Su From So Collection: ಕೋಟಿ ಕೋಟಿ ಬಾಚಿಕೊಂಡು ದಾಖಲೆ ಮಾಡುತ್ತಿದೆ ‘ಸು ಫ್ರಮ್ ಸೋ’ ಸಿನಿಮಾ
ಎಲ್ಲೆಲ್ಲೂ ‘ಸು ಫ್ರಮ್ ಸೋ’ ಸಿನಿಮಾದ ಬಗ್ಗೆಯೇ ಮಾತುಗಳು ಕೇಳಿಬರುತ್ತಿವೆ. ಅಷ್ಟರಮಟ್ಟಿಗೆ ಈ ಚಿತ್ರ ಮೋಡಿ ಮಾಡಿದೆ. ಮೊದಲ 2 ದಿನಗಳಲ್ಲಿ ಈ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಆಗಿದ್ದು, ಚಿತ್ರತಂಡಕ್ಕೆ ಸಂತಸ ತಂದಿದೆ. 3ನೇ ದಿನವಂತೂ ಶೋಗಳ ಸಂಖ್ಯೆ ಜಾಸ್ತಿ ಮಾಡಲಾಗಿದೆ. ಎಲ್ಲ ಶೋಗಳು ಕೂಡ ಹೌಸ್ಫುಲ್ ಪ್ರದರ್ಶನ ಕಾಣುತ್ತಿವೆ.

ಬಹುತೇಕ ಹೊಸ ಕಲಾವಿದರು ನಟಿಸಿರುವ ‘ಸು ಫ್ರಮ್ ಸೋ’ (Su From So) ಸಿನಿಮಾ ಈ ಪರಿ ಯಶಸ್ಸು ಕಾಣುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹಾರರ್ ಕಾಮಿಡಿ ಕಥಾಹಂದರ ಇರುವ ಈ ಚಿತ್ರಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಎಲ್ಲರೂ ಉತ್ತಮ ವಿಮರ್ಶೆ ನೀಡುತ್ತಿದ್ದಾರೆ. ಪರಿಣಾಮವಾಗಿ ‘ಸು ಫ್ರಮ್ ಸೋ’ ಸಿನಿಮಾದ ಕಲೆಕ್ಷನ್ (Su From So Box Office Collection) ಹೆಚ್ಚಾಗುತ್ತಲೇ ಇದೆ. ಪ್ರತಿ ದಿನವೂ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ. 3ನೇ ದಿನವಾದ ಭಾನುವಾರ (ಜುಲೈ 27) ಕೂಡ ಎಲ್ಲ ಶೋಗಳು ಹೌಸ್ಫುಲ್ ಆಗಿವೆ.
ಜೆ.ಪಿ. ತುಮಿನಾಡು ಅವರು ‘ಸು ಫ್ರಮ್ ಸೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. sacnilk ವರದಿ ಪ್ರಕಾರ, ಈ ಸಿನಿಮಾಗೆ ಮೊದಲ ದಿನ 88 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. 2ನೇ ದಿನವಾದ ಶನಿವಾರ ಮ್ಯಾಜಿಕ್ ಆಗಿದೆ. ಏಕಾಏಕಿ ಈ ಸಿನಿಮಾದ ಕಲೆಕ್ಷನ್ ಹೆಚ್ಚಾಗಿದೆ. 2ನೇ ದಿನ 2.44 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಲ್ಲಿಗೆ, ಒಟ್ಟು ಕಲೆಕ್ಷನ್ 3.32 ಕೋಟಿ ರೂಪಾಯಿ ಆಗಿದೆ.
ಇದು ಇನ್ನೂ ಆರಂಭ ಮಾತ್ರ. ‘ಸು ಫ್ರಮ್ ಸೋ’ ಸಿನಿಮಾಗೆ ಜನರ ಬಾಯಿ ಮಾತಿನ ಪ್ರಚಾರ ಸಿಗುತ್ತಿದೆ. ಆ ಕಾರಣದಿಂದ ಸಿನಿಮಾ ನೋಡಲು ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಭಾನುವಾರ ಶೋಗಳ ಸಂಖ್ಯೆ ಜಾಸ್ತಿ ಮಾಡಲಾಗಿದೆ. ಏಕಪರದೆ ಚಿತ್ರಮಂದಿರಗಳು ಬೆಳಗ್ಗೆ 8 ಗಂಟೆಗೆ ಶೋ ಆರಂಭಿಸಿವೆ. ಅನೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಬೆಳಗಿನ 6.30ಕ್ಕೆ ಶೋ ಶುರು ಆಗಿದೆ.
ಶೋ ಜಾಸ್ತಿ ಆಗುತ್ತಿರುವುದರಿಂದ ‘ಸು ಫ್ರಮ್ ಸೋ’ ಸಿನಿಮಾದ ಕಲೆಕ್ಷನ್ ಕೂಡ ಜಾಸ್ತಿ ಆಗುತ್ತಿದೆ. ಕರ್ನಾಟಕದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. 3ನೇ ದಿನ ಅಂದಾಜು 4 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ. ಮೊದಲ ವೀಕೆಂಡ್ನಲ್ಲಿ ಈ ಸಿನಿಮಾ 7ರಿಂದ 8 ಕೋಟಿ ರೂಪಾಯಿ ಚಾಚಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಬಗ್ಗೆ ನಿರ್ದೇಶಕ ಹೇಳಿದ್ದೇನು?
‘ಸು ಫ್ರಮ್ ಸೋ’ ಬಗ್ಗೆ ಅಕ್ಕಪಕ್ಕದ ರಾಜ್ಯಗಳ ಮಂದಿ ಕೂಡ ಮಾತನಾಡಲು ಆರಂಭಿಸಿದ್ದಾರೆ. ಆಗಸ್ಟ್ 1ರಿಂದ ಈ ಸಿನಿಮಾ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ದುಲ್ಕರ್ ಸಲ್ಮಾನ್ ಅವರು ಈ ಚಿತ್ರವನ್ನು ಕೇರಳದಲ್ಲಿ ವಿತರಣೆ ಮಾಡಲಿದ್ದಾರೆ. ತೆಲುಗಿನ ‘ಹರಿ ಹರ ವೀರ ಮಲ್ಲು’ ಸಿನಿಮಾಗೆ ಪೈಪೋಟಿ ನೀಡಿ ‘ಸು ಫ್ರಮ್ ಸೋ’ ಸಿನಿಮಾ ಅಬ್ಬರಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








