲಾಖೆ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು, ಅರ್ಜಿ ವಿಚಾರಣೆ ಕಳೆದ ಕೆಲ ದಿನಗಳಿಂದ ನಡೆದಿದ್ದು, ದರ್ಶನ್ ಹಾಗೂ ಸಹಚರರಿಗೆ ಹೈಕೋರ್ಟ್ ಜಾಮೀನು ನೀಡಿರುವುದರ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ದರ್ಶನ್ ಜಾಮೀನು ರದ್ದಾಗುವ ಸಂಭವವ ಸಹ ಇದ್ದು, ಸೋಮವಾರದಂದು ಎಲ್ಲದಕ್ಕೂ ಉತ್ತರ ಸಿಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




