‘ಸು ಫ್ರಮ್ ಸೋ’ ನಿರ್ದೇಶಕ ಜೆಪಿ ತುಮ್ಮಿನಾಡ್ ಯಾರು? ಹಿನ್ನೆಲೆ ಏನು?
Su From So movie: ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿರುವ ‘ಸು ಫ್ರಂ ಸೊ’ ಸಿನಿಮಾ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸೂಪರ್ ಹಿಟ್ ಆಗಿದೆ. ಸಿನಿಮಾದ ಟಿಕೆಟ್ಗಳು ಪ್ರತಿ ಗಂಟೆಗೆ ಸಾವಿರಗಳ ಲೆಕ್ಕದಲ್ಲಿ ಮುಂಗಡವಾಗಿ ಬುಕಿಂಗ್ ಆಗುತ್ತಿವೆ. ಇಂಥಹಾ ಒಂದು ಸಿನಿಮಾ ನಿರ್ದೇಶನ ಮಾಡಿರುವುದು ಜೆಪಿ ತುಮ್ಮಿನಾಡ್, ಇವರ್ಯಾರು? ಹಿನ್ನೆಲೆ ಏನು?

ಕನ್ನಡಿಗರು ಕನ್ನಡ ಭಾಷೆಯ ಸಿನಿಮಾ ನೋಡುತ್ತಿಲ್ಲ ಎಂದು ಚಿತ್ರರಂಗದ ಕೆಲವರು ದೂರುತ್ತಿರುವ ಹೊತ್ತಿನಲ್ಲಿಯೇ ‘ಸು ಫ್ರಮ್ ಸೋ’ ಹೆಸರಿನ ಕನ್ನಡ ಸಿನಿಮಾ ಒಂದನ್ನು ಕನ್ನಡ ಸಿನಿಮಾ ಪ್ರೇಮಿಗಳು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಸಿನಿಮಾ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಅನ್ನು ಸೂಪರ್ ಹಿಟ್ ಮಾಡಿದ್ದಾರೆ. ಪ್ರತಿ ಗಂಟೆಗೂ ಸಿನಿಮಾದ ಸಾವಿರಾರು ಟಿಕೆಟ್ಗಳು ಮುಂಗಡವಾಗಿ ಬುಕ್ ಆಗುತ್ತಿವೆ. ಶೋಗಳ ಸಂಖ್ಯೆ ನೂರರ ಸಂಖ್ಯೆಯಲ್ಲಿ ಏರಿಕೆಯಾಗುತ್ತಾ ಹೋಗುತ್ತಿದೆ.
ಯಾವುದೇ ಸ್ಟಾರ್ಗಳು ಇಲ್ಲದ ಕೇವಲ ಕತೆ, ಚಿತ್ರಕತೆ, ಸಂಭಾಷಣೆಯೇ ಸ್ಟಾರ್ ಅನ್ನಾಗಿಟ್ಟುಕೊಂಡು ಅಪ್ಪಟ ಸಿನಿಮಾ ನೀಡಿದ್ದಾರೆ ನಿರ್ದೇಶಕ ಜೆಪಿ ತುಮ್ಮಿನಾಡ್. ಅಂದಹಾಗೆ ಜೆಪಿ ತುಮ್ಮಿನಾಡ್ ಅವರಿಗೆ ಇದು ಮೊದಲ ಸಿನಿಮಾ. ಅವರ ಪ್ರತಿಭೆ ಮೇಲೆ ನಂಬಿಕೆ ಇಟ್ಟು ಅವರ ಕತೆಗೆ ಬಂಡವಾಳ ತೊಡಗಿಸಿರುವುದು ನಿರ್ದೇಶಕ, ನಿರ್ಮಾಪಕ ರಾಜ್ ಬಿ ಶೆಟ್ಟಿ. ಮೊದಲ ಸಿನಿಮಾದಲ್ಲಿಯೇ ಅವರು ಸೂಪರ್ ಹಿಟ್ ನೀಡಿದ್ದಾರೆ. ಈ ಸಿನಿಮಾ ಮುಂದೆ ಹೋಗಿ ಬ್ಲಾಕ್ ಬಸ್ಟರ್ ಆದರೂ ಅಚ್ಚರಿಯಿಲ್ಲ.
ಜೆಪಿ ತುಮ್ಮಿನಾಡ್ ಅವರು ಕರಾವಳಿ ಮೂಲದ ಪ್ರತಿಭೆ. ಸಿನಿಮಾ ರಂಗಕ್ಕೆ ಕಾಲಿಡುವ ಮುಂಚೆ ಸುಮಾರು 14 ವರ್ಷ ಅವರು ರಂಗಭೂಮಿಯಲ್ಲಿದ್ದರು. ಅಲ್ಲಿ ನಟನೆ ಜೊತೆಗೆ ನಾಟಕ ರಚನೆ, ನಿರ್ದೇಶನವೂ ಮಾಡಲೇ ಬೇಕಿತ್ತು. ಹಾಗಾಗಿ ಬಹಳ ಮುಂಚಿನಿಂದಲೇ ಅವರಿಗೆ ಬರೆಯುವ ಕತೆ ಕರಗತ. ಅದರಲ್ಲೂ ಕರಾವಳಿ ಕಡೆ ಹಾಸ್ಯ ನಾಟಕಗಳಿಗೆ ಬೇಡಿಕೆ ಹೆಚ್ಚು ಹಾಗಾಗಿ ಜೆಪಿ ತುಮ್ಮಿನಾಡ್ ಅವರು ಹಾಸ್ಯ ನಾಟಕಗಳನ್ನು ಆಗ ಹೆಚ್ಚಾಗಿ ಬರೆಯುತ್ತಿದ್ದರಂತೆ.
ತುಮ್ಮಿನಾಡ್ ಅವರ ನಾಟಕಗಳನ್ನು ನೋಡಿದರು ಇದನ್ನು ಸಿನಿಮಾ ಮಾಡಬಹುದು ಎಂದು ಪ್ರೇರೇಪಿಸುತ್ತಿದ್ದರಂತೆ. ಅದೇ ಕಾರಣಕ್ಕೆ ತುಮ್ಮಿನಾಡ್ ಅವರು ಬಹಳ ವರ್ಷಗಳ ಮುಂಚೆಯೇ ಕೆಲವು ಕತೆಗಳನ್ನು ಸಿನಿಮಾಗಳಿಗೆಂದು ಬರೆದಿಟ್ಟುಕೊಂಡಿದ್ದರಂತೆ. ಆದರೆ ಅವರು ರಾಜ್ ಬಿ ಶೆಟ್ಟಿ ಅವರನ್ನು ಭೇಟಿ ಆದ ಬಳಿಕ ಸಿನಿಮಾ ಕತೆ ಎಂದರೆ ಏನು? ಚಿತ್ರಕತೆ ಎಂದರೇನು? ಎಂಬಿತ್ಯಾದಿ ಅರ್ಥವಾಗಿ ಆ ಬಳಿಕ ಮತ್ತೆ ಹೊಸ ಆಲೋಚನೆಗಳ ಮೂಲಕ ಬರೆಯಲು ಆರಂಭಿಸಿದರಂತೆ.
ಇದನ್ನೂ ಓದಿ:ಕಡಿಮೆ ಶೋ ಕೊಟ್ಟರೂ ‘ಸು ಫ್ರಮ್ ಸೋ’ ಆರ್ಭಟದ ಕಲೆಕ್ಷನ್; ಬಾಕ್ಸ್ ಆಫೀಸ್ ಉಡೀಸ್
ಜೆಪಿ ತುಮ್ಮಿನಾಡ್ ಅವರು ‘ಸು ಫ್ರಮ್ ಸೋ’ ಸಿನಿಮಾ ಮಾಡುವ ಮುಂಚೆ ಕೆಲವಾರು ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅವರ ತಂಡದಲ್ಲೇ ಇದ್ದ ತುಮ್ಮಿನಾಡ್, ‘ಗರುಡ ಗಮನ ವೃಷಭ ವಾಹನ’, ‘ಸಪ್ತ ಸಾಗರದಾಚೆ ಎಲ್ಲೊ’, ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಸಿನಿಮಾಗಳಲ್ಲಿ ತೆರೆಯ ಹಿಂದೆ ಕೆಲಸ ಮಾಡಿದ್ದಾರೆ. ಜೊತೆಗೆ ಈ ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೊ: ಸೈಡ್ ಬಿ’ ಸಿನಿಮಾನಲ್ಲಿ ನಾಯಕಿ ರುಕ್ಮಿಣಿಯ ಪತಿಯ ಪಾತ್ರದಲ್ಲಿ ತುಮ್ಮಿನಾಡ್ ಕಾಣಿಸಿಕೊಂಡಿದ್ದಾರೆ.
‘ಸು ಫ್ರಂ ಸೋ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಹಲವು ಕಲಾವಿದರಗಳೊಟ್ಟಿಗೆ ಜೆಪಿ ತುಮ್ಮಿನಾಡ್ ಅವರು ರಂಗಭೂಮಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರಂತೆ. ಖ್ಯಾತ ನಟ ಪ್ರಕಾಶ್ ತುಮ್ಮಿನಾಡ್ ಹಾಗೂ ಜೆಪಿ ತುಮ್ಮಿನಾಡ್ ಒಂದೇ ಊರಿನವರು. ಜೆಪಿ ತುಮ್ಮಿನಾಡ್ ಅವರನ್ನು ಸಿನಿಮಾಕ್ಕೆ ಕರೆದುಕೊಂಡು ಬಂದಿದ್ದು ಪ್ರಕಾಶ್ ತುಮ್ಮಿನಾಡ್ ಅವರೇ ಅಂತೆ.
ಇನ್ನು ‘ಸು ಫ್ರಂ ಸೋ’ ಸಿನಿಮಾಕ್ಕೆ ಬಂದರೆ. ಈ ಸಿನಿಮಾದ ಕತೆಯನ್ನು 2019 ರಲ್ಲಿಯೇ ಜೆಪಿ ತುಮ್ಮಿನಾಡ್ ಬರೆದಿದ್ದರಂತೆ. ಆಗಲೇ ನಿರ್ಮಾಣ ಮಾಡುವ ಆಲೋಚನೆಯೂ ಇತ್ತಂತೆ. ಆದರೆ ಕೋವಿಡ್ ಹಾಗೂ ಬೇರೆ ಸಿನಿಮಾಗಳ ಕಾರಣಕ್ಕೆ ಸಿನಿಮಾ ನಿರ್ಮಾಣ ಆಗಿರಲಿಲ್ಲ. ಆದರೆ ಈ ಆರು ವರ್ಷಗಳಲ್ಲಿ ಸಿಕ್ಕ ಅನುಭವದಿಂದಾಗಿ ಸಿನಿಮಾ ಇಷ್ಟು ಉತ್ತಮವಾಗಿ ಮೂಡಿ ಬಂದಿದೆ ಎಂದಿದ್ದಾರೆ ತುಮ್ಮಿನಾಡ್. ಈ ಸಿನಿಮಾವನ್ನು ಕೇವಲ 51 ದಿನಗಳಲ್ಲಿ ಚಿತ್ರೀಕರಣ ಮುಗಿಸಿದ್ದಾರಂತೆ ಇವರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ